ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಡೆಪಾಸಿಟ್ ರೇಟ್ ಶೇ. 8.10; ಇದರ ವಾರ್ಷಿಕ ಯೀಲ್ಡ್ ಶೇ. 8.35

Suryoday Small Finance Bank revises its Fixed Deposit Rates and SB account rates: ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಠೇವಣಿ ದರ ಶೇ. 4ರಿಂದ ಶೇ. 8.05ರವರೆಗೂ ಇದೆ. ಹಿರಿಯ ನಾಗರಿಕರಿಗೆ ಶೇ. 8.10ರವರೆಗೂ ಬಡ್ಡಿ ಸಿಗುತ್ತದೆ. ಈ ಕಿರು ಬ್ಯಾಂಕ್​ನಲ್ಲಿ ಸೇವಿಂಗ್ಸ್ ಅಕೌಂಟ್​ನಲ್ಲಿ 10 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಹಣಕ್ಕೆ ಶೇ 7.50ರಷ್ಟು ಬಡ್ಡಿ ಸಿಗುತ್ತದೆ.

ಈ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಡೆಪಾಸಿಟ್ ರೇಟ್ ಶೇ. 8.10; ಇದರ ವಾರ್ಷಿಕ ಯೀಲ್ಡ್ ಶೇ. 8.35
ಠೇವಣಿ

Updated on: Oct 10, 2025 | 11:33 AM

ಬೆಂಗಳೂರು, ಅಕ್ಟೋಬರ್ 10: ಷೇರು ಮಾರುಕಟ್ಟೆ ಕಳೆದ ಒಂದು ವರ್ಷದಿಂದ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಬ್ಯಾಂಕುಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಆರ್​ಬಿಐನ ರಿಪೋ ದರ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಠೇವಣಿ ದರಗಳೂ ಕಡಿಮೆಗೊಳ್ಳಬಹುದು ಎಂಬುದು ಹೂಡಿಕೆದಾರರಿಗೆ ಇರುವ ಆತಂಕವಾಗಿದೆ. ಹೆಚ್ಚಿನ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಗರಿಷ್ಠ ಠೇವಣಿ ದರ (Fixed Deposit) ಶೇ. 7.50ರವರೆಗೆ ಮಾತ್ರ ಇದೆ. ಆದರೆ, ಸಹಕಾರಿ ಬ್ಯಾಂಕುಗಳು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಹೆಚ್ಚಿನ ಬಡ್ಡಿ ನೀಡುತ್ತವೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು ತನ್ನ ಠೇವಣಿ ದರಗಳನ್ನು ಪರಿಷ್ಕರಿಸಿದ್ದು, ಶೇ. 8.10ರವರೆಗೆ ವಾರ್ಷಿಕ ಬಡ್ಡಿ ಆಫರ್ ಮಾಡುತ್ತಿದೆ.

ಸೂರ್ಯೋದಯ್ ಬ್ಯಾಂಕ್​ನ ವಾರ್ಷಿಕ ಯೀಲ್ಡ್ ಗರಿಷ್ಠ ಶೇ. 8.35

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕರ ಠೇವಣಿಗಳಿಗೆ ಶೇ. 4ರಿಂದ ಆರಂಭವಾಗಿ ಶೇ. 8.05ರವರೆಗೆ ಬಡ್ಡಿ ಕೊಡಲಾಗುತ್ತಿದೆ. ಹಿರಿಯ ನಾಗರಿಕರಾದರೆ ಗರಿಷ್ಠ ಶೇ. 8.10ರಷ್ಟು ಬಡ್ಡಿ ಸಿಗುತ್ತದೆ. ಐದು ವರ್ಷದ ಡೆಪಾಸಿಟ್​ಗಳಿಗೆ ಈ ಗರಿಷ್ಠ ಬಡ್ಡಿ ಸಿಗುತ್ತದೆ.

ಇನ್ನು, ಈ ಠೇವಣಿಗೆ ವಾರ್ಷಿಕ ಬಡ್ಡಿ ಶೇ. 8.10 ಎಂದಾದರೆ ವಾರ್ಷಿಕ ಯೀಲ್ಡ್ ಶೇ. 8.35 ಇರುತ್ತದೆ. ಯೀಲ್ಡ್ ಎಂದರೆ ಬಡ್ಡಿಗೆ ಚಕ್ರ ಬಡ್ಡಿ ಸೇರಿಸಿ ಸಿಗುವ ರಿಟರ್ನ್ಸ್.

ಇದನ್ನೂ ಓದಿ: ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್​ಡಿ ದರಗಳು

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಠೇವಣಿ ಇಡಲು ಕನಿಷ್ಠ ದಿನ 7 ಆಗಿದೆ. ಕಡಿಮೆ ಅವಧಿಗೆ ಠೇವಣಿ ಇಡುತ್ತೇನೆನ್ನುವವರು 6 ತಿಂಗಳು 1 ದಿನದ ಪ್ಲಾನ್ ಆಯ್ದುಕೊಳ್ಳಬಹುದು. ಸಾಮಾನ್ಯ ಗ್ರಾಹಕರಿಗೆ ಶೇ. 6.75ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 6.92 ಬಡ್ಡಿ ಸಿಗುತ್ತದೆ.

ಒಂದು ವರ್ಷದ ಠೇವಣಿಗೂ ಉತ್ತಮ ಬಡ್ಡಿ ಸಿಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.40, ಮತ್ತು ಹಿರಿಯ ನಾಗರಿಕರಿಗೆ ಶೇ. 7.60 ಬಡ್ಡಿ ಸಿಗುತ್ತದೆ. ಆದರೆ, ಐದು ವರ್ಷದ ಠೇವಣಿಗೆ ಗರಿಷ್ಠ ಬಡ್ಡಿ ಆಫರ್ ಮಾಡಲಾಗುತ್ತಿದೆ. ಈ ಪ್ಲಾನ್​ನಲ್ಲಿ ಸಾಮಾನ್ಯ ಗ್ರಾಹಕರಿಗೆ 8.05 ಬಡ್ಡಿ, ಮತ್ತು ಹಿರಿಯ ನಾಗರಿಕರಿಗೆ ಶೇ. 8.10 ಬಡ್ಡಿ ನೀಡಲಾಗುತ್ತದೆ.

ಸೂರ್ಯೋದಯ್ ಎಸ್​ಎಂಬಿಯಲ್ಲಿ ಕೆಲ ಪ್ರಮುಖ ಠೇವಣಿ ದರಗಳು (ಸಾಮಾನ್ಯ ಗ್ರಾಹಕರಿಗೆ)

  • 6 ತಿಂಗಳು 1 ದಿನದ ಠೇವಣಿ: ಶೇ. 6.75 ಬಡ್ಡಿ
  • 1 ವರ್ಷದ ಠೇವಣಿ: ಶೇ. 7.40 ಬಡ್ಡಿ
  • 1-3 ವರ್ಷದವರೆಗಿನ ಠೇವಣಿ: ಶೇ. 7.25 ಬಡ್ಡಿ
  • 5 ವರ್ಷದ ಠೇವಣಿ: ಶೇ. 8.05 ಬಡ್ಡಿ
  • 5 ವರ್ಷ ಮೇಲ್ಪಟ್ಟು: ಶೇ. 7.25 ಬಡ್ಡಿ

ಸೇವಿಂಗ್ಸ್ ಅಕೌಂಟ್​ಗೂ ಒಳ್ಳೆಯ ಬಡ್ಡಿ ಆಫರ್

  • 1 ಲಕ್ಷ ರೂವರೆಗಿನ ಹಣದ ಬ್ಯಾಲನ್ಸ್​ಗೆ: ಶೇ. 2.50 ವಾರ್ಷಿಕ ಬಡ್ಡಿ
  • 1ರಿಂದ 5 ಲಕ್ಷ ರೂ ಬ್ಯಾಲನ್ಸ್: ಶೇ. 3 ಬಡ್ಡಿ
  • 5-10 ಲಕ್ಷ ರೂ ಬ್ಯಾಲನ್ಸ್: ಶೇ. 6.25 ಬಡ್ಡಿ
  • 10 ಲಕ್ಷ ರೂನಿಂದ 2 ಕೋಟಿ ರೂ ಬ್ಯಾಲನ್ಸ್: ಶೇ. 7.50 ಬಡ್ಡಿ
  • 2-5 ಕೋಟಿ ರೂ ಬ್ಯಾಲನ್ಸ್: ಶೇ. 7.50 ಬಡ್ಡಿ
  • 5-25 ಕೋಟಿ ರೂ ಬ್ಯಾಲನ್ಸ್: ಶೇ. 7.75 ಬಡ್ಡಿ

ಇದನ್ನೂ ಓದಿ: ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ತಂದಿದೆ ಸರ್ಕಾರದ ಎನ್​ಪಿಎಸ್ ಸ್ಕೀಮ್

ನಿಮ್ಮ ಬಳಿ 10 ಲಕ್ಷ ರೂ ಮೇಲ್ಪಟ್ಟ ಹಣ ಇದ್ದರೆ ಅದನ್ನು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ಠೇವಣಿ ಬದಲು ಹಾಗೇ ಇಟ್ಟರೂ ಸಾಕು ಉತ್ತಮ ಬಡ್ಡಿ ಸಿಗುತ್ತದೆ.

ಬೆಂಗಳೂರಿನಲ್ಲಿ ಶಾಖೆಗಳಿರುವ ಸೂರ್ಯೋದಯ್ ಬ್ಯಾಂಕ್

ಮಹಾರಾಷ್ಟ್ರ ಮೂಲದ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕರ್ನಾಟಕದ ವಿವಿಧೆಡೆ ಶಾಖೆಗಳನ್ನು ಹೊಂದಿದೆ. ಬೆಂಗಳೂರು ಹಾಗು ಸುತ್ತಮುತ್ತ ಐದಾರು ಬ್ರ್ಯಾಂಚ್​ಗಳಿವೆ. ಬೆಂಗಳೂರಿನಲ್ಲಿ ಜಯನಗರ, ಗಿರಿನಗರ ಮತ್ತು ಎಚ್​ಎಸ್​ಆರ್ ಲೇಔಟ್​ನಲ್ಲಿ ಸೂರ್ಯೋದಯ್ ಬ್ಯಾಂಕ್ ಶಾಖೆಗಳಿವೆ. ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲೂ ಶಾಖೆಗಳಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ