ELSS Mutual Fund: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

|

Updated on: Feb 13, 2023 | 10:51 AM

Tax Saving Funds; ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡುವ ಮೂಲಕ ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ELSS Mutual Fund: ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ತೆರಿಗೆ ವಿನಾಯಿತಿ ಪಡೆಯಲು ಹಲವಾರು ಆಯ್ಕೆಗಳಿವೆ. ಅವುಗಳಲ್ಲಿ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್​​ನಲ್ಲಿ (ELSS Mutual Fund) ಮಾಡುವ ಹೂಡಿಕೆಯೂ ಪ್ರಮುಖವಾದದ್ದಾಗಿದೆ. ಇಎಲ್​ಎಸ್​ಎಸ್ ಇದರ ವಿಸ್ತೃತ ರೂಪ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್, ಅಂದರೆ ಷೇರು ಸಂಯೋಜಿತ ಉಳಿತಾಯ ಯೋಜನೆ ಎಂದಾಗಿದೆ. ಈ ಯೋಜನೆಯಲ್ಲಿ ಸ್ವತ್ತು ನಿರ್ವಹಣಾ ಕಂಪನಿಗಳು ತಮ್ಮ ಸ್ವತ್ತನ್ನು ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಸ್ವತ್ತು ನಿರ್ವಹಣಾ ಕಂಪನಿಗಳ ಮೂಲಕ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡುವ ಮೂಲಕ ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು?

ವ್ಯಕ್ತಿಗಳು ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಉಳಿತಾಯ ಮಾಡಬಹುದಾದ ಮ್ಯೂಚುವಲ್ ಫಂಡ್ ಉಳಿತಾಯ ಯೋಜನೆಯೇ ಇಎಲ್​​ಎಸ್​​ಎಸ್. ಮೇಲೆ ತಿಳಿಸಿದಂತೆ, ಇದರ ವಿಸ್ತೃತ ರೂಪ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಅನೇಕ ಫಂಡ್​ ಹೌಸ್​​ಗಳು ಈ ಸ್ಕೀಮ್​ ಅನ್ನು ಒದಗಿಸುತ್ತವೆ. ಐಡಿಎಫ್​ಸಿ ಟ್ಯಾಕ್ಸ್ ಅಡ್ವಾಂಟೇಜ್, ಕೆನರಾ ರೋಬಿಕೋ ಈಕ್ವಿಟಿ ಟ್ಯಾಕ್ಸ್ ಸೇವರ್, ಮಿರಾಯೆ ಅಸೆಟ್ ಟ್ಯಾಕ್ಸ್ ಸೇವರ್ ಫಂಡ್, ಡಿಎಸ್​​ಪಿ ಟ್ಯಾಕ್ಸ್ ಸೇವರ್ ಇಎಲ್​​ಎಸ್​​ಎಸ್ ಮ್ಯೂಚುವಲ್ ಫಂಡ್​ಗಳಿಗೆ ಕೆಲವು ಉದಾಹರಣೆಗಳಾಗಿವೆ.

ಇಎಲ್​​ಎಸ್​​ಎಸ್ ಮ್ಯೂಚುವಲ್ ಫಂಡ್ ಹೂಡಿಕೆಗೆ 3 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ. 3 ವರ್ಷಕ್ಕೂ ಮೊದಲೇ ಹೂಡಿಕೆದಾರರಿಗೆ ತಮ್ಮ ಹಣವನ್ನು ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಅಂದರೆ, ಯೂನಿಟ್ ಅಲೊಟ್​ಮೆಂಟ್​ ಆದ ನಂತರ ಮಾರಾಟ ಮಾಡಲು 3 ವರ್ಷಗಳಾಗಬೇಕು. ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಯೂನಿಟ್​​ಗಳನ್ನು ಹಂಚಿಕೆ ಮಾಡಲಾಗುತ್ತದೆ.

ಇಎಲ್​ಎಸ್​​ಎಸ್​ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಆದಾಯಕ್ಕೆ ಇಎಲ್​ಎಸ್​​ಎಸ್​ ಮ್ಯೂಚುವಲ್ ಫಂಡ್ ಹೂಡಿಕೆ ಮೂಲಕ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಉದಾಹರಣೆಗೆ; ವ್ಯಕ್ತಿಯೊಬ್ಬರು ಇಎಲ್​ಎಸ್​​ಎಸ್​ ಮ್ಯೂಚುವಲ್ ಫಂಡ್​ನಲ್ಲಿ 50,000 ರೂ. ಹೂಡಿಕೆ ಮಾಡಿದ್ದರೆ, ಒಟ್ಟು ತೆರಿಗೆ ವ್ಯಾಪ್ತಿಗೆ ಬರುವ ಆದಾಯದಿಂದ ಈ ಮೊತ್ತವನ್ನು ಕಳೆಯಲಾಗುತ್ತದೆ. ಇದರಿಂದ ತೆರಿಗೆ ಹೊರೆ ಕಡಿಮೆಯಾಗಲಿದೆ. ಈ ವಿಧಾನದಲ್ಲಿ ಹೂಡಿಕೆ ಮಾಡುವ ಮೂಲಕ ವಾರ್ಷಿಕವಾಗಿ 46,800 ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ನೆನಪಿರಲಿ; ಮಾರುಕಟ್ಟೆ ರಿಸ್ಕ್​​ಗಳಿಂದ ಹೊರತಲ್ಲ

ಇಎಲ್​ಎಸ್​​ಎಸ್​ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಮಾರುಕಟ್ಟೆ ರಿಸ್ಕ್​​ಗಳಿಂದ ಮುಕ್ತವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 3 ವರ್ಷಗಳ ವರೆಗೆ ಹಿಂಪಡೆಯಲಾಗುವುದಿಲ್ಲವಾದ ಕಾರಣ ಆ ಸಂದರ್ಭದಲ್ಲಿನ ಮಾರುಕಟ್ಟೆ ಏರಿಳಿತಗಳು ಹೂಡಿಕೆ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ ಇದು ಷೇರುಗಳ ಮೇಲೆ ಮಾಡುವ ಹೂಡಿಕೆಯಾಗಿದೆ. ಹಿಂಪಡೆಯುವ ಸಂದರ್ಭದಲ್ಲಿ ಮಾರುಕಟ್ಟೆ ಉತ್ತಮ ಗಳಿಕೆ ದಾಖಲಿಸುತ್ತಿದ್ದರೆ ಹೆಚ್ಚಿನ ಲಾಭವೂ ದೊರೆಯಬಹುದು. ಹಾಗೆಂದು ತೆರಿಗೆ ಉಳಿಸುವ ಸ್ಥಿರ ಠೇವಣಿಗಳಲ್ಲಿ (ಎಫ್​ಡಿ) ಹೂಡಿಕೆ ಮಾಡುವುದಾದರೆ 5 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ ಎಂಬುದು ನೆನಪಿರಲಿ.

ಇಎಲ್​ಎಸ್​​ಎಸ್​ ಮ್ಯೂಚುವಲ್​ ಫಂಡ್​ನಲ್ಲಿ ಹೂಡಿಕೆ ಮಾಡುವುದು ಹೇಗೆ?

ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಎಸ್​ಐಪಿ (SIP) ವಿಧಾನದಲ್ಲಿ ಹಾಗೂ ಒಂದು ಬಾರಿಯ ಹೂಡಿಕೆ ಅಥವಾ ಲಂಸಮ್ (Lumpsum) ಹೂಡಿಕೆ ಮಾಡಲೂ ಇಎಲ್​ಎಸ್​​ಎಸ್​ ಮ್ಯೂಚುವಲ್​ ಫಂಡ್​ನಲ್ಲಿ ಅವಕಾಶವಿದೆ. ಎಸ್​ಐಪಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಕನಿಷ್ಠ ಮಿತಿ ಮ್ಯೂಚುವಲ್​ ಫಂಡ್​​ ಹೌಸ್​​ಗಳಲ್ಲಿ ಭಿನ್ನವಾಗಿರುತ್ತವೆ.

ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್​ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ

ಲಂಸಮ್ ಹೂಡಿಕೆ ಅಷ್ಟು ಉತ್ತಮವಲ್ಲ. ಇದರಲ್ಲಿ ಮಾರುಕಟ್ಟೆ ವಹಿವಾಟು ಕುಸಿದ ಸಂದರ್ಭದಲ್ಲಿ ನಷ್ಟ ಅನುಭವಿಸುವ ಆತಂಕ ಹೆಚ್ಚಿರುತ್ತದೆ. ಅದನ್ನು ಸರಿದೂಗಿಸಲು 5-7 ವರ್ಷಗಳ ದೀರ್ಘಾವಧಿ ಹೂಡಿಕೆ ಮಾಡಬೇಕಾಗಿ ಬರಬಹುದು ಎಂದು ‘ಕ್ಲಿಯರ್​​​ ಟ್ಯಾಕ್ಸ್’ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ