Google: ಭಾರತದ ಪ್ರಾಧಿಕಾರದ ಶಕ್ತಿ ಪ್ರದರ್ಶನ; 1,337 ಕೋಟಿ ದಂಡ ಕಟ್ಟಿ ಕೈಕಟ್ಟಿಕೊಂಡ ಐಟಿ ದೈತ್ಯ ಗೂಗಲ್
CCI Imposed Penalty: ಆಂಡ್ರಾಯ್ಡ್ ಮಾರುಕಟ್ಟೆಯ ತನ್ನ ಪ್ರಾಬಲ್ಯ ಸ್ಥಿತಿ ದುರುಪಯೋಗಸಿಕೊಂಡ ಕಾರಣಕ್ಕೆ ಗೂಗಲ್ಗೆ ಸಿಸಿಐ 1,337.76 ಕೋಟಿ ರೂ ದಂಡ ವಿಧಿಸಿತ್ತು. ಇದೀಗ ಗೂಗಲ್ ಈ ದಂಡದ ಪೂರ್ಣಮೊತ್ತವನ್ನು ಪಾವತಿಸಿದೆ.
ನವದೆಹಲಿ: ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯ ಸ್ಥಿತಿಯನ್ನು ದುರುಪಯೋಗಿಸಿಕೊಂಡು ಸ್ಪರ್ಧಾತ್ಮತೆಗೆ ಧಕ್ಕೆ ತರಲಾಗುತ್ತಿದೆ ಎನ್ನುವ ಆರೋಪದ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗ (CCI- Competition Commission of India) ವಿಧಿಸಿದ ದಂಡದ ಪೂರ್ಣ ಮೊತ್ತವನ್ನು ಗೂಗಲ್ ಪಾವತಿಸಿದೆ. ಈ ಪ್ರಕರಣದಲ್ಲಿ ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ 2022ರ ಅಕ್ಟೋಬರ್ನಲ್ಲಿ ಗೂಗಲ್ಗೆ 1,337.76 ಕೋಟಿ ರೂ ದಂಡ ವಿಧಿಸಿತ್ತು. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (NCLAT) ಈ ತೀರ್ಪನ್ನು ಎತ್ತಿಹಿಡಿದಿತ್ತು. ಸುಪ್ರೀಂಕೋರ್ಟ್ ಕೂಡ ಈ ತೀರ್ಪಿನ ಪರವಾಗಿಯೇ ಅಭಿಪ್ರಾಯಪಟ್ಟಿತ್ತು. ಸಿಸಿಐ ಆದೇಶಿಸಿದ ದಂಡ ಮೊತ್ತವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ಎನ್ಸಿಎಲ್ಎಟಿ ನಿರ್ದೇಶಿಸಿತ್ತು. ಈ ಗಡುವಿನ ಒಳಗೆ ಗೂಗಲ್ ದಂಡದ ಪೂರ್ಣಮೊತ್ತವಾದ 1,337.76 ಕೋಟಿ ರೂ ಅನ್ನು ಕಾನ್ಸಾಲಿಡೇಟ್ ಫಂಡ್ ಆಫ್ ಇಂಡಿಯಾಗೆ (Consolidated Fund of India) ಪಾವತಿಸಿದೆ.
ಒಂದು ಜಾಗತಿಕ ದೈತ್ಯ ಟೆಕ್ ಸಂಸ್ಥೆಯೊಂದು ಭಾರತದ ಆಡಳಿತ ಪ್ರಾಧಿಕಾರದ ಆದೇಶಕ್ಕೆ ತಲೆಬಾಗಿ ದಂಡ ಕಟ್ಟಿದ್ದು ಇದೇ ಮೊದಲ ಪ್ರಕರಣ ಇರಬಹುದು. ಭಾರತದಲ್ಲಿ ಹೊಸ ಡಿಜಿಟಲ್ ಇಂಡಿಯಾ ಕಾಯ್ದೆ ತರಲಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಪ್ರಾಧಿಕಾರಗಳಿಗೆ ಗೂಗಲ್ದಂಥ ಪ್ರಕರಣಗಳು ಬಲಪ್ರದರ್ಶನದಂತೆಯೂ ಆಗಬಹುದು. ಒಂದು ಸಮರ್ಕವಾದ ಡಿಜಿಟಲ್ ನೀತಿ ರೂಪಿಸಲು ಇಂತಹ ಕ್ರಮಗಳು ಅಗತ್ಯವೂ ಹೌದು.
ಇದನ್ನೂ ಓದಿ: Hindenburg Research: ಅದಾನಿ ಆಯ್ತು, ಹಿಂಡನ್ಬರ್ಗ್ಗೆ ಈಗ ಟಾರ್ಗೆಟ್ ಆದ್ರು ಟ್ರಂಪ್ ಬೆಂಬಲಿಗ ಉದ್ಯಮಿ ಕಾರ್ಲ್ ಐಕಾನ್
ಗೂಗಲ್ಗೆ 1,337.76 ಕೋಟಿ ರೂ ದಂಡ ಹಾಕಿದ್ದು ಯಾಕೆ?
ಆಂಡ್ರಾಯ್ಡ್ ತಂತ್ರಾಂಶದ ಹಕ್ಕು ಈಗ ಗೂಗಲ್ ಕೈಯಲ್ಲಿದೆ. ಆ್ಯಪಲ್ ಫೋನ್ ಬಿಟ್ಟರೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿರುವ ಬಹುತೇಕ ಎಲ್ಲಾ ಮೊಬೈಲ್ಗಳು ಆಂಡ್ರಾಯ್ಡ್ ಸೆಟ್ಗಳೇ ಆಗಿವೆ. ಹೀಗಾಗಿ, ಗೂಗಲ್ ಪ್ರಾಬಲ್ಯದ ಸ್ಥಿತಿಯಲ್ಲಿದೆ. ಸ್ಮಾರ್ಟ್ಫೋನ್ ತಯಾರಕರು ಗೂಗಲ್ ಹೇಳಿದ ಆ್ಯಪ್ಗಳನ್ನು ತಮ್ಮ ಫೋನ್ನಲ್ಲಿ ಪ್ರೀ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಪ್ಲೇ ಸ್ಟೋರ್ ಇತ್ಯಾದಿ ಎಲ್ಲವೂ ಗೂಗಲ್ನದ್ದೇ ಆಗಿದೆ. ಹೀಗಾಗಿ, ಪ್ರತಿಸ್ಪರ್ಧಿ ಆ್ಯಪ್ಗಳಿಗೆ ಹೆಚ್ಚು ಅವಕಾಶ ಕೊಡದ ರೀತಿಯಲ್ಲಿ ಗೂಗಲ್ ತನ್ನ ಅ್ಯಪ್ಗಳನ್ನು ಮುನ್ನೆಲೆಗೆ ತರುತ್ತಿದೆ. ಪ್ಲೇ ಸ್ಟೋರ್ ಸರ್ಚ್ನಲ್ಲಿ ಗೂಗಲ್ಗೆ ನಿರ್ದಿಷ್ಟ ಹಣ ಪಾವತಿಸಿದ ಆ್ಯಪ್ಗಳು ಮೊದಲಿಗೆ ಕಾಣುವ ರೀತಿಯಲ್ಲಿ ಮಾಡಲಾಗಿದೆ. ಈ ಮೇಲಿನ ಆರೋಪಗಳನ್ನು ಕಾಂಪಿಟೀಶನ್ ಕಮಿಷನ್ ಆಫ್ ಇಂಡಿಯಾ ಎತ್ತಿಹಿಡಿದು ಗೂಗಲ್ ಅನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತು. 2022ರ ಅಕ್ಟೋಬರ್ 20ರಂದು ಗೂಗಲ್ಗೆ 1,337.76 ಕೋಟಿ ರೂ ದಂಡ ಕಟ್ಟುವಂತೆ ಆದೇಶಿಸಿತು.
ಈ ಆದೇಶದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಸ್ಪರ್ಧಾತ್ಮಕತೆಗೆ ಧಕ್ಕೆ ತರುವ ಕೆಲಸ ತಮ್ಮಿಂದ ಆಗಿಲ್ಲ. ಯೂರೋಪ್ನ ಪ್ರಕರಣವೊಂದರಲ್ಲಿ ನೀಡಲಾಗಿದ್ದ ಅದೇಶದ ಅಂಶವನ್ನೇ ನಕಲು ಮಾಡಿ ಇಲ್ಲಿ ನೀಡಲಾಗಿದೆ ಎಂದು ಗೂಗಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಇದಾದ ಬಳಿಕ ಎನ್ಸಿಎಲ್ಎಟಿ ಕೂಡ ಸಿಸಿಐ ಅದೇಶವನ್ನು ಎತ್ತಿಹಿಡಿದು, 30 ದಿನದೊಳಗೆ ದಂಡ ಪಾವತಿಸುವಂತೆ 2023 ಮಾರ್ಚ್ 31ರಂದು ಗೂಗಲ್ಗೆ ತಿಳಿಸಿತು. ಈ ತೀರ್ಪಿಗೆ ಸುಪ್ರೀಂಕೋರ್ಟ್ನಿಂದ ತಡೆ ತರುವ ಪ್ರಯತ್ನವೂ ವಿಫಲವಾಯಿತು.
ಈ ಹಿನ್ನೆಲೆಯಲ್ಲಿ ಗೂಗಲ್ ಕಂಪನಿಗೆ 1,337.76 ಕೋಟಿ ರೂ ದಂಡ ಕಟ್ಟುವುದು ಅನಿವಾರ್ಯವೇ ಆಗಿತ್ತು. ಭಾರತದಲ್ಲಿ ಗೂಗಲ್ ವಿರುದ್ಧ ಇದ್ದದ್ದು ಇದೊಂದೇ ಪ್ರಕರಣವಲ್ಲ. ಪ್ಲೇ ಸ್ಟೋರ್ನಲ್ಲಿ ತನಗಿರುವ ಪ್ರಾಬಲ್ಯ ಸ್ಥಿತಿಯನ್ನು ದುರುಪಯೋಗಿಸಿಕೊಳ್ಳುತ್ತಿರುವ ಆರೋಪದ ಇನ್ನೊಂದು ಪ್ರಕರಣದಲ್ಲಿ ಗೂಗಲ್ ವಿರುದ್ದ ಸಿಸಿಐ 936.44 ಕೋಟಿ ರೂ ಪೆನಾಲ್ಟಿ ವಿಧಿಸಿದೆ. ಈ ದಂಡವನ್ನೂ ಗೂಗಲ್ ಕಟ್ಟುವುದು ಅನಿವಾರ್ಯವಾಗಬಹುದು.