ಸಾವರನ್ ಗೋಲ್ಡ್ ಬಾಂಡ್ನ 2023-24ನೇ ಸಾಲಿನ ನಾಲ್ಕನೇ ಸರಣಿ (Sovereign Gold Bond 2023-24 Series IV) ಇಂದು ಬಿಡುಗಡೆ ಆಗಲಿದೆ. ಫೆಬ್ರುವರಿ 16ರವರೆಗೂ ಐದು ದಿನಗಳ ಕಾಲ ಈ ಸರಣಿಯ ಬಾಂಡ್ ಮಾರಾಟಕ್ಕೆ ಲಭ್ಯ ಇದೆ. ಆರ್ಬಿಐ ವತಿಯಿಂದ ನಡೆಯುವ ಈ ಜನಪ್ರಿಯ ಹೂಡಿಕೆ ಯೋಜನೆಯಲ್ಲಿ ಈ ಬಾರಿಯ ಸರಣಿಯಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆಯನ್ನು 6,263 ರೂ ಎಂದು ನಿಗದಿ ಮಾಡಲಾಗಿದೆ. ಒಬ್ಬ ವ್ಯಕ್ತಿ ನಾಲ್ಕು ಕಿಲೋ ಚಿನ್ನದವರೆಗೂ ಹೂಡಿಕೆ ಮಾಡಬಹುದು. ಅಂದರೆ, ಈ ನಾಲ್ಕನೇ ಸರಣಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 2.5 ಕೋಟಿ ರೂವರೆಗೆ ಹೂಡಿಕೆ ಮಾಡಬಹುದು.
ಸಾವರನ್ ಗೋಲ್ಡ್ ಬಾಂಡ್ ಅನ್ನು ಸರ್ಕಾರದ ಪರವಾಗಿ ಆರ್ಬಿಐ ವಿತರಿಸುತ್ತದೆ. ಎಸ್ಬಿಐ, ಎಚ್ಡಿಎಫ್ಸಿ ಇತ್ಯಾದಿ ಕಮರ್ಷಿಯಲ್ ಬ್ಯಾಂಕುಗಳು, ಅಂಚೆ ಕಚೇರಿಗಳು ಹಾಗೂ ಷೇರು ವಿನಿಮಯ ಕೇಂದ್ರಗಳಲ್ಲಿ ಮೊದಲಾದ ಕಡೆ ಸಾವರನ್ ಗೋಲ್ಡ್ ಬಾಂಡ್ಗಳನ್ನು ಪಡೆಯಬಹುದು.
ಒಬ್ಬ ವ್ಯಕ್ತಿಯಾದರೆ 4 ಕಿಲೋ, ಟ್ರಸ್ಟ್ನಂಥ ಸಂಸ್ಥೆಗಳಾದರೆ 20 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುವುದಾದರೆ ಗ್ರಾಮ್ಗೆ 6,263 ರೂನಂತೆ ಒಟ್ಟು 6,26,300 ರೂ ಮೊತ್ತದ ಬಾಂಡ್ ಅನ್ನು ಖರೀದಿಸಬೇಕಾಗುತ್ತದೆ.
ಇದನ್ನೂ ಓದಿ: ಶೇ. 13.6ರಷ್ಟು ರಿಟರ್ನ್; ಈಕ್ವಿಟಿಗಿಂತಲೂ ಹೆಚ್ಚು ಲಾಭ ಕೊಟ್ಟಿದೆ 2016ರ ಸಾವರನ್ ಗೋಲ್ಡ್ ಬಾಂಡ್ ಪ್ಲಾನ್
ಆನ್ಲೈನ್ನಲ್ಲಿ ಹಣ ಪಾವತಿಸುವುದಾದರೆ ಗ್ರಾಮ್ಗೆ 50 ರೂ ರಿಯಾಯಿತಿ ಇರುತ್ತದೆ. ಈ ನಾಲ್ಕನೇ ಸರಣಿಯ ಬಾಂಡ್ನ ಬೆಲೆಯಾಗಿ 6,263 ರೂ ಇದೆ. ಇದಕ್ಕೆ 50 ರೂ ಡಿಸ್ಕೌಂಟ್ ಎಂದರೆ 6,213 ರೂ ಆಗುತ್ತದೆ. 100 ಗ್ರಾಮ್ ಹೂಡಿಕೆಯಲ್ಲಿ 5,000 ರೂ ಡಿಸ್ಕೌಂಟ್ ಸಿಕ್ಕಂತಾಗುತ್ತದೆ.
ಚಿನ್ನದ ಬದಲು ಆ ಬೆಲೆಯ ಬಾಂಡ್ ಅನ್ನು ಪಡೆಯಬಹುದು. ಎಂಟು ವರ್ಷಕ್ಕೆ ಈ ಸ್ಕೀಮ್ ಮೆಚ್ಯೂರ್ ಆಗುತ್ತದೆ. ಮೆಚ್ಯೂರ್ ಆಗುವಾಗ ಚಿನ್ನದ ಬೆಲೆ ಎಷ್ಟಿರುತ್ತದೋ ಅದಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆಯ ಮೌಲ್ಯ ಹೆಚ್ಚಿರುತ್ತದೆ. ಚಿನ್ನ ಸಾಮಾನ್ಯವಾಗಿ ವರ್ಷಕ್ಕೆ ಶೇ. 10ರಿಂದ ಶೇ. 16ರಷ್ಟು ಬೆಳೆಯುತ್ತದೆ. ಎಂಟು ವರ್ಷದಲ್ಲಿ ಹೂಡಿಕೆಯ ಮೌಲ್ಯ ಕನಿಷ್ಠ ಡಬಲ್ ಆಗಿರುತ್ತದೆ.
ಸಾವರನ್ ಗೋಲ್ಡ್ ಬಾಂಡ್ನ ಇನ್ನೊಂದು ಪ್ರಯೋಜನವೆಂದರೆ ಅದು ತರುವ ಬಡ್ಡಿ ಆದಾಯ. ನೀವು ಮಾಡಿದ ಹೂಡಿಕೆಯ ಮೊತ್ತಕ್ಕೆ ವರ್ಷಕ್ಕೆ ಶೇ. 2.50ರಷ್ಟು ಬಡ್ಡಿ ಹಣವನ್ನು ನೀವು ಪಡೆಯಬಹುದು.
ಇದನ್ನೂ ಓದಿ: ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾ? ಈ ವಿಷಯ ತಿಳಿದಿರಲಿ
ಸಾವರನ್ ಗೋಲ್ಡ್ ಬಾಂಡ್ ಮೆಚ್ಯೂರ್ ಆದಾಗ ಅದರಿಂದ ಬರುವ ಲಾಭಕ್ಕೆ ತೆರಿಗೆ ಇರುವುದಿಲ್ಲ. ಆದರೆ, ಹೂಡಿಕೆಗೆ ನೀಡಲಾಗುವ ಶೇ. 2.50ರಷ್ಟು ಬಡ್ಡಿ ಆದಾಯಕ್ಕೆ ತೆರಿಗೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ