ಐಟಿ ರಿಟರ್ನ್ ಸಲ್ಲಿಸುವ ಸಮಯ ಇದು. ಇನ್ನೆರಡು ತಿಂಗಳಲ್ಲಿ ಐಟಿಆರ್ ಅರ್ಜಿಗಳನ್ನು (ITR Forms) ಭರ್ತಿ ಮಾಡಿ ಸಲ್ಲಿಸಬೇಕು. ಜುಲೈ 30ರವರೆಗೂ ಕಾಲಾವಕಾಶ ಇರುವ ಸಾಧ್ಯತೆ ಇದೆ. ಐಟಿ ರಿಟರ್ನ್ ಸಲ್ಲಿಕೆಯನ್ನು ತುಸು ಸರಳಗೊಳಿಸಲಾಗಿದೆ. ಆಡಿಟರ್ ಅಥವಾ ತಜ್ಞ ಅಕೌಂಟೆಂಟ್ ಸಹಾಯವಿಲ್ಲದೇ ಸಾಮಾನ್ಯ ಉದ್ಯೋಗಿಗಳೂ ಈಗ ಸುಗಮವಾಗಿ ತೆರಿಗೆ ರಿಟರ್ನ್ ಫೈಲ್ ಮಾಡಬಹುದು. ಆದರೆ, 4 ಐಟಿಆರ್ ಫಾರ್ಮ್ಗಳಿರುವುದು ಕೆಲವರಿಗೆ ಗೊಂದಲ ತರಬಹುದು. ವಿವಿಧ ಮೂಲಗಳಿಂದ ಆದಾಯ ಹೊಂದಿರುವ ವರ್ಗದ ಜನರಿಗೆ ಯಾವ ಐಟಿಆರ್ ಅರ್ಜಿ ಭರ್ತಿ ಮಾಡಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗಬಹುದು. ಈ ವೇಳೆ ತಪ್ಪಾದ ಐಟಿ ರಿಟರ್ನ್ ಫಾರ್ಮ್ ತುಂಬಿಸಿ ಕಳುಹಿಸುವ ಸಾಧ್ಯತೆ ಇರುತ್ತದೆ. ಹಾಗೊಂದು ವೇಳೆ ಬೇರೆ ಐಟಿಆರ್ ಫಾರ್ಮ್ ಸಲ್ಲಿಸಿಬಿಟ್ಟರೆ ಏನಾಗುತ್ತದೆ? ಈ ಪರಿಣಾಮಗಳು, ಸಾಧ್ಯಾಸಾಧ್ಯತೆಗಳನ್ನು ತಿಳಿಯುವುದು ಉತ್ತಮ.
ತಪ್ಪಾದ ಐಟಿ ರಿಟರ್ನ್ ಫಾರ್ಮ್ ಸಲ್ಲಿಸಿದರೆ ತುಸು ಗಂಭೀರ ಎನಿಸುವ ಪರಿಣಾಮಗಳು ಎದುರಾಗಬಹುದು. ಆದಾಯ ತೆರಿಗೆ ಇಲಾಖೆಯು ನಿಮ್ಮ ಅರ್ಜಿಯನ್ನು ತಿರಸ್ಕರಿಸಿ, ಸರಿಯಾದ ಫಾರ್ಮ್ನಲ್ಲಿ ಮತ್ತೊಮ್ಮೆ ಸಲ್ಲಿಸುವಂತೆ ತಿಳಿಸಬಹುದು. ಕೆಲವೊಮ್ಮೆ ಕಾನೂನು ಪ್ರಕಾರ ಕ್ರಮ ಜಾರಿಯಾಗಬಹುದು, ದಂಡ ಹೇರಬಹುದು.
ನೀವು ತಪ್ಪು ಐಟಿಆರ್ ಫಾರ್ಮ್ ಸಲ್ಲಿಸಿದರೆ, ಕೆಲವೊಂದು ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳು ಫಾರ್ಮ್ ರಿಜೆಕ್ಟ್ ಮಾಡುವ ಬದಲು ನಿಮ್ಮ ಎಲ್ಲಾ ಹಣಕಾಸು ದಾಖಲೆ, ವಹಿವಾಟು ಇತ್ಯಾದಿಯನ್ನು ಪರಿಶೀಲಿಸಬಹುದು. ಅಗತ್ಯಬಿದ್ದರೆ ತನಿಖೆ, ಆಡಿಟ್ ಇತ್ಯಾದಿ ಕಾರ್ಯ ಕೈಗೊಳ್ಳಬಹುದು. ಆಗ ನೀವು ತೆರಿಗೆ ತಪ್ಪಿಸಲು ಏನಾದರೂ ಮಾಡಿದ್ದರೆ ಅವೆಲ್ಲವೂ ಬೆಳಕಿಗೆ ಬಂದುಬಿಡುತ್ತದೆ.
ಇದನ್ನೂ ಓದಿ: ITR Forms: ಐಟಿ ರಿಟರ್ನ್ ಸಲ್ಲಿಕೆಗೆ 4 ಫಾರ್ಮ್ಗಳ ಆಯ್ಕೆ; ಯಾರಿಗೆ ಇವೆ ಈ ಐಟಿಆರ್ ಫಾರ್ಮ್ಗಳು, ಇಲ್ಲಿದೆ ಡೀಟೇಲ್ಸ್
ನಿಮ್ಮ ಆದಾಯಕ್ಕೆ ಹೊಂದಿಕೆಯಾಗುವ ಅರ್ಜಿಯ ಬದಲು ಬೇರೆ ಐಟಿಆರ್ ಫಾರ್ಮ್ ಅನ್ನು ಸಲ್ಲಿಸಿದರೆ ತೆರಿಗೆ ಲಾಭ, ವಿನಾಯಿತಿ ಡಿಡಕ್ಷನ್ ಇತ್ಯಾದಿ ಸೌಲಭ್ಯಗಳು ತಪ್ಪಬಹುದು. ನಿಮ್ಮ ಫಾರ್ಮ್ ತಿರಸ್ಕೃತಗೊಂಡು ನೀವು ಮರಳಿ ಅದನ್ನು ಸಲ್ಲಿಸಬಹುದು. ಅಥವಾ ತೆರಿಗೆ ಅಧಿಕಾರಿಗಳು ನಿಮ್ಮಿಂದ ಹೆಚ್ಚುವರಿ ಮಾಹಿತಿ ಇತ್ಯಾದಿಯನ್ನು ಕೋರಬಹುದು. ಇದರಿಂದ ಸುಮ್ಮನೆ ವಿಳಂಬವಾಗುತ್ತದೆ.
ನೀವು ತೆರಿಗೆ ತಪ್ಪಿಸಲೆಂದು ಉದ್ದೇಶಪೂರ್ವಕವಾಗಿ ತಪ್ಪು ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡಿದ್ದೀರೆಂದು ಐಟಿ ಇಲಾಖೆಗೆ ಅನಿಸಿದಲ್ಲಿ ದಂಡ ವಿಧಿಸಬಹುದು.