ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ 14.93 ಲಕ್ಷ ಹೊಸ ಖಾತೆಗಳನ್ನು ಸೇರಿಸಿದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 32,635 ಹೆಚ್ಚು ಸದಸ್ಯರ ಖಾತೆ ಸೃಷ್ಟಿಯಾಗಿದೆ. ಕುತೂಹಲವೆಂದರೆ ಡಿಸೆಂಬರ್ನಲ್ಲಿ ಇಪಿಎಫ್ಒ ಖಾತೆಗೆ ಸೇರ್ಪಡೆಯಾದ 14.93 ಲಕ್ಷ ಮಂದಿ ಪೈಕಿ 8.02 ಲಕ್ಷ ಮಂದಿ ಹೊಸ ಸದಸ್ಯರಾಗಿದ್ದಾರೆ. ಅಂದರೆ ಈ ಎಂಟು ಲಕ್ಷ ಉದ್ಯೋಗಿಗಳು ಮೊದಲ ಬಾರಿಗೆ ಇಪಿಎಫ್ ಯೋಜನೆಗೆ ಒಳಪಟ್ಟಿದ್ದಾರೆ. ಇದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ತಿಳಿದುಬಂದ ಅಂಕಿ ಅಂಶ.
ಮಹಾರಾಷ್ಟ್ರ ರಾಜ್ಯದಲ್ಲಿ ಆ ತಿಂಗಳು ಅತಿಹೆಚ್ಚು ಮಂದಿ ಇಪಿಎಫ್ಒ ಖಾತೆ ಪಡೆದಿದ್ದಾರೆ. ಮಹಾರಾಷ್ಟ್ರ ನಂತರದ ಸ್ಥಾನ ತಮಿಳುನಾಡು, ಗುಜರಾತ್, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳದ್ದಾಗಿದೆ. ಡಿಸೆಂಬರ್ನಲ್ಲಿ ಇಪಿಎಫ್ಒ ಖಾತೆ ತೆರೆಯಲಾದ 14.93 ಲಕ್ಷ ಮಂದಿ ಪೈಕಿ ಶೇ. 60.08ರಷ್ಟು ಮಂದಿ ಈ ಐದು ರಾಜ್ಯಗಳವರೇ ಆಗಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ ಶೇ. 24.82ರಷ್ಟು ಎನ್ರೋಲ್ಮೆಂಟ್ ಆಗಿದೆ. ಕರ್ನಾಟಕ 4ನೇ ಸ್ಥಾನದಲ್ಲಿದೆ.
ಇನ್ನು ಹೊಸದಾಗಿ ಎನ್ರೋಲ್ ಆದ 8 ಲಕ್ಷ ಮಂದಿ ಪೈಕಿ 18ರಿಂದ 21 ವರ್ಷ ವಯೋಮಾನದವರೇ 2.39 ಲಕ್ಷ ಮಂದಿ ಇದ್ದಾರೆ. 22ರಿಂದ 25 ವರ್ಷ ವಯೋಮಾನದ 2.08 ಲಕ್ಷ ಮಂದಿ ಇದ್ದಾರೆ. ಅಂದರೆ 18ರಿಂದ 25 ವರ್ಷದ ವಯೋಮಾನದವರು ಶೇ. 55ಕ್ಕಿಂತಲೂ ಹೆಚ್ಚು ಎಂದಾಯಿತು.
ಇನ್ನು ಡಿಸೆಂಬರ್ನಲ್ಲಿ ಶುರುವಾದ 14.93 ಪಿಎಫ್ ಖಾತೆಗಳ ಪೈಕಿ 10.74 ಲಕ್ಷ ಸದಸ್ಯರು ಖಾತೆಯಿಂದ ಹೊರಬಂದು ಮತ್ತೆ ಹೊಸ ಖಾತೆ ಪಡೆದಿದ್ದಾರೆ. ಅಂದರೆ ಕೆಲಸ ಬದಲಿಸಿದಾಗ ಸಹಜವಾಗಿ ಹಳೆದ ಪಿಎಫ್ ಖಾತೆ ಮುಚ್ಚಿ, ಹೊಸ ಖಾತೆ ಶುರುವಾಗುತ್ತದೆ. 3.84 ಲಕ್ಷ ಮಂದಿಯ ಪಿಎಫ್ ಖಾತೆ ನಿಂತು ಹೋಗಿದೆ. ಇದಕ್ಕೆ ಕಾರಣ, ಅವರು ನಿವೃತ್ತರಾಗಿರಬಹುದು, ಅಥವಾ ಕೆಲಸ ಕಳೆದುಕೊಂಡು ಇನ್ನೂ ಸಿಕ್ಕಿಲ್ಲದಿರುವವರು ಇರಬಹುದು.
ಇದನ್ನೂ ಓದಿ: HDFC Interest: ಹೆಚ್ಡಿಎಫ್ಸಿ ಬ್ಯಾಂಕಲ್ಲಿ ಎಫ್ಡಿ ಇಟ್ಟರೆ ಭರ್ಜರಿ ಲಾಭ; ವರ್ಷಕ್ಕೆ ಶೇ. 7.75ರವರೆಗೆ ಬಡ್ಡಿ
ಈ ಅಂಕಿಅಂಶದಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಹೊಸ ಪಿಎಫ್ ಖಾತೆದಾರರ ಪೈಕಿ ಮಹಿಳಾ ಸದಸ್ಯರ ಸಂಖ್ಯೆ 2.05 ಇದೆ. ನವೆಂಬರ್ ತಿಂಗಳಿಗೆ ಹೋಲಿಸಿದರೆ ಹೊಸ ಮಹಿಳಾ ಸದಸ್ಯರ ಸೇರ್ಪಡೆಯಲ್ಲಿ ಶೇ. 25.57ರಷ್ಟು ಹೆಚ್ಚಳವಾಗಿದೆ.
ಒಟ್ಟಾರೆಯಾಗಿ ಇಪಿಎಫ್ಒಗೆ ಹೊಸ ಸದಸ್ಯರು ನಿರಂತರವಾಗಿ ಸೇರ್ಪಡೆಯಾಗುತ್ತಿರುವುದು ದೇಶದಲ್ಲಿ ಸಂಘಟಿತ ವಲಯದಲ್ಲಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದಕ್ಕೆ ಕೈಗನ್ನಡಿ ಹಿಡಿದಿದೆ ಎಂದು ಕೆಲ ತಜ್ಞರು ವಿಶ್ಲೇಷಿಸುತ್ತಾರೆ.
Published On - 5:22 pm, Wed, 22 February 23