Multibagger: 1 ಲಕ್ಷ ಹೂಡಿಕೆಗೆ 73 ಲಕ್ಷ ರೂ ಲಾಭ; ಇದು ಸೂರಜ್ ಪ್ರಾಡಕ್ಟ್ಸ್ ಷೇರು ಖರೀದಿಸಿದವರಿಗೆ ಸಿಕ್ಕ ಸಂಪತ್ತು
Suraj Products: ಉಕ್ಕು ಉತ್ಪನ್ನಗಳನ್ನು ತಯಾರಿಸುವ ಸೂರಜ್ ಪ್ರಾಡಕ್ಟ್ಸ್ ತನ್ನ ಷೇರುದಾರರಿಗೆ ಭರ್ಜರಿ ಲಾಭ ತಂದಿದೆ. ಕಳೆದ ಕೆಲ ವರ್ಷಗಳಿಂದ ಸೂರಜ್ ಪ್ರಾಡಕ್ಟ್ಸ್ ಅಕ್ಷರಶಃ ಮಲ್ಟಿಬ್ಯಾಗರ್ ಷೇರು ಆಗಿ ಮಿಂಚುತ್ತಿದೆ. 2020ರ ಮೇ ತಿಂಗಳಲ್ಲಿ ಒಂದು ಲಕ್ಷ ರೂ ಮೊತ್ತಕ್ಕೆ ಇದರ ಷೇರುಗಳನ್ನು ಖರೀದಿಸಿದವರಿಗೆ ಇವತ್ತು ಅವರ ಹೂಡಿಕೆ 73 ಲಕ್ಷ ರೂ ಆಗಿ ಬೆಳೆದಿರುತ್ತಿತ್ತು.
ನವದೆಹಲಿ, ಫೆಬ್ರುವರಿ 15: ಕಳೆದ ಕೆಲ ತಿಂಗಳುಗಳಿಂದ ಸೂರಜ್ ಪ್ರಾಡಕ್ಟ್ಸ್ (Suraj Products) ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಬಹಳ ಗಮನ ಸೆಳೆಯುತ್ತಿದೆ. ನಾಲ್ಕು ವರ್ಷಗಳಿಂದ ಇದು ಅಕ್ಷರಶಃ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಪರಿವರ್ತನೆಗೊಂಡಿದೆ. ತನ್ನ ಹೂಡಿಕೆದಾರರಿಗೆ ಅನಿರೀಕ್ಷಿತ ಸಂಪತ್ತು ತಂದುಕೊಟ್ಟಿದೆ. ಅತಿ ವೇಗವಾಗಿ ಬೆಳೆದ ಷೇರುಗಳಲ್ಲಿ ಅದೂ ಒಂದಾಗಿದೆ. ಸಿಮೆಂಟ್ ತಯಾರಿಕೆಯಿಂದ ಆರಂಭಗೊಂಡು ಈಗ ವಿವಿಧ ಉಕ್ಕು ಉತ್ಪನ್ನಗಳನ್ನು ತಯಾರಿಸುವ ಸೂರಜ್ ಪ್ರಾಡಕ್ಟ್ಸ್ 2023ರ ಹಣಕಾಸು ವರ್ಷದಲ್ಲಿ 285 ಕೋಟಿ ರೂ ಆದಾಯ ಕಂಡಿದೆ. 2020ರಲ್ಲಿ ಒಂದು ಸಮಯದಲ್ಲಿ 8 ರೂಗಿಂತಲೂ ಕಡಿಮೆ ಇದ್ದ ಸೂರಜ್ ಪ್ರಾಡಕ್ಟ್ಸ್ ಷೇರುಬೆಲೆ 2024ರಲ್ಲಿ 534 ರೂವರೆಗೂ ಏರಿದ್ದು ವಿಶೇಷ. ಇವತ್ತು ಗುರುವಾರ (ಫೆ. 15) ಬೆಳಗಿನ ವಹಿವಾಟಿನಲ್ಲಿ ಇದರ ಷೇರುಬೆಲೆ 441 ರೂನಲ್ಲಿ ಇದೆ.
ಸೂರಜ್ ಪ್ರಾಡಕ್ಟ್ಸ್ ಷೇರುಮಾರುಕಟ್ಟೆಗೆ ಪ್ರವೇಶ ಮಾಡಿದಾಗಿನಿಂದ ಅದರ ಷೇರುಬೆಲೆ 3,907 ಪ್ರತಿಶತದಷ್ಟು ಏರಿದೆ. 1991ರಲ್ಲಿ ಚಾಂಪಿಯನ್ ಸಿಮೆಂಟ್ ಇಂಡಸ್ಟ್ರೀಸ್ ಹೆಸರಿನಲ್ಲಿ ಆರಂಭಗೊಂಡ ಸೂರಜ್ ಇಂಡಸ್ಟ್ರೀಸ್ 2002ರ ಬಳಿಕ ಉಕ್ಕು, ಕಬ್ಬಿಣ ಉತ್ಪನ್ನಗಳ ತಯಾರಿಕೆಗೆ ಇಳಿಯಿತು. 2010ರಲ್ಲಿ ಷೇರುಪೇಟೆಗೆ ತೆರೆದುಕೊಂಡಿತು.
ಇದನ್ನೂ ಓದಿ: ಎಫ್ಡಿ, ಮ್ಯೂಚುವಲ್ ಫಂಡ್ಗಿಂತಲೂ ಹೆಚ್ಚು ಲಾಭ ಕೊಡುವ ಗೋಲ್ಡ್ ಬಾಂಡ್ ಖರೀದಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ವಿವರ
ಸೂರಜ್ ಪ್ರಾಡಕ್ಟ್ಸ್ ಮೇಲೆ ಹೂಡಿಕೆ ಮಾಡಿದ್ದವರಿಗೆ ಎಷ್ಟು ಲಾಭ?
ಒಡಿಶಾದಲ್ಲಿ ಫ್ಯಾಕ್ಟರಿ ಹೊಂದಿರುವ ಸೂರಜ್ ಪ್ರಾಡಕ್ಟ್ಸ್ನ ಷೇರುಗಳನ್ನು ಆರಂಭದಲ್ಲಿ ಕೊಂಡಿದ್ದವರಿಗೆ, ಅಂದರೆ 2010ರಲ್ಲಿ 11 ರೂ ಬೆಲೆಗೆ ಖರೀದಿ ಮಾಡಿದ್ದವರ ಷೇರು ಸಂಪತ್ತು 40 ಪಟ್ಟು ಬೆಳೆದಿರುತ್ತದೆ. ಒಂದು ಲಕ್ಷ ರೂ ಮೊತ್ತಕ್ಕೆ ಅಂದು ಸೂರಜ್ ಪ್ರಾಡಕ್ಟ್ಸ್ ಷೇರುಗಳನ್ನು ಖರೀದಿಸಿದ್ದರೆ ಇವತ್ತು ಆ ಹೂಡಿಕೆ 40 ಲಕ್ಷ ರೂ ಆಗಿ ಬೆಳೆದಿರುತ್ತಿತ್ತು. ಅಂದರೆ 14 ವರ್ಷದಲ್ಲಿ ಒಂದು ಲಕ್ಷ ರೂ ಹಣ 40 ಲಕ್ಷ ರೂ ಆಗಿ ಬೆಳೆಯುವುದು ಸಾಮಾನ್ಯದ ವಿಚಾರವಲ್ಲ.
ಆದರೆ, ಸೂರಜ್ ಪ್ರಾಡಕ್ಟ್ಸ್ ಷೇರುಬೆಲೆ 2010ರಿಂದ 2020ರ ಅವಧಿಯಲ್ಲಿ ಹೆಚ್ಚಲೇ ಇರಲಿಲ್ಲ. 2020 ಮೇ 29ರಂದು 7.30 ರೂ ಬೆಲೆ ಹೊಂದಿತ್ತು. ಫೆಬ್ರುವರಿ 9ಕ್ಕೆ ಷೇರುಬೆಲೆ 477 ರೂಗೆ ಏರಿತ್ತು. ಅದೇ ವಾರ ಅದರ ಬೆಲೆ 534 ರೂವರೆಗೂ ಹೋಗಿತ್ತು.
ಇದನ್ನೂ ಓದಿ: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?
ಮೂರು ವರ್ಷದಲ್ಲಿ 73 ಪಟ್ಟು ಬೆಳೆದ ಹೂಡಿಕೆ
ಷೇರುಬೆಲೆ 7.30 ರೂ ಇದ್ದಾಗ ಸೂರಜ್ ಪ್ರಾಡಕ್ಟ್ಸ್ ಷೇರನ್ನು ಖರೀದಿಸಿದವರಿಗೆ, ಅಂದರೆ 2020ರ ಮೇ ತಿಂಗಳಲ್ಲಿ ಇದರ ಮೇಲೆ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಈ ತಿಂಗಳು ಆ ಹೂಡಿಕೆಮೌಲ್ಯ 73 ಲಕ್ಷ ರೂ ಆಗಿರುತ್ತಿತ್ತು. ಅಂದರೆ 4 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಹೂಡಿಕೆ 73 ಪಟ್ಟು ಬೆಳೆದಿರುತ್ತಿತ್ತು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ