Mortgage vs Home Loan: ಮನೆ ಕಟ್ಟಲು ಅಥವಾ ಕೊಳ್ಳಲು ಮಾರ್ಟ್​ಗೇಜ್ ಲೋನ್​ಗೆ ಅರ್ಜಿ ಸಲ್ಲಿಸುವುದು ಬೇಡ; ಏನು ಕಾರಣ?

|

Updated on: Mar 20, 2023 | 5:46 PM

Difference Between Mortgage Loan and Home Loan: ಗೃಹ ಸಾಲದ ಹಣವನ್ನು ನಾವು ಮನೆ ಖರೀದಿಸಲು ಅಥವಾ ಮನೆ ಕಟ್ಟಲು ಮಾತ್ರ ಬಳಸಬಹುದು. ಆದರೆ, ಅಡಮಾನ ಸಾಲದಲ್ಲಿ ನಾವು ಬೇರೆ ಇತರ ಉದ್ದೇಶಗಳಿಗೂ ಬಳಕೆ ಮಾಡಬಹುದು. ಇವೆರಡು ಸಾಲಗಳ ಬಡ್ಡಿ ದರ, ಮರುಪಾವತಿ ಅವಧಿ ಎಲ್ಲವೂ ಭಿನ್ನವಾಗಿವೆ. ಇದರ ಬಗ್ಗೆ ಒಂದು ರಿಪೋರ್ಟ್....

Mortgage vs Home Loan: ಮನೆ ಕಟ್ಟಲು ಅಥವಾ ಕೊಳ್ಳಲು ಮಾರ್ಟ್​ಗೇಜ್ ಲೋನ್​ಗೆ ಅರ್ಜಿ ಸಲ್ಲಿಸುವುದು ಬೇಡ; ಏನು ಕಾರಣ?
ಗೃಹ ಸಾಲ
Follow us on

ನಾವು ಪಡೆಯುವ ಸಾಲಗಳಲ್ಲಿ ಹಲವು ವಿಧಗಳುಂಟು. ಸೆಕ್ಯೂರ್ಡ್ ಲೋನ್, ಅನ್​ಸೆಕ್ಯೂರ್ಡ್ ಲೋನ್ ಎಂದು ಎರಡು ವರ್ಗೀಕರಣ ಮಾಡಬಹುದು. ಅನ್​ಸೆಕ್ಯೂರ್ಡ್ ಲೋನ್ (Unsecured Loan) ಅಥವಾ ಅಭದ್ರತಾ ಸಾಲ ಎನ್ನುವುದು ವೈಯಕ್ತಿಕ ಸಾಲ (Personal Loan), ಇನ್ಸ್​ಟೆಂಟ್ ಲೋನ್ ಇತ್ಯಾದಿ ಇವೆ. ಇವು ವ್ಯಕ್ತಿಯ ಆದಾಯ ಮತ್ತು ಸಾಲದ ಇತಿಹಾಸ ಪರಿಗಣಿಸಿ ಯಾವುದೇ ಅಡಮಾನ ಪಡೆಯದೇ ಬ್ಯಾಂಕ್ ನೀಡುವ ಸಾಲವಾಗಿರುತ್ತದೆ. ಇನ್ನು, ಸೆಕ್ಯೂರ್ಡ್ ಲೋನ್ (Secured Loan) ಅಥವಾ ಭದ್ರತಾ ಸಾಲದಲ್ಲಿ ನಾವು ಯಾವುದಾದರೂ ಆಸ್ತಿಗಳನ್ನು ಅಡಮಾನವಾಗಿ ಇಟ್ಟು ಪಡೆಯುವ ಸಾಲವಾಗಿದೆ.

ನೀವು ಮನೆ ಕಟ್ಟಲು ಅಥವಾ ಮನೆ ಖರೀದಿಸುತ್ತಿದ್ದರೆ ಅಡಮಾನ ಸಾಲಕ್ಕೆ (Mortgage Loan) ಅರ್ಜಿ ಸಲ್ಲಿಸದಿರಿ. ಗೃಹ ಸಾಲಕ್ಕೆಂದೇ ಅರ್ಜಿ ಸಲ್ಲಿಸುವುದು ಉತ್ತಮ. ಅದಕ್ಕೆ ಕಾರಣಗಳೂ ಇವೆ. ಬಹಳ ಮಂದಿ ಗೃಹ ಸಾಲವನ್ನು ಅಡಮಾನ ಸಾಲವೆಂಬಂತೆ ಕಾಣುತ್ತಾರೆ. ಗೃಹ ಸಾಲವು (Home Loan) ಅಡಮಾನ ಸಾಲದ ಒಂದು ವಿಧ ಅಷ್ಟೇ. ಆದರೆ, ಎರಡೂ ಭಿನ್ನ. ಎರಡಕ್ಕೂ ಕೂಡ ಬಡ್ಡಿ ದರದಲ್ಲಿ ವ್ಯತ್ಯಾಸಗಳಿರುತ್ತವೆ. ಇವೆರಡು ಹೇಗೆ ಭಿನ್ನ ಎಂಬ ವಿವರ ಇಲ್ಲಿದೆ.

ಅಡಮಾನ ಸಾಲ (Mortgage Loan) ಎಂದರೆ ಏನು?

ಆಗಲೇ ಹೇಳಿದಂತೆ ಅಡಮಾನ ಸಾಲ ಎನ್ನುವುದು ನಾವು ಏನನ್ನಾದರೂ ಭದ್ರತೆಯಾಗಿ ಇಟ್ಟು ಪಡೆಯುವ ಸಾಲವಾಗಿರುತ್ತದೆ. ಇಲ್ಲಿ ನಾವು ಪಡೆಯುವ ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಅಡಮಾನವಾಗಿ ಇಡಬೇಕಾಗಬಹುದು. ಇಲ್ಲಿ ಆಸ್ತಿ ಯಾವುದಾದರೂ ಆಗಬಹುದು. ಮನೆಯ ಪತ್ರ ಆಗಬಹುದು, ಜಮೀನು ದಾಖಲೆಯಾಗಬಹುದು, ಅಥವಾ ನಮ್ಮ ವಿವಿಧ ಹೂಡಿಕೆ ಯೋಜನೆಗಳ ಪತ್ರವಾಗಬಹುದು. ಇವು ಸಾಲ ತೀರಿಸಲು ಸಾಲಗಾರ ಒದಗಿಸುವ ಗ್ಯಾರಂಟಿ ಆಗಿರುತ್ತದೆ. ಸಾಲ ನೀಡುವ ಸಂಸ್ಥೆ ಮತ್ತು ಸಾಲಗಾರನ ಮಧ್ಯೆ ಈ ಆಸ್ತಿಗಳನ್ನು ಅಡಮಾನ ಇಟ್ಟಿರುವ ಒಪ್ಪಂದ ಆಗುತ್ತದೆ.

ಇದನ್ನೂ ಓದಿ: Black Money: ಸ್ವಿಸ್ ಬ್ಯಾಂಕಲ್ಲಿ ಕಪ್ಪು ಹಣ ಇಟ್ಟು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರಾ ಧನಿಕರು?

ಅಡಮಾನ ಸಾಲದಲ್ಲಿ ವಿವಿಧ ಬಗೆಗಳಿರುತ್ತವೆ. ಸಿಂಪಲ್ ಮಾರ್ಟ್​ಗೇಜ್, ಯೂಜೀಫ್ರಕ್ಚರಿ ಮಾರ್ಟ್​ಗೇಜ್, ಇಂಗ್ಲೀಷ್ ಮಾರ್ಟ್​ಗೇಜ್, ಸಬ್ ಮಾರ್ಟ್​ಗೇಜ್ ಎಂದಿರುತ್ತವೆ. ಆಸ್ತಿಪತ್ರ ಅಡಮಾನ ಇಟ್ಟು ಪಡೆಯುವ ಮಾರ್ಟ್​ಗೇಜ್ ಲೋನ್​ನ ಹಣವನ್ನು ಮನೆ ಖರೀದಿಸಲು ಅಥವಾ ಮನೆ ಕಟ್ಟಲು ಬಳಸಬಹುದು. ಅಥವಾ ಆಸ್ತಿಯ ರೀಫೈನಾನ್ಸ್​ಗೆ ಬಳಸಬಹುದು. ಅಥವಾ ಬೇರೆ ಯಾವುದಾದರೂ ವ್ಯವಹಾರಗಳಿಗೂ ಬಳಕೆ ಮಾಡಬಹುದು. ಈ ಅಡಮಾನ ಸಾಲದಲ್ಲಿ ಸಾಲ ಮರುಪಾವತಿ ಆಗುವವರೆಗೂ ಸಾಲಗಾರನ ಆಸ್ತಿಪತ್ರಗಳು ಹಣಕಾಸು ಸಂಸ್ಥೆಯ ಸುಪರ್ದಿಯಲ್ಲಿರುತ್ತವೆ.

ಗೃಹ ಸಾಲ ಎಂದರೇನು?

ಇದೂ ಕೂಡ ಒಂದು ರೀತಿಯಲ್ಲಿ ಅಡಮಾನ ಸಾಲವೇ ಆಗಿರುತ್ತದೆ. ನಾವು ಮನೆ ಖರೀದಿಸುವಾಗ ಪಡೆಯುವ ಸಾಲ ಇದಾಗಿರುತ್ತದೆ. ಅಥವಾ ನಿವೇಶನ ಖರೀದಿಸಿ ಅದರಲ್ಲಿ ಮನೆ ಕಟ್ಟಲೂ ನಾವು ಗೃಹ ಸಅಲ ಪಡೆಯಬಹುದು. ನಾವು ಖರೀದಿಸಿದ ಮನೆಯ ಅಥವಾ ನಿವೇಶನದ ಆಸ್ತಿಪತ್ರವನ್ನು ಅಡಮಾನವಾಗಿ ಇಡಲಾಗುತ್ತದೆ. ಇಲ್ಲಿ ಗೃಹ ಸಾಲ ಮರುಪಾವತಿಯ ಅವಧಿ ಕೆಲವೊಮ್ಮೆ 25 ವರ್ಷಗಳವರೆಗೂ ಹೋಗಬಹುದು.

ಗೃಹ ಸಾಲಕ್ಕೂ ಅಡಮಾನ ಸಾಲಕ್ಕೂ ಏನು ವ್ಯತ್ಯಾಸ?

  • ಗೃಹ ಸಾಲದ ಹಣವನ್ನು ನಾವು ಮನೆ ಖರೀದಿಸಲು ಅಥವಾ ಮನೆ ಕಟ್ಟಲು ಮಾತ್ರ ಬಳಸಬಹುದು. ಆದರೆ, ಅಡಮಾನ ಸಾಲದಲ್ಲಿ ನಾವು ಬೇರೆ ಇತರ ಉದ್ದೇಶಗಳಿಗೂ ಬಳಕೆ ಮಾಡಬಹುದು.
  • ಗೃಹ ಸಾಲಕ್ಕೆ ಕಡಿಮೆ ಬಡ್ಡಿ ದರ ಇರುತ್ತದೆ. ಗೃಹ ಸಾಲಕ್ಕಿಂತ ಅಡಮಾನ ಸಾಲ 1-3 ಪ್ರತಿಶತದಷ್ಟು ಬಡ್ಡಿ ಹೆಚ್ಚು ಹೊಂದಿರಬಹುದು.
  • ಗೃಹ ಸಾಲದಲ್ಲಿ ನಾವು ಅಡಮಾನ ಇಡುವ ಆಸ್ತಿಪತ್ರದ ಶೇ. 90ರಷ್ಟು ಮಾರುಕಟ್ಟೆ ಮೌಲ್ಯದಷ್ಟು ಹಣವು ಸಾಲವಾಗಿ ಪಡೆಯಬಹುದು. ಆದರೆ, ಅಡಮಾನ ಸಾಲದಲ್ಲಿ ಆಸ್ತಿ ಮೌಲ್ಯದ ಶೇ. 60-70ರಷ್ಟು ಭಾಗದ ಹಣವನ್ನು ಮಾತ್ರ ಸಾಲವಾಗಿ ಪಡೆಯಬಹುದು.
  • ಗೃಹ ಸಾಲ ಪಡೆಯುವಾಗ ನಾವು ಒಟ್ಟು ಸಾಲ ಮೊತ್ತದ ಶೇ. 1.5ರಷ್ಟು ಹಣವನ್ನು ಪ್ರೋಸಸಿಂಗ್ ಫೀಸ್ ಆಗಿ ಪಾವತಿಸಬೇಕಾಗಬಹುದು. ಆದರೆ, ಅಡಮಾನ ಸಾಲದಲ್ಲಿ ಪ್ರೋಸಸಿಂಗ್ ಶುಲ್ಕ ಸಾಮಾನ್ಯವಾಗಿ ಶೆ. 0.8-1.2ರಷ್ಟಿರುತ್ತದೆ.
  • ಗೃಹ ಸಾಲದಲ್ಲಿ ಮರುಪಾವತಿಗೆ ಸಾಮಾನ್ಯವಾಗಿ 15 ವರ್ಷ ಕಾಲಮಿತಿ ಇರುತ್ತದೆ. ಕೆಲ ಬ್ಯಾಂಕುಗಳು 25 ವರ್ಷದವರೆಗೆ ಇಎಂಐ ಕಟ್ಟುವ ಅವಕಾಶ ಕೊಡಬಹುದು. ಮಾರ್ಟ್​ಗೇಜ್ ಲೋನ್​ನಲ್ಲಿ 30 ವರ್ಷಗಳವರೆಗೂ ಸಾಲ ಮರುಪಾವತಿಗೆ ಅವಕಾಶ ಕೊಡಬಹುದು.

ಇಲ್ಲಿ ಗೃಹ ಸಾಲವಾಗಲೀ, ಅಡಮಾನ ಸಾಲವಾಗಲೀ ನಾವು ಸರಿಯಾದ ಸಮಯಕ್ಕೆ ಹಣ ಮರುಪಾವತಿ ಮಾಡದೇ ಇದ್ದಲ್ಲಿ ನಮ್ಮ ಆಸ್ತಿಪತ್ರಗಳ ಮೂಲಕ ಆಸ್ತಿ ಮುಟ್ಟುಗೋಲು ಹಾಕುವ ಹಕ್ಕು ಹಣಕಾಸು ಸಂಸ್ಥೆಗಳಿಗೆ ಇರುತ್ತದೆ. ಹಾಗೆಯೇ, ಅಡಮಾನ ಸಾಲ ಪಡೆಯುವಾಗ ಕೆಲ ಸಂದರ್ಭದಲ್ಲಿ ಬ್ಯಾಂಕುಗಳು ಅಧಿಕ ಬಡ್ಡಿ ವಿಧಿಸಬಹುದು. ನಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದಿದ್ದಾಗ ಅಥವಾ ನಮ್ಮ ಹಿಂದಿನ ಸಾಲ ಮರುಪಾವತಿ ರೀತಿ ಸಮರ್ಪಕವಾಗಿಲ್ಲ ಎಂದನಿಸಿದಾಗ ಹೆಚ್ಚಿನ ಮೊತ್ತದ ಸಾಲ ಸಿಗುವುದು ಮತ್ತು ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವುದು ಕಷ್ಟವಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ