Tips: ಷೇರುಮಾರುಕಟ್ಟೆಯಲ್ಲಿ ಓಡೋ ಕುದುರೆ ಗುರುತಿಸೋದು ಹೇಗೆ? ಇಪಿಎಸ್, ಪಿಇ ರೇಶಿಯೋ ಇತ್ಯಾದಿ ತಂತ್ರಗಳನ್ನು ತಿಳಿದಿರಿ
Know How to Find Multibagger: ಷೇರುಮಾರುಕಟ್ಟೆಯಲ್ಲಿ ರಾಶಿ ರಾಶಿ ಷೇರುಗಳು ಇರುತ್ತವೆ. ಅವುಗಳಲ್ಲಿ ಲಾಭ ತರಬಲ್ಲ ಷೇರುಗಳನ್ನು ಗುರುತಿಸುವುದು ಹೇಗೆ? ಕಂಪನಿಯ ಲಾಭ, ಮ್ಯಾನೇಜ್ಮೆಂಟ್ ಬಲ, ಪಿಇ ರೇಶಿಯೋ ಇತ್ಯಾದಿ ಅಂಶಗಳನ್ನು ಗಮನಿಸಬೇಕು. ಷೇರು ಮಾರುಕಟ್ಟೆಗೆ ನೀವು ಹೊಸಬರಾಗಿದ್ದರೆ ಮೊದಲು ಸಣ್ಣ ಮೊತ್ತದ ಹೂಡಿಕೆಯೊಂದಿಗೆ ಆರಂಭಿಸಿ. ಅನುಭವ ಪಡೆದ ಬಳಿಕ ಹೂಡಿಕೆ ಹೆಚ್ಚಿಸಬಹುದು.
ಷೇರು ಮಾರುಕಟ್ಟೆಯಲ್ಲಿ ಹಲವು ಮಲ್ಟಿಬ್ಯಾಗರ್ಗಳಿರುವುದನ್ನು (Multibagger stocks) ನೋಡಿರುತ್ತೇವೆ. ಕೆಲವೇ ವರ್ಷಗಳಲ್ಲಿ ಹಲವು ಪಟ್ಟು ಲಾಭ ಕೊಡುವ ಷೇರುಗಳು ಮಾಧ್ಯಮಗಳಲ್ಲಿ ಹೆಡ್ಲೈನ್ ಆಗುತ್ತವೆ. ಇವು ಹಾಗೇ ಸುಮ್ಮನೆ ಏರಿಕೆ ಕಾಣುವುದಿಲ್ಲ. ನೀವು ಮಲ್ಟಿಬ್ಯಾಗರ್ ಎನಿಸಿರುವ ಷೇರಿನ ಕಂಪನಿಯನ್ನು ಅವಲೋಕಿಸಿ ನೋಡಿ. ಆ ಕಂಪನಿಯ ವ್ಯವಹಾರದಲ್ಲಿ ಹಲವು ಸಕಾರಾತ್ಮಕ ಅಂಶಗಳನ್ನು ಕಾಣಬಹುದು. ಷೇರುಪೇಟೆಗೆ ಹೊಸದಾಗಿ ಬಂದರೂ ಮಾರುಕಟ್ಟೆಗೆ ಹಳತಾಗಿರುತ್ತವೆ, ಗಟ್ಟಿಯಾಗಿ ತಳವೂರಿರುತ್ತವೆ. ಬಿಸಿನೆಸ್ ಹಿಡಿತ ಉತ್ತಮವಾಗಿರುತ್ತದೆ. ಹಣಕಾಸು ಹರಿವು ಸಲೀಸಾಗಿ ಇರುತ್ತದೆ. ಒಂದು ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡುವ ಮುನ್ನ ಈ ಕೆಳಗಿನ ಅಂಶಗಳನ್ನು ತಪ್ಪದೇ ಗಮನಿಸಿ…
ಒಳ್ಳೆಯ ಮ್ಯಾನೇಜ್ಮೆಂಟ್ ಇದೆಯಾ?
ಒಂದು ಒಳ್ಳೆಯ ಆಡಳಿತ ಸಾಮರ್ಥ್ಯ (good management) ಇರುವ ತಂಡ ಒಂದು ಕಂಪನಿಯಲ್ಲಿ ಇದೆಯಾ ಎಂಬುದು ಬಹಳ ಮುಖ್ಯ. ಸಮರ್ಥ ಆಡಳಿತ ಇದ್ದ ಕಂಪನಿ ಎಷ್ಟೇ ಸವಾಲು ಇದ್ದರೂ ಬೆಳೆಯಬಲ್ಲುದು. ಕಂಪನಿಯ ಆಡಳಿತ ನಿರ್ವಹಣೆ ಹೇಗಿದೆ, ಅದರ ಮಂಡಳಿ ಎಷ್ಟು ಸ್ವತಂತ್ರವಾಗಿದೆ ಎಂಬುದನ್ನು ಗಮನಿಸಬೇಕು. ಮ್ಯಾನೇಜ್ಮೆಂಟ್ ತನ್ನ ವೈಯಕ್ತಿಕ ಸಂಗತಿಗಳಿಗೆ ಕಂಪನಿಯ ಹಣವನ್ನು ಬಳಸುತ್ತದೆಯಾ ಎಂಬುದೂ ಮುಖ್ಯವಾಗುತ್ತದೆ. ಮ್ಯಾನೇಜ್ಮೆಂಟ್ ಟೀಮ್ಗೆ ಬದ್ಧತೆ ಮತ್ತು ಶಿಸ್ತು ಪ್ರವೃತ್ತಿ ಇರುವುದು ಮುಖ್ಯ.
ಇದನ್ನೂ ಓದಿ: 1 ಲಕ್ಷ ಹೂಡಿಕೆಗೆ 73 ಲಕ್ಷ ರೂ ಲಾಭ; ಇದು ಸೂರಜ್ ಪ್ರಾಡಕ್ಟ್ಸ್ ಷೇರು ಖರೀದಿಸಿದವರಿಗೆ ಸಿಕ್ಕ ಸಂಪತ್ತು
ಕಂಪನಿಯ ಸ್ಪರ್ಧಾತ್ಮಕತೆ
ಮಾರುಕಟ್ಟೆಯಲ್ಲಿ ಒಂದು ಉತ್ಪನ್ನ ಮಾರಾಟಕ್ಕೆ ಒಂದಕ್ಕಿಂತ ಹೆಚ್ಚು ಕಂಪನಿಗಳು ಇದ್ದರೆ ಸ್ಪರ್ಧೆ ಏರ್ಪಡುತ್ತದೆ. ಹೆಚ್ಚು ಸ್ಪರ್ಧಾತ್ಮಕವಾಗಿದ್ದವರು (competitive edge) ಮೇಲುಗೈ ಸಾಧಿಸುತ್ತಾರೆ. ಅಂದರೆ, ಉತ್ಪನ್ನ ವೈವಿಧ್ಯತೆ, ಉತ್ಕೃಷ್ಟತೆ, ಸದಾ ಆವಿಷ್ಕರಣೆ (innovation) ಇತ್ಯಾದಿ ಮೂಲಕ ಈ ಕಂಪನಿ ಸ್ಪರ್ಧೆಯಲ್ಲಿ ಮುಂದಿರುತ್ತದೆ. ಷೇರು ಹೂಡಿಕೆಗೆ ಮುನ್ನ ಕಂಪನಿಗೆ ಈ ಗುಣ ಇದೆಯಾ ತಿಳಿದಿರಿ.
ಪಿಇ ಅನುಪಾತ, ಇಪಿಎಸ್ ತಿಳಿದಿರಿ…
ಒಂದು ಷೇರು ಎಷ್ಟರ ಮಟ್ಟಿಗೆ ಬೆಳೆವಣಿಗೆ ಸಾಮರ್ಥ್ಯ ಹೊಂದಿದೆ ಎಂದು ತಾಂತ್ರಿಕವಾಗಿ ತಿಳಿಯಲು ಇಪಿಎಸ್, ಪಿಇ ರೇಶಿಯೋ ಇತ್ಯಾದಿ ಅಂಕಿ ಅಂಶ ಸಹಾಯಕವಾಗುತ್ತವೆ. ಇಪಿಎಸ್ ಎಂದರೆ ಎರ್ನಿಂಗ್ಸ್ ಪರ್ ಶೇರ್ (earnings per share). ಅಂದರೆ ಕಂಪನಿಯ ಲಾಭ ಮತ್ತು ಷೇರು ಸಂಖ್ಯೆಯ ಸೂತ್ರ ಇದು. ಕಂಪನಿಯ ನಿವ್ವಳ ಲಾಭದ ಮೊತ್ತವನ್ನು ಒಟ್ಟಾರೆ ಷೇರು ಸಂಖ್ಯೆಯಲ್ಲಿ ಭಾಗಿಸಿದರೆ (Net Profit / number of shares) ಇಪಿಎಸ್ ಬರುತ್ತದೆ. ಈ ಇಪಿಎಸ್ ಸದಾ ಮೇಲೇರುತ್ತಿರಬೇಕು.
ಇದನ್ನೂ ಓದಿ: 2024ರಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ ಮತ್ತು ಲಾಭಕಾರಿ? ಇಲ್ಲಿದೆ ಡೀಟೇಲ್ಸ್
ಹಾಗೆಯೇ, ಪ್ರೈಸ್ ಟು ಅರ್ನಿಂಗ್ಸ್ ಅನುಪಾತವೊಂದು (Price to earnings ratio) ಇದೆ. ಇದು ಇಪಿಎಸ್ ಹಾಗೂ ಷೇರು ಬೆಲೆ ನಡುವಿನ ಅನುಪಾತವಾಗಿದೆ. ಷೇರು ಬೆಲೆ ಅವಾಸ್ತವಿಕವಾಗಿ ಉಬ್ಬುತ್ತಿದೆಯಾ ಎಂಬುದನ್ನು ಇದರ ಮೂಲಕ ಗುರುತಿಸಬಹುದು. ಸಕಾರಾತ್ಮಕವಾದ ಪಿಇ ಅನುಪಾತ ಇರುವ ಕಂಪನಿಯ ಷೇರುಗಳನ್ನು ಖರೀದಿಸಬಹುದು.
ಇವಿಷ್ಟೂ ಬಹಳ ಮುಖ್ಯವಾದ ಅಂಶಗಳು. ಇದರ ಜೊತೆಗೆ ಕಂಪನಿಯ ಉತ್ಪನ್ನ ವೈವಿಧ್ಯತೆ ಎಷ್ಟು? ಅದರ ಲಾಭದ ಮಾರ್ಜಿನ್ ಎಷ್ಟು, ಅದರ ಪ್ರತಿಸ್ಪರ್ಧಿಗಳ ಶಕ್ತಿ ಎಷ್ಟು, ಕಂಪನಿ ಸ್ಥಾಪಿಸಿದವರಿಗೆ ಮೊದಲು ಇದ್ದ ಆಸಕ್ತಿ ಈಗಲೂ ಉಳಿದಿದೆಯಾ ಇತ್ಯಾದಿ ಹಲವು ಸಂಗತಿಗಳನ್ನು ತಿಳಿದು ಆ ಬಳಿಕ ಹೂಡಿಕೆ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Thu, 15 February 24