ಹೊಸ ವರ್ಷ ಆರಂಭವಾಗಲು ಇನ್ನೇನು ಕೆಲವೇ ದಿನಗಳಿವೆ. ತೆರಿಗೆ ಉಳಿತಾಯಕ್ಕಾಗಿ (Tax Savings) ಹೂಡಿಕೆ ದಾಖಲೆಗಳನ್ನು ಸಲ್ಲಿಸುವ ಸಮಯವೂ ಬಂದಿದೆ. ಉತ್ತಮ ರಿಟರ್ನ್ಸ್ ನೀಡುವ, ತೆರಿಗೆ ಉಳಿತಾಯಕ್ಕೂ ನೆರವಾಗಬಲ್ಲಂಥ ಹೂಡಿಕೆ ಯೋಜನೆಗಳನ್ನು (Investment) ಆಯ್ಕೆ ಮಾಡಿಕೊಳ್ಳಲು ನೀವು ಬಯಸುತ್ತೀರಾದರೆ ಈ ಕೆಳಗೆ ನೀಡಿರುವ ಐದು ಯೋಜನೆಗಳನ್ನು ಗಮನಿಸಬಹುದು.
ಪಿಪಿಎಫ್ (PPF)
ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಒಂದು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಲು ಅನುವು ಮಾಡಿಕೊಡುತ್ತದೆ. ಪಿಪಿಎಫ್ ಯೋಜನೆಯಡಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಲು ಅವಕಾಶವಿದೆ. ವರ್ಷದ ಹೂಡಿಕೆಯನ್ನು ಹಲವು ಕಂತುಗಳಲ್ಲಿ ಅಥವಾ ಒಂದೇ ಬಾರಿಗೆ ಪಾವತಿಸುವ ಅವಕಾಶವಿದೆ. ಈ ಹೂಡಿಕೆ ಯೋಜನೆ ದೀರ್ಘಾವಧಿಗೆ ಉತ್ತಮ ರಿಟರ್ನ್ಸ್ ತಂದುಕೊಡಬಲ್ಲದು. ಪ್ರಸ್ತುತ ಪಿಪಿಎಫ್ ಹೂಡಿಕೆ ಮೇಲೆ ಶೇಕಡಾ 7.1 ರ ಬಡ್ಡಿ ನೀಡಲಾಗುತ್ತಿದೆ.
ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ಗಳು (Tax-Saving Mutual Funds)
ಈಕ್ವಿಟಿ ಸಂಯೋಜಿತ ಉಳಿತಾಯ ಯೋಜನೆಗಳು (ELSS) ಉತ್ತಮ ರಿಟರ್ನ್ಸ್ ತಂದುಕೊಡಬಲ್ಲದ್ದಾಗಿವೆ. ಜತೆಗೆ ತೆರಿಗೆ ಉಳಿಕೆಗೂ ಸಹಕಾರಿಯಾಗಿವೆ. ಈ ಯೋಜನೆಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಲು ಅನುವು ಮಾಡಿಕೊಡುವುದಲ್ಲದೆ ತೆರಿಗೆ ಉಳಿಸುವ ಮ್ಯೂಚುವಲ್ ಫಂಡ್ಗಳೆಂದು ಗುರುತಿಸಲ್ಪಟ್ಟಿವೆ. ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ಗಳಲ್ಲಿ ವಾರ್ಷಿಕ 1.5 ಲಕ್ಷ ವರೆಗೆ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್ಪಿಎಸ್ (NPS)
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್ಪಿಎಸ್ ಸರ್ಕಾರಿ ಪ್ರಾಯೋಜಿತ ತೆರಿಗೆ ಉಳಿತಾಯ ಹೂಡಿಕೆ ಯೋಜನೆಯಾಗಿದೆ. ನಿವೃತ್ತಿ ನಂತರದ ಆದಾಯವನ್ನು ಗಮನದಲ್ಲಿಟ್ಟುಕೊಂಡು ಮಾಡಬಹುದಾದ ಹೂಡಿಕೆ ಇದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಗರಿಷ್ಠ 2 ಲಕ್ಷ ರೂ. ಹಾಗೂ ಸೆಕ್ಷನ್ ಸಿಸಿಡಿ (1) ಅಡಿ 1.5 ಲಕ್ಷ ರೂ. ಹಾಗೂ ಸೆಕ್ಷನ್ ಸಿಸಿಡಿ (1ಬಿ) ಅಡಿ 50,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಇದನ್ನೂ ಓದಿ: NPS: ಎನ್ಪಿಎಸ್ ಖಾತೆಯಿಂದ ಹಣ ವಾಪಸ್ ಪಡೆಯುವುದು ಹೇಗೆ? ಷರತ್ತು, ನಿಯಮಗಳ ಪೂರ್ಣ ವಿವರ ಇಲ್ಲಿದೆ
ವಿಮಾ ಯೋಜನೆಗಳು (Insurance Plans)
ಜೀವ ವಿಮೆ ಮತ್ತು ಆರೋಗ್ಯ ವಿಮೆಯು ಅನಿವಾರ್ಯ ಭಾಗವಾಗಿದ್ದು, ಅನಿರೀಕ್ಷಿತ ನಷ್ಟಗಳಿಂದ ಸ್ವತ್ತುಗಳನ್ನು ರಕ್ಷಿಸಲು ನೆರವಾಗುತ್ತವೆ. ಈ ವಿಮೆಗಳ ಪ್ರೀಮಿಯಂಗೆ ಆದಾಯ ತೆರಿಗೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ವಿನಾಯಿತಿ ದೊರೆಯುತ್ತದೆ.
ಪಿಎಫ್ (PF)
ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಪಿಎಫ್ ಯೋಜನೆಗೂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ದೊರೆಯುತ್ತದೆ.
ಹೂಡಿಕೆ ಮತ್ತು ತೆರಿಗೆ ಯೋಜನೆ ಯಶಸ್ವಿಯಾಗಿ ಉಳಿತಾಯ ಮಾಡುವಲ್ಲಿ ಮತ್ತು ಸಂಪತ್ತು ಗಳಿಸುವಲ್ಲಿ ಪ್ರಮುಖವಾದದ್ದಾಗಿವೆ. ಪಿಪಿಎಫ್, ಸುಕನ್ಯಾ ಸಮೃಧ್ಧಿ ಯೋಜನೆ, ಈಕ್ವಿಟಿ ಸಂಯೋಜಿತ ಉಳಿತಾಯ ಯೋಜನೆಗಳು, ತೆರಿಗೆ ಉಳಿಸುವ ಎಫ್ಡಿಗಳು ತೆರಿಗೆ ಉಳಿಸಲು ಉತ್ತಮ ಯೋಜನೆಗಳಾಗಿವೆ ಎಂದು ಬ್ಯಾಂಕ್ ಬಜಾರ್ ಸಿಇಒ ಅದಿಲ್ ಶೆಟ್ಟಿ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ತೆರಿಗೆ ಉಳಿತಾಯವು ಹೂಡಿಕೆಯ ಮೇಲೆ ಹಲವು ವಿಧಗಳಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದರ ಜತೆ ಆದಾಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ನಿಮ್ಮ ಸಂಪತ್ತು ವೃದಚ್ಧಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ