RML: ವಯಸ್ಸಾದವರಿಗೊಂದು ಹಣಕಾಸು ಅಸ್ತ್ರ; ಮನೆಪತ್ರ ಅಡ ಇಟ್ಟು ಹಣ ಪಡೆಯಿರಿ, ಸಾಯುವವರೆಗೂ ಮನೆಮಾಲೀಕರಾಗಿರಿ

|

Updated on: Nov 05, 2023 | 5:48 PM

Reverse Mortgage Loan: ನೀವು ಮನೆಯನ್ನು ಮಾರದೇ, ಆ ಮನೆ ಮೇಲೆ ಸಾಲ ಪಡೆದು ಆರಾಮವಾಗಿ ಜೀವನ ನಡೆಸಬಹುದು. ಕಂತುಗಳನ್ನು ಕಟ್ಟುವ ಚಿಂತೆ ಇಲ್ಲದೇ ಕೊನೆಯ ದಿನಗಳನ್ನು ಕಳೆಯಬಹುದು. ಇದುವೇ ರಿವರ್ಸ್ ಮಾರ್ಟ್​ಗೇಜ್ ಲೋನ್ ಎಂಬ ಹಣಕಾಸು ಆಯ್ಕೆ. ಇದನ್ನು 60 ವರ್ಷ ಮೇಲ್ಪಟ್ಟ ವಯಸ್ಸಿನ ಮತ್ತು ಮನೆ ಮಾಲೀಕತ್ವ ಇರುವ ಹಿರಿಯ ನಾಗರಿಕರಿಗೆ ಬ್ಯಾಂಕುಗಳು ನೀಡುವ ಒಂದು ಆಯ್ಕೆ. ಇದು ಗೃಹಸಾಲದ ರೀತಿಯದ್ದು, ಆದರೆ, ಸಾಕಷ್ಟು ಭಿನ್ನ.

RML: ವಯಸ್ಸಾದವರಿಗೊಂದು ಹಣಕಾಸು ಅಸ್ತ್ರ; ಮನೆಪತ್ರ ಅಡ ಇಟ್ಟು ಹಣ ಪಡೆಯಿರಿ, ಸಾಯುವವರೆಗೂ ಮನೆಮಾಲೀಕರಾಗಿರಿ
ರಿವರ್ಸ್ ಮಾರ್ಟ್​ಗೇಜ್ ಲೋನ್
Follow us on

ವಯಸ್ಸಾದವರಿಗೆ ಪಿಂಚಣಿ ಬಿಟ್ಟರೆ ಸಾಮಾನ್ಯವಾಗಿ ಬೇರೆ ಆದಾಯ ಮೂಲ ಇರುವುದಿಲ್ಲ. ಹಣ ಹೂಡಿಕೆ ಮಾಡಿ, ಮಾಸಿಕವಾಗಿ ಹಣ ಬರುವಂತೆ ಮಾಡಿಕೊಳ್ಳುವವರು ಕಡಿಮೆ. ಸಂಪಾದನೆ ಸಮಯದಲ್ಲಿ ಸ್ವಂತ ಮನೆ ಮಾಡಿಕೊಂಡಿರಬಹುದು. ಆದರೆ ಅದರಿಂದ ನಿಯಮಿತ ಆದಾಯ ಪಡೆಯಬೇಕೆಂದರೆ ಹಲವು ಮನೆಗಳನ್ನು ಕಟ್ಟಿ ಬಾಡಿಗೆ ಬರುವಂತಿರಬೇಕು. ಕೇವಲ ಒಂದು ಮನೆ ಮಾತ್ರ ಇಟ್ಟುಕೊಂಡು ಜೀವನ ನಡೆಸುತ್ತಿರುವ ವೃದ್ಧರು ಏನು ಮಾಡಬೇಕು? ಒಂದು, ಮಕ್ಕಳ ಸಂಪಾದನೆ ನಂಬಿಕೊಳ್ಳಬೇಕು; ಇನ್ನೊಂದು, ಮನೆ ಮಾರಿ ಆ ಹಣವನ್ನು ಬ್ಯಾಂಕ್​ನಲ್ಲಿಟ್ಟು ಅದರಿಂದ ಜೀವನ ನಡೆಸಬೇಕು. ಇಲ್ಲಿ ಮೂರನೇ ಆಯ್ಕೆಯೊಂದು ಇದೆ. ನೀವು ಮನೆಯನ್ನು ಮಾರದೇ, ಆ ಮನೆ ಮೇಲೆ ಸಾಲ ಪಡೆದು ಆರಾಮವಾಗಿ ಜೀವನ ನಡೆಸಬಹುದು. ಕಂತುಗಳನ್ನು ಕಟ್ಟುವ ಚಿಂತೆ ಇಲ್ಲದೇ ಕೊನೆಯ ದಿನಗಳನ್ನು ಕಳೆಯಬಹುದು. ಇದುವೇ ರಿವರ್ಸ್ ಮಾರ್ಟ್​ಗೇಜ್ ಲೋನ್ (RML- Reverse Mortgage Loan) ಎಂಬ ಹಣಕಾಸು ಆಯ್ಕೆ.

ಏನಿದು ರಿವರ್ಸ್ ಮಾರ್ಟ್​ಗೇಜ್ ಲೋನ್?

ಇದನ್ನು 60 ವರ್ಷ ಮೇಲ್ಪಟ್ಟ ವಯಸ್ಸಿನ ಮತ್ತು ಮನೆ ಮಾಲೀಕತ್ವ ಇರುವ ಹಿರಿಯ ನಾಗರಿಕರಿಗೆ ಬ್ಯಾಂಕುಗಳು ನೀಡುವ ಒಂದು ಆಯ್ಕೆ. ಇದು ಗೃಹಸಾಲದ ರೀತಿಯದ್ದು, ಆದರೆ, ಸಾಕಷ್ಟು ಭಿನ್ನ.

ಗೃಹಸಾಲದಲ್ಲಿ ನೀವು ಮನೆಪತ್ರವನ್ನು ಬ್ಯಾಂಕಿಗೆ ಅಡ ಇಟ್ಟು ಸಾಲ ಪಡೆಯುತ್ತೀರಿ. ತಿಂಗಳು ತಿಂಗಳು ಸಾಲದ ಕಂತುಗಳನ್ನು ಕಟ್ಟುತ್ತೀರಿ. ಅಲ್ಲಿಯವರೆಗೂ ನಿಮ್ಮ ಮನೆ ಮಾಲಿಕತ್ವ ಬ್ಯಾಂಕಿಗೆ ಸೇರಿದ್ದು. ನೀವು ಸಾಲ ತೀರಿಸಿದ ಬಳಿಕ ನಿಮ್ಮ ಆಸ್ತಿಪತ್ರವನ್ನು ಬ್ಯಾಂಕ್ ಮರಳಿಸುತ್ತದೆ.

ಇದನ್ನೂ ಓದಿ: Money Tricks: ಹಣ ಉಳಿತಾಯಕ್ಕೆ ಈ ಉಪಾಯಗಳು ಬೆಸ್ಟ್; ಭವಿಷ್ಯ ಭದ್ರ ಮಾಡಿಕೊಳ್ಳುವ ಟ್ರಿಕ್ಸ್ ಇವು

ಆದರೆ, ರಿವರ್ಸ್ ಮಾರ್ಟ್​ಗೇಜ್ ಲೋನ್, ಅಥವಾ ಹಿಮ್ಮುಖ ಅಡಮಾನ ಸಾಲದಲ್ಲಿ ನೀವು ನಿಮ್ಮ ಮನೆಯ ಮೇಲೆ ಸಾಲ ಪಡೆಯುತ್ತೀರಿ. ಆದರೆ, ಸಾಲದ ಹಣವನ್ನು ಯಾವತ್ತೂ ಕಟ್ಟಬೇಕಿಲ್ಲ. ಬ್ಯಾಂಕ್ ನಿಮಗೆ ಒಮ್ಮೆಗೇ ಎಲ್ಲಾ ಮೊತ್ತವನ್ನು ಕೊಡದೇ ತಿಂಗಳಿಗೆ ನಿಗದಿತ ಮೊತ್ತವನ್ನು ನಿಮಗೆ ಕೊಡುತ್ತಾ ಹೋಗುತ್ತದೆ. ನೀವು ಮತ್ತು ಸಂಗಾತಿ ಸಾಯುವವರೆಗೂ ಮನೆ ಮಾಲಿಕತ್ವ ನಿಮದೇ ಆಗಿರುತ್ತದೆ.

ನೀವು ಸತ್ತ ಬಳಿಕ ಮನೆ ಹಕ್ಕು ಬ್ಯಾಂಕಿಗೆ ಹೋಗುತ್ತದೆ. ನಿಮಗೆ ಉತ್ತಾಧಿಕಾರಿ ಇದ್ದಲ್ಲಿ ಅವರು ಸಾಲದ ಮೊತ್ತವನ್ನು ಬಡ್ಡಿಸಮೇತ ತೀರಿಸಿದರೆ ಮನೆ ಮಾಲಿಕತ್ವ ಪಡೆಯಬಹುದು. ಇಲ್ಲದಿದ್ದರೆ ಬ್ಯಾಂಕು ನಿಮ್ಮ ಮನೆಯನ್ನು ಹರಾಜಿಗೆ ಹಾಕಿ ಅದರಿಂದ ಬಂದ ಹಣದಲ್ಲಿ ತನ್ನ ಸಾಲದ ಮೊತ್ತವನ್ನು ಜಮೆ ಮಾಡಿಕೊಳ್ಳುತ್ತದೆ.

ರಿವರ್ಸ್ ಮಾರ್ಟ್​ಗೇಜ್ ಲೋನ್​ನ ನಿದರ್ಶನ

ನೀವು ನಿಮ್ಮ ಮನೆಯ ಮೇಲೆ ಆರ್​ಎಂಎಲ್ ಪಡೆಯಲು ನಿರ್ಧರಿಸಿ ಬ್ಯಾಂಕ್​ನಲ್ಲಿ ಅರ್ಜಿ ಸಲ್ಲಿಸುತ್ತೀರಿ. ಬ್ಯಾಂಕ್​ನವರು ನಿಮ್ಮ ಮನೆಯ ಮೌಲ್ಯವನ್ನು ಎಸ್ಟಿಮೇಟ್ ಹಾಕುತ್ತಾರೆ. ಒಂದೂವರೆ ಕೋಟಿ ರೂ ಎಂದಿದ್ದರೆ, ಆ ಮೊತ್ತದ ಶೇ. 70ರಿಂದ 80ರಷ್ಟು ಹಣವನ್ನು ಸಾಲವಾಗಿ ನಿಮಗೆ ನೀಡುತ್ತಾರೆ. ಅಂದರೆ ಒಂದು ಕೋಟಿ ರೂಗಿಂತ ಹೆಚ್ಚು ಮೊತ್ತದ ಹಣವನ್ನು ಸಾಲವಾಗಿ ಮಂಜೂರು ಮಾಡಲಾಗುತ್ತದೆ.

ಗೃಹಸಾಲಕ್ಕಿಂತ ಈ ಸಾಲಕ್ಕೆ ಶೇ. 2ರಿಂದ 3ರಷ್ಟು ಬಡ್ಡಿದರ ಹೆಚ್ಚಿರುತ್ತದೆ. ಮುಂದಿನ 15ರಿಂದ 20 ವರ್ಷ ಕಾಲ ಪ್ರತೀ ತಿಂಗಳು ನಿಮಗೆ ಕಂತುಗಳನ್ನು ಸಿಗುವಂತೆ ಲೆಕ್ಕ ಮಾಡಲಾಗುತ್ತದೆ. ಅದರಲ್ಲಿ ಬಡ್ಡಿಹಣವನ್ನೂ ಮುರಿದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್​ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ

ರಿವರ್ಸ್ ಮಾರ್ಟ್​ಗೇಜ್ ಲೋನ್​ನ ಪ್ರಯೋಜನಗಳು…

  • ಮಕ್ಕಳ ಆದಾಯದ ಮೇಲೆ ಅವಲಂಬಿತರಾಗದೇ ತಮ್ಮ ಸ್ವಂತ ಮನೆಯಿಂದ ನಿಯಮಿತ ಆದಾಯ ಪಡೆದು ಸ್ವಾವಲಂಬಿ ಜೀವನ ನಡೆಸಬಹುದು.
  • ಸಾಯುವವರೆಗೂ ಮನೆಯ ಮಾಲೀಕತ್ವ ಇರುತ್ತದೆ. ಮನೆ ಖಾಲಿ ಮಾಡಬೇಕಾದ ಭಯ ಇರುವುದಿಲ್ಲ. ಸಾಲ ಮರುಪಾವತಿಸುವ ಚಿಂತೆ ಬೇಕಾಗಿರುವುದಿಲ್ಲ.
  • ಹಾಗೆಯೇ, ಈ ಹಣಕ್ಕೆ ಆದಾಯ ತೆರಿಗೆ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ