ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿದೆ ನರೇಂದ್ರ ಮೋದಿಯ ಉಳಿತಾಯ ಹಣ; ಎನ್​ಎಸ್​ಸಿ ಯೋಜನೆ ಬಗ್ಗೆ ತಿಳಿಯಿರಿ

|

Updated on: Sep 17, 2023 | 4:02 PM

PM Narendra Modi and NSC: ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಏಕೈಕ ಉಳಿತಾಯ ಯೋಜನೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್. ಇದರಲ್ಲಿ ಅವರು ಹೆಚ್ಚೂಕಡಿಮೆ 9 ಲಕ್ಷ ರೂನಷ್ಟು ಹಣ ಹೊಂದಿದ್ದಾರೆ. ಅಂಚೆ ಕಚೇರಿಯಲ್ಲಿ ಮಾಡಿಸಬಹುದಾದ ಈ ಸ್ಕೀಮ್​ನಲ್ಲಿ ಉತ್ತಮ ಎನಿಸುವ ಶೇ. 7.7ರಷ್ಟು ಬಡ್ಡಿ ಸಿಗುತ್ತದೆ.

ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿದೆ ನರೇಂದ್ರ ಮೋದಿಯ ಉಳಿತಾಯ ಹಣ; ಎನ್​ಎಸ್​ಸಿ ಯೋಜನೆ ಬಗ್ಗೆ ತಿಳಿಯಿರಿ
ಎನ್​ಎಸ್​ಸಿ
Follow us on

ಇಂದು ಸೆಪ್ಟೆಂಬರ್ 17, ನರೇಂದ್ರ ಮೋದಿ ಅವರ ಜನ್ಮದಿನ. ಬಹಳ ಸಾಧಾರಣ ಆಸ್ತಿವಂತರಾದ ನರೇಂದ್ರ ಮೋದಿ (PM Narendra Modi) ಅವರ ಬಳಿ ಒಂದು ಚಿರಾಸ್ತಿ ಬಿಟ್ಟರೆ ಬಹುತೇಕ ಹಣ ಸೇವಿಂಗ್ಸ್ ಸ್ಕೀಮ್ ಮತ್ತು ಇನ್ಷೂರೆನ್ಸ್ ಸ್ಕೀಮ್​ನದ್ದಾಗಿದೆ. ಪ್ರಧಾನಿಯವರು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ (NSC National Savings Certificate) ಒಂದಷ್ಟು ಉಳಿತಾಯ ಹಣವನ್ನು ತೊಡಗಿಸಿಕೊಂಡಿದ್ದಾರೆ. 2022ರಲ್ಲಿ ಅವರು ಘೋಷಣೆ ಮಾಡಿಕೊಂಡಿರುವ ಆಸ್ತಿವಿವರದ (Declared Assets) ಮಾಹಿತಿ ಪ್ರಕಾರ ಎನ್​ಎಸ್​ಸಿಯಲ್ಲಿ ಮೋದಿ ಅವರ 9,05,105 ರೂ (9 ಲಕ್ಷ) ಹಣ ಇದೆ. ಅವರ ಒಟ್ಟಾರೆ ಘೋಷಿತ ಆಸ್ತಿ 2.24 ಕೋಟಿ ರೂನಲ್ಲಿ ಇದು ಶೇ. 5ಕ್ಕಿಂತಲೂ ಕಡಿಮೆಯೇ.

ಏನಿದು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್?

ಎನ್​ಎಸ್​ಸಿ ಎಂಬುದು ತೆರಿಗೆ ಡಿಡಕ್ಷನ್​ಗೆ ಅನುವು ಮಾಡಿಕೊಡುವ ಒಂದು ಉಳಿತಾಯ ಯೋಜನೆ. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಸ್ಕೀಮ್ ಪಡೆಯಬಹುದು. ಐದು ವರ್ಷಕ್ಕೆ ಮೆಚ್ಯೂರ್ ಆಗುವ ಈ ಸ್ಕೀಮ್​ನಲ್ಲಿ ಕನಿಷ್ಠ ಹೂಡಿಕೆ 1,000 ಇರುತ್ತದೆ. ಗರಿಷ್ಠ ಎಷ್ಟು ಬೇಕಾದರೂ ನೀವು ಹೂಡಿಕೆ ಮಾಡಬಹುದು.

ಇದನ್ನೂ ಓದಿ: PM Vishwakarma: ಪಿಎಂ ವಿಶ್ವಕರ್ಮ ಯೋಜನೆ ಉದ್ಘಾಟನೆ; ಕುಶಲಕರ್ಮಿಗಳಿಗೆಂದಿರುವ ಈ ಸ್ಕೀಮ್ ಪಡೆಯುವುದು ಹೇಗೆ?

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಬಡ್ಡಿ ಇತ್ಯಾದಿ ವಿವರಗಳು

  • ಎನ್​ಎಸ್​ಸಿಯಲ್ಲಿನ ಹೂಡಿಕೆಗೆ ವರ್ಷಕ್ಕೆ ಶೇ. 7.7ರಷ್ಟು ಬಡ್ಡಿ ಸಿಗುತ್ತದೆ.
  • ಯೋಜನೆ ಅವಧಿ 5 ವರ್ಷ, ಲಾಕಿನ್ ಅವಧಿಯೂ 5 ವರ್ಷವೇ.
  • ಭಾರತದ ಪ್ರಜೆಗಳು ಮಾತ್ರವೇ ಈ ಸ್ಕೀಮ್ ಪಡೆಯಬಹುದು.
  • ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಪಡೆಯಬಹುದು.
  • ಎನ್​ಎಸ್​ಸಿ ಅನ್ನು ಜಾಮೀನಾಗಿ ಇಟ್ಟು ಯಾವುದೇ ಬ್ಯಾಂಕ್​ನಲ್ಲಿ ಸಾಲ ಪಡೆಯಬಹುದು.

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್​ನಿಂದ ತೆರಿಗೆ ಲಾಭಗಳು

ಎನ್​ಎಸ್​ಸಿಯಲ್ಲಿ ನೀವು ಮಾಡಿರುವ ಹೂಡಿಕೆಗೆ ಟ್ಯಾಕ್ಸ್ ರಿಬೇಟ್ ಪಡೆಯಬಹುದು. ಒಂದು ವರ್ಷದಲ್ಲಿ 1.5 ಲಕ್ಷ ರೂವರೆಗಿನ ಇಂತಹ ಹೂಡಿಕೆಗೆ ತೆರಿಗೆ ವಿನಾಯಿತಿ ಇರುತ್ತದೆ. ಈ ಹೂಡಿಕೆಯಿಂದ ಸಿಗುವ ಬಡ್ಡಿಹಣವೂ ಒಟ್ಟಾರೆ ಮೊತ್ತಕ್ಕೆ ಸೇರ್ಪಡೆಯಾಗಿ, ಅಷ್ಟಕ್ಕೂ ತೆರಿಗೆ ವಿನಾಯಿತಿ ಲಭ್ಯ ಇರುತ್ತದೆ. ಮೆಚ್ಯೂರ್ ಆದ ಬಳಿಕ ಯಾವುದೇ ತೆರಿಗೆ ಕಡಿತ ಇಲ್ಲದೇ ಪೂರ್ಣ ಮೊತ್ತ ಕೈ ಸೇರುತ್ತದೆ.

ಇದನ್ನೂ ಓದಿ: ತೆರಿಗೆ ಉಳಿಸುವ ನರೇಂದ್ರ ಮೋದಿ ಟ್ರಿಕ್ಸ್; ಇನ್ಫ್ರಾ ಬಾಂಡ್​ಗಳಲ್ಲಿ ಹೂಡಿಕೆ ಮಾಡಿದ್ದ ಪ್ರಧಾನಿ; ಏನಿದು ಈ ಇನ್ಫ್ರಾಸ್ಟ್ರಕ್ಚರ್ ಬಾಂಡ್ಸ್?

ಎನ್​ಎಸ್​ಸಿ ಎಲ್ಲಿ ಪಡೆಯಬಹುದು?

ಅಂಚೆ ಕಚೇರಿ ಅಥವಾ ನಿಗದಿತ ಬ್ಯಾಂಕುಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಪಡೆಯಬಹುದು. ಆನ್​ಲೈನ್​ನಲ್ಲಿ ಇದನ್ನು ತೆರೆಯಲು ಸಾಧ್ಯವಿಲ್ಲ. ಕಚೇರಿಗೆ ಹೋಗಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. 2016ರಿಂದೀಚೆ ಭೌತಿಕವಾದ ಸರ್ಟಿಫಿಕೇಟ್ ಬದಲು ಎಲೆಕ್ಟ್ರಾನಿಕ್ ಪ್ರತಿಯನ್ನು ಕೊಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sun, 17 September 23