ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ
Money tips for securing the future: ಹಣವಂತರಾಗಬೇಕೆನ್ನುವುದು ಎಲ್ಲರ ಬಯಕೆ. ಆದರೆ, ಹಣವಂತರಾಗುವ ದಾರಿ ಸುಲಭವೂ ಹೌದು ಕಷ್ಟವೂ ಹೌದು. ಕೂಡಿಟ್ಟ ಆಸ್ತಿ ಕರಗಿಹೋಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಒಂದು ಸಣ್ಣ ತಪ್ಪು ಜನರನ್ನು ಶ್ರೀಮಂತಿಕೆಯಿಂದ ಕಷ್ಟಕಾರ್ಪಣ್ಯಕ್ಕೆ ಇಳಿಸಬಹುದು. ಜೀವನದಲ್ಲಿ ನಾವು ಸಾಮಾನ್ಯವಾಗಿ ಮಾಡುವ ಕೆಲ ಹಣಕಾಸು ತಪ್ಪುಗಳ ಬಗ್ಗೆ ಮಾಹಿತಿ.

ಮಧ್ಯಮ ವರ್ಗದ ಜನರು ಶ್ರೀಮಂತಿಕೆ (wealthy) ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ. ಖರ್ಚು ಮಾಡಲು ನಾನಾ ಮಾರ್ಗಗಳು ತೆರೆದುಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಹಣ ಉಳಿಸುವುದು ಬಹಳ ಕಷ್ಟದ ಕೆಲಸ. ಹಣದ ವಿಚಾರದಲ್ಲಿ ಎಸಗುವ ಒಂದು ತಪ್ಪು ಹಲವು ಸಂಪತ್ತು ಗಳಿಕೆಯನ್ನು ನಶಿಸುವಂತೆ ಮಾಡಬಲ್ಲುದು. ಮಧ್ಯಮ ವರ್ಗದ ಜನರು ಹಣವಂತರಾಗಬೇಕೆಂದರೆ ಕೆಲ ತಪ್ಪುಗಳಿಂದ ದೂರ ಇರುವುದು ಲೇಸು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ಇತಿ ಮಿತಿ ಮೀರಿ ಹೋಗುವುದು…
ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ದೊಡ್ಡವರು ಹೇಳುತ್ತಾರೆ. ನಮ್ಮ ಆದಾಯದ ಮಿತಿಯೊಳಗೆ ಎಲ್ಲಾ ಖರ್ಚು ವೆಚ್ಚ, ಹೂಡಿಕೆಗಳು ಇರಬೇಕು. ತೀರಾ ಅಗತ್ಯ ಇಲ್ಲದ ಐಷಾರಾಮಿ ವಸ್ತುಗಳಿಂದ ದೂರವೇ ಇರಿ. ಮೌಲ್ಯ ಕಡಿಮೆ ಆಗುವ ಸರಕುಗಳಿಗೆ ಹಣ ಹಾಕುವ ಬದಲು, ಈಕ್ವಿಟಿ, ಬಾಂಡ್, ಮ್ಯೂಚುವಲ್ ಫಂಡ್, ಗೋಲ್ಡ್, ಎಫ್ಡಿ ಇತ್ಯಾದಿ ಮೌಲ್ಯವರ್ಧನೆಯ ಆಸ್ತಿಗಳಲ್ಲಿ ಹಣ ಹೂಡಿಕೆ ಮಾಡಿ.
ಇದನ್ನೂ ಓದಿ: ಪಿಪಿಎಫ್ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ
ಸಾಲ ಮಾಡಿಯಾದ್ರೂ ತುಪ್ಪ ತಿನ್ನು…
ಇರುವುದೊಂದೇ ಜೀವನ. ಇದ್ದಷ್ಟು ದಿನ ಠಾಕು ಠೀಕಾಗಿ ಬದುಕುತ್ತೇನೆ ಎಂದುಕೊಂಡು ಸಾಲ ಸೋಲ ಮಾಡುವುದು ಬದುಕಲ್ಲ. ಅದು ಭವಿಷ್ಯದ ನರಕಕ್ಕೆ ಮಾಡುವ ದಾರಿ. ಅದರಲ್ಲೂ ಕ್ರೆಡಿಟ್ ಕಾರ್ಡ್ ಮೋಡಿಗೆ ಬಿದ್ದರೆ ಕಷ್ಟ. ಬೇಡದ ಖರ್ಚುಗಳಿಗೆ ಪುಸಲಾಯಿಸುತ್ತೆ ಈ ಕ್ರೆಡಿಟ್ ಕಾರ್ಡ್. ಹಾಗೆಯೇ, ಪ್ರೀಪೇಡ್ ಲೋನ್ ಸಿಗುತ್ತೆ ಎಂದು ಪರ್ಸನಲ್ ಲೋನ್ ಪಡೆಯುವ ಚಾಳಿಯೂ ಹಲವರಿಗೆ ಇರುತ್ತದೆ. ಇವೆಲ್ಲವೂ ಅನಗತ್ಯ ವೆಚ್ಚಗಳಿಗೆ ದಾರಿ ಮಾಡಿಕೊಡುವ ಸಂಗತಿಗಳು, ಹುಷಾರಾಗಿರಿ.
ಆರೋಗ್ಯ ಚೆನ್ನಾಗಿದ್ದೇನೆ, ನನಗ್ಯಾಕೆ ಇನ್ಷೂರೆನ್ಸ್
ಗಟ್ಟಿ ಮುಟ್ಟಾಗಿದ್ದೇನೆ. ಈಗ್ಯಾಕೆ ನನಗೆ ಇನ್ಷೂರೆನ್ಸ್. ವಯಸ್ಸಾದಾಗ ನೋಡಿಕೊಳ್ಳೋಣ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಪ್ರತೀ ವ್ಯಕ್ತಿಗೂ ಲೈಫ್ ಇನ್ಷೂರೆನ್ಸ್, ಹೆಲ್ತ್ ಇನ್ಷೂರೆನ್ಸ್ ಇರಬೇಕು. ಸಣ್ಣ ವಯಸ್ಸಲ್ಲೇ ಹೆಲ್ತ್ ಇನ್ಷೂರೆನ್ಸ್ ಮಾಡಿಸಿದಾಗ ಪ್ರೀಮಿಯಮ್ ಕಡಿಮೆ ಇರುತ್ತದೆ. ಆರೋಗ್ಯ ಯಾವ ವಯಸ್ಸಲ್ಲಿ ಹೇಗೆ ಏರುಪೇರಾಗುತ್ತೆ ಯಾರಿಗೂ ಗೊತ್ತಿರುವುದಿಲ್ಲ.
ಇದನ್ನೂ ಓದಿ: ಇಪಿಎಫ್, ಎನ್ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್ಗೆ ಯಾವುದು ಉತ್ತಮ?
ಒಂದೇ ಕಡೆ ಹೂಡಿಕೆ ಮಾಡುವುದು
ಹೂಡಿಕೆ ಮಾಡುವುದು ಒಳ್ಳೆಯ ನಿರ್ಧಾರ. ಆದರೆ, ಬಹಳ ಜನರು ತಮ್ಮಲ್ಲಿರುವ ಎಲ್ಲಾ ಹಣವನ್ನೂ ಒಂದೇ ಕಡೆ ಇರಿಸಿಬಿಡುವುದುಂಟು. ಉದಾಹರಣೆಗೆ, ಎಲ್ಲವನ್ನೂ ಬ್ಯಾಂಕ್ ಡೆಪಾಸಿಟ್ಗೆ ಹಾಕುವುದು, ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹಾಕುವುದು, ಅಥವಾ ರಿಯಲ್ ಎಸ್ಟೇಟ್ಗಳಲ್ಲಿ ಹಾಕುವುದು ಹೀಗೆ. ಇದು ತಪ್ಪು ಕ್ರಮ. ಹೂಡಿಕೆಯಲ್ಲಿ ವಿಸ್ತಾರ ಮತ್ತು ವೈವಿಧ್ಯತೆ ಇರಬೇಕು. ವಿವಿಧ ಅಸೆಟ್ ಕ್ಲಾಸ್ಗಳಲ್ಲಿ ಹೂಡಿಕೆ ಇರಬೇಕು. ಒಂದು ಬಿದ್ದರೆ ಮತ್ತೊಂದು ನಿಮ್ಮ ಕೈಹಿಡಿಯಬಹುದು. ಮಾರುಕಟ್ಟೆ ಕುಸಿದಾಗ ಠೇವಣಿಗಳು, ಬಾಂಡ್ಗಳು ಕೈಹಿಡಿಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




