PPF: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ

|

Updated on: Mar 08, 2024 | 1:34 PM

Public Provident Fund information: ಸರ್ಕಾರದಿಂದ ನಡೆಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ದೀರ್ಘಕಾಲದ ಹೂಡಿಕೆಗೆ ಸರಿಯಾದುದಾಗಿದೆ. ಬಡ್ಡಿದರ ಕಡಿಮೆ ಆದರೂ ಸುರಕ್ಷಿತ ಮತ್ತು ಸ್ಥಿರ ಹೂಡಿಕೆಗೆ ಅನುಕೂಲವಾಗಿದೆ. ಒಂದು ವರ್ಷದಲ್ಲಿ ಕನಿಷ್ಠ ಹೂಡಿಕೆ 500 ರೂ ಆದರೆ, ಗರಿಷ್ಠ 1.5 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇದೆ. 15 ವರ್ಷದಲ್ಲಿ ಗರಿಷ್ಠ 40 ಲಕ್ಷ ರೂವರೆಗೆ ನಿಮಗೆ ರಿಟರ್ನ್ ಸಿಗುತ್ತದೆ.

PPF: ಸರ್ಕಾರದಿಂದ ನಡೆಸಲಾಗುವ ಪಿಪಿಎಫ್​ನಿಂದ ಲಾಭಗಳೇನು?; 15 ವರ್ಷದಲ್ಲಿ ಸಿಗುವ ರಿಟರ್ನ್, ಇತ್ಯಾದಿ ವಿವರ ತಿಳಿಯಿರಿ
ಪಿಪಿಎಫ್
Follow us on

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF- Public Provident Fund) ಬಹಳ ಜನಪ್ರಿಯವಾಗಿರುವ ಸೇವಿಂಗ್ಸ್ ಮತ್ತು ದೀರ್ಘಕಾಲೀನ ಹೂಡಿಕೆ ಸ್ಕೀಮ್ ಆಗಿದೆ. ಬಡ್ಡಿದರ ತೀರಾ ಹೆಚ್ಚೇನಿಲ್ಲದಿದ್ದರೂ ದೀರ್ಘಕಾಲದ ಹೂಡಿಕೆಗೆ ಹೇಳಿ ಮಾಡಿಸಿದ್ದಾಗಿದೆ. ಯಾರು ಬೇಕಾದರೂ ಇದರಲ್ಲಿ ಹೂಡಿಕೆ ಮಾಡಬಹುದು. ಅಂಚೆ ಕಚೇರಿ, ಕೆಲ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಪಿಪಿಎಫ್ ಖಾತೆಯನ್ನು ಆರಂಭಿಸಬಹುದಾಗಿದೆ. ದೀರ್ಘ, ಸುರಕ್ಷಿತ ಮತ್ತು ಉತ್ತಮ ರಿಟರ್ನ್ ಇರುವ ಹೂಡಿಕೆಗೆ ಪಿಪಿಎಫ್ ಉತ್ತಮ ಮಾರ್ಗವಾಗಿದೆ. ಪಿಪಿಎಫ್​ನಲ್ಲಿ ಸದ್ಯ ವರ್ಷಕ್ಕೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತಿದೆ. ಸರ್ಕಾರ ವರ್ಷಕ್ಕೊಮ್ಮೆ ಇದರ ದರವನ್ನು ಪರಿಷ್ಕರಿಸುತ್ತದೆ. ಕೆಲವೊಮ್ಮೆ ಬಡ್ಡಿ ಹೆಚ್ಚಿಸಬಹುದು, ಅಥವಾ ತಗ್ಗಿಸಬಹುದು. ಸಾಮಾನ್ಯವಾಗಿ ಇತರ ಬ್ಯಾಂಕ್ ದರಗಳಿಗೆ ಅನುಗುಣವಾಗಿ ಸರ್ಕಾರ ಪಿಪಿಎಫ್ ದರವನ್ನು ಪರಿಷ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಪಿಪಿಎಫ್​ನಲ್ಲಿ ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ಎಷ್ಟು?

ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಕನಿಷ್ಠ ಹೂಡಿಕೆ ಒಂದು ವರ್ಷದಲ್ಲಿ 500 ರೂ ಆಗಿದೆ. ಅಂದರೆ, ಒಂದು ವರ್ಷದಲ್ಲಿ 500 ರೂ ಕಟ್ಟಿಕೊಂಡು ಹೋದರೂ ಸಾಕು. ಇನ್ನು, ಗರಿಷ್ಠ ಹೂಡಿಕೆ ಒಂದು ವರ್ಷದಲ್ಲಿ 1.5 ಲಕ್ಷ ರೂ ಆಗಿದೆ. ಒಂದು ವರ್ಷದಲ್ಲಿ ಇದಕ್ಕಿಂತ ಹೆಚ್ಚು ಹಣವನ್ನು ಪಿಪಿಎಫ್ ಖಾತೆಗೆ ಠೇವಣಿ ಇಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: ಎಲ್ಲಾ ಎಸ್​ಐಪಿಗಳು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಲ್ಲ; ಹೂಡಿಕೆ ಮಾಡುವಾಗ ರಿಸ್ಕ್ ನೆನಪಿರಲಿ

ಎಷ್ಟು ವರ್ಷದ ಸ್ಕೀಮ್ ಈ ಪಿಪಿಎಫ್?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ 15 ವರ್ಷದ ಹೂಡಿಕೆ ಯೋಜನೆಯಾಗಿದೆ. 15 ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ. ನಿಮಗೆ ಬೇಕಾದಲ್ಲಿ ವಿತ್​ಡ್ರಾ ಮಾಡಬಹುದು. ಸ್ಕೀಮ್ ಮುಂದುವರಿಸಿಕೊಂಡು ಹೋಗಲೂ ಅವಕಾಶ ಇರುತ್ತದೆ.

ಪಿಪಿಎಫ್ ಡೆಪಾಸಿಟ್ ಹೇಗೆ ಮಾಡಬಹುದು?

ಪಿಪಿಎಫ್ ಖಾತೆ ಒಂದು ರೀತಿಯಲ್ಲಿ ಏಕಮುಖಿ ಬ್ಯಾಂಕ್ ಖಾತೆ ಇದ್ದಂತೆ. ಆರ್​ಡಿ ಅಕೌಂಟ್ ರೀತಿಯಲ್ಲಿ ನೀವು ನಿಯಮಿತವಾಗಿ ಹಣ ಡೆಪಾಸಿಟ್ ಇಡಬಹುದು. ಆದರೆ, ತಿಂಗಳಲ್ಲಿ ಇಷ್ಟೇ ಹಣ ಇಡಬೇಕೆಂಬ ನಿಯಮವೇನಿರುವುದಿಲ್ಲ. ಒಂದು ವರ್ಷದಲ್ಲಿ ಹಲವು ಬಾರಿ ಡೆಪಾಸಿಟ್ ಇಡಬಹುದು. ಆದರೆ, ವರ್ಷದಲ್ಲಿ ಒಟ್ಟೂ ಠೇವಣಿ 1.5 ಲಕ್ಷ ರೂ ಮೀರಬಾರದು. ಇವತ್ತು 500 ರೂ ಇಡುತ್ತೀರಿ, ಮುಂದಿನ ತಿಂಗಳು 1,000 ರೂ, ಅಥವಾ 10 ಸಾವಿರ ರೂ ಅಥವಾ 50 ಸಾವಿರ ರೂ ಬೇಕಾದರೂ ಇಡಬಹುದು. ನೀವು ಒಂದು ತಿಂಗಳಲ್ಲಿ ಸೇವಿಂಗ್ ಮಾಡಿದ ಅಷ್ಟೂ ಹಣವನ್ನು ಪಿಪಿಎಫ್ ಖಾತೆಗೆ ವಿನಿಯೋಗಿಸಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಬೇರೆ ಬೇರೆ ಸ್ಕೀಮ್​ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್

15 ವರ್ಷದಲ್ಲಿ ಗರಿಷ್ಠ ರಿಟರ್ನ್ ಎಷ್ಟು ಸಿಗುತ್ತದೆ?

ಒಂದು ವೇಳೆ ನೀವು ಪಿಪಿಎಫ್​ನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂ ಹೂಡಿಕೆ ಮಾಡಿದರೆ, 15 ವರ್ಷದಲ್ಲಿ ಸ್ಕೀಮ್ ಮೆಚ್ಯೂರ್ ಆದಾಗ ನಿಮ್ಮ ಕೈಸೇರುವ ಹಣ 40 ಲಕ್ಷ ರೂ ಆಗಿರುತ್ತದೆ. ಇದು ಶೇ. 7.1ರ ಬಡ್ಡಿದರ ಮುಂದುವರಿದರೆ ಸಿಗುವ ಹಣ. ಒಂದು ವೇಳೆ ಬಡ್ಡಿ ಇನ್ನೂ ಹೆಚ್ಚಾದರೆ ರಿಟರ್ನ್ ಮೊತ್ತ ಇನ್ನೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಓಡೋ ಕುದುರೆ ಗುರುತಿಸೋದು ಹೇಗೆ? ಇಪಿಎಸ್, ಪಿಇ ರೇಶಿಯೋ ಇತ್ಯಾದಿ ತಂತ್ರಗಳನ್ನು ತಿಳಿದಿರಿ

ಪಿಪಿಎಫ್​ನಿಂದ ತೆರಿಗೆ ಅನುಕೂಲ

ಪಿಪಿಎಫ್​ನ ಮತ್ತೊಂದು ಅನುಕೂಲವೆಂದರೆ ಇದರ ತೆರಿಗೆ ವಿನಾಯಿತಿಯ ಅವಕಾಶ. ಒಂದು ವರ್ಷದಲ್ಲಿ ಒಂದೂವರೆ ಲಕ್ಷ ರೂ ಹಣವನ್ನು ಪಿಪಿಎಫ್ ಮೇಲೆ ನೀವು ಹಾಕಿದರೆ, ಅಷ್ಟೂ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ