ಹಣ ಮಾಡುವುದು ಎಷ್ಟು ಮುಖ್ಯವೋ, ಸಂಪಾದಿಸಿದ ಹಣವನ್ನು ಬೆಳೆಸುವುದೂ ಅಷ್ಟೇ ಮುಖ್ಯ. ಹಣ ಬೆಳೆಸಲು ಹೂಡಿಕೆ ಅತ್ಯಗತ್ಯ. ನೀವು ಎಫ್ಡಿಯಲ್ಲಾದರೂ ಹಾಕಿ, ಷೇರಿಗಾದರೂ ಹಾಕಿ, ಸರ್ಕಾರ ಬಾಂಡ್ಗಳಿಗಾದರೂ ಹಾಕಿ, ಮ್ಯೂಚುವಲ್ ಫಂಡ್ನಲ್ಲಾದರೂ ಹಾಕಿ ಹಣ ಬೆಳೆಸಬಹುದು. ವರ್ಷಕ್ಕೆ ನಿಮ್ಮ ಹೂಡಿಕೆ (Investment) ಎಷ್ಟು ಬೆಳೆಯುತ್ತದೆ ಎಂಬುದು ಮುಖ್ಯ. ಈಗ ಮ್ಯೂಚುವಲ್ ಫಂಡ್ಗೆ ಜೋಡಿತವಾಗಿರುವ ಎಸ್ಐಪಿ ಸ್ಕೀಮ್ಗಳು (SIP- Systematic Investment Plan) ಬಹಳ ಜನಪ್ರಿಯವಾಗುತ್ತಿವೆ. ನುರಿತ ತಜ್ಞರು ನಿರ್ವಹಣೆ ಮಾಡುವ ಮ್ಯೂಚುವಲ್ ಫಂಡ್ಗಳು ಸಾಮಾನ್ಯವಾಗಿ ನಷ್ಟ ತರುವುದು ಕಡಿಮೆ. ಆದರೂ ಒಂದಷ್ಟು ಮ್ಯೂಚುವಲ್ ಫಂಡ್ಗಳು ಒಮ್ಮೊಮ್ಮೆ ನಷ್ಟ ಕಾಣುವುದು ಸಹಜ. ಆದರೆ, ದೀರ್ಘಕಾಲದ ಹೂಡಿಕೆ ಮಾಡಬಯಸುವವರು ಮ್ಯೂಚುವಲ್ ಫಂಡ್ನಿಂದ ನಷ್ಟ ಕಂಡಿದ್ದು ಬಹುತೇಕ ಇಲ್ಲ. ಕೆಲ ಮ್ಯೂಚುವಲ್ ಫಂಡ್ಗಳು ಅದ್ಭುತವಾಗಿ ರಿಟರ್ನ್ ಕೊಟ್ಟಿವೆ. ಇಂಥ ಫಂಡ್ಗಳಲ್ಲಿ ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಒಂದು.
ಆದಿತ್ಯ ಬಿರ್ಲಾ ಸನ್ ಲೈಫ್ನ ಈ ಮ್ಯೂಚುವಲ್ ಫಂಡ್ನ (Aditya Birla Sun Life Balanced Advantage Fund) ಸಿಎಜಿಆರ್ ದರ ಶೇ. 9.16ರಷ್ಟಿದೆ. ಸಿಎಜಿಆರ್ ಎಂದರೆ ಕಾಂಪೌಂಡ್ ಆ್ಯನುವಲ್ ಗ್ರೋತ್ ರೇಟ್. ಇದು ಸರಾಸರಿ ವಾರ್ಷಿಕ ಪ್ರಗತಿಯ ದರ. ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಆರಂಭವಾಗಿದ್ದು 2000 ಏಪ್ರಿಲ್ 25ರಂದು. ಅಲ್ಲಿಂದ 23 ವರ್ಷದಲ್ಲಿ ಇದು ವಾರ್ಷಿಕ ಸಿಎಜಿಆರ್ ಶೇ. 9.16ರ ದರದಲ್ಲಿ ಬೆಳೆದಿದೆ. 2000ರಲ್ಲಿ ಈ ಮ್ಯೂಚುವಲ್ ಫಂಡ್ಗೆ ಜೋಡಿತವಾದ ಎಸ್ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್) ಯೋಜನೆಯಲ್ಲಿ ತಿಂಗಳಿಗೆ 10,000 ರೂ ಹೂಡಿಕೆ ಮಾಡುತ್ತಾ ಬಂದಿದ್ದರೆ ಈ 23 ವರ್ಷದಲ್ಲಿ ಅವರ ಹೂಡಿಕೆಯು ಈಗ 1.14 ಕೋಟಿ ರೂ ಆಗಿರುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Google: ಭಾರತದ ಪ್ರಾಧಿಕಾರದ ಶಕ್ತಿ ಪ್ರದರ್ಶನ; 1,337 ಕೋಟಿ ದಂಡ ಕಟ್ಟಿ ಕೈಕಟ್ಟಿಕೊಂಡ ಐಟಿ ದೈತ್ಯ ಗೂಗಲ್
ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ ಅನ್ನು ಅನುಭವಿಗಳಾದ ಮೋಹಿತ್ ಶರ್ಮಾ, ವಿಶಾಲ್ ಗಾಜ್ವಾನಿ ಮತ್ತು ಲವ್ಲಿಶ್ ಸೋಳಂಕಿ ಅವರು ನಿಭಾಯಿಸುತ್ತಿದ್ದಾರೆ. ಇದೊಂದು ಹೈಬ್ರಿಡ್ ಫಂಡ್ ಅಗಿದ್ದು, ಷೇರುಹೂಡಿಕೆ ಮಾತ್ರವಲ್ಲ, ನಿಶ್ಚಿತ ಆದಾಯದ ಯೋಜನೆಗಳಲ್ಲೂ ಹಣ ಹೂಡಿಕೆ ಮಾಡುತ್ತದೆ. ಮಾರುಕಟ್ಟೆಯ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಹೂಡಿಕೆಗಳ ತಾಣವನ್ನು ಬದಲಿಸುತ್ತಲೇ ಇರುತ್ತಾರೆ. ಒಂದು ವಲಯ ಉತ್ತಮ ಪ್ರಗತಿ ಕಾಣಬಹುದು ಎಂಬ ನಿರೀಕ್ಷೆ ಇದ್ದರೆ ಕೂಡಲೇ ಆ ವಲಯದಲ್ಲಿನ ಪ್ರಮುಖ ಕಂಪನಿಗಳ ಷೇರುಗಳ ಮೇಲೆ ಹಣ ಹೂಡುತ್ತಾರೆ. ಒಂದು ವಲಯ ಹಿನ್ನಡೆ ಕಾಣುತ್ತದೆ ಎಂದನಿಸಿದರೆ ಷೇರುಗಳ ಬೀಳುವ ಮುನ್ನವೇ ಮಾರಿಬಿಡುತ್ತಾರೆ. ಈ ರೀತಿಯಲ್ಲಿ ಫಂಡ್ ಮ್ಯಾನೇಜರ್ಗಳು ಹೂಡಿಕೆ ನಿರ್ವಹಣೆ ಮಾಡಿ, ನಷ್ಟದ ಸಾಧ್ಯತೆಯನ್ನು ಕಡಿಮೆ ಮಾಡಿ ಹೆಚ್ಚೆಚ್ಚು ಆದಾಯಕ್ಕೆ ಪ್ರಯತ್ನಿಸುತ್ತಿರುತ್ತಾರೆ.
ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ನ ಶೇ. 9.16ರ ಸಿಆರ್ಜಿಆರ್ ದರ ದೊಡ್ಡ ಮಟ್ಟದ ಲಾಭ ಕೊಡುವಂಥದ್ದಲ್ಲ. ಕೆಲ ಮ್ಯೂಚುವಲ್ ಫಂಡ್ಗಳು ಶೇ. 25ರ ದರದಲ್ಲಿ ಬೆಳೆದಿರುವುದುಂಟು. ಆದರೂ ದೀರ್ಘಾವಧಿಯಲ್ಲಿ 9.16ರ ಸಿಎಜಿಆರ್ ಉತ್ತಮ ಎಂದು ತಜ್ಞರು ಭಾವಿಸುತ್ತಾರೆ.