ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ

|

Updated on: Jan 10, 2025 | 3:28 PM

Know how to start petrol pump: ನಗರ ಭಾಗದಲ್ಲಿ ಒಂದು ಏರಿಯಾದಲ್ಲಿ ನಾಲ್ಕೈದು ಪೆಟ್ರೋಲ್ ಬಂಕ್​ಗಳನ್ನು ಕಾಣುತ್ತೇವೆ. ಲಾಭದಾಯಕ ಬಿಸಿನೆಸ್ ಎನಿಸಿದೆ. ಒಂದು ಪೆಟ್ರೋಲ್ ಬಂಕ್ ತೆರೆಯಲು ಕನಿಷ್ಠ ಬಂಡವಾಳ ಎರಡು ಕೋಟಿ ರೂನಿಂದ ನಾಲ್ಕು ಕೋಟಿ ಇರಬಹುದು. ಎಷ್ಟು ಪ್ರಮಾಣದ ಪೆಟ್ರೋಲ್ ಮತ್ತು ಡೀಸಲ್ ಮಾರಾಟವಾಗುತ್ತದೆ ಎಂಬುದರ ಮೇಲೆ ಲಾಭ ಅವಲಂಬಿತವಾಗಿರುತ್ತದೆ.

ಪೆಟ್ರೋಲ್ ಪಂಪ್ ಬಿಸಿನೆಸ್ ಹೊಂದಬೇಕಾ? ಆರಂಭಿಕ ಬಂಡವಾಳ, ಲೈಸೆನ್ಸ್, ಲಾಭ ಇತ್ಯಾದಿ ವಿವರ
ಪೆಟ್ರೋಲ್ ಬಂಕ್
Follow us on

ಬೆಂಗಳೂರಿನಲ್ಲಿ ನೀವು ಹಲವು ಶ್ರೀಮಂತರನ್ನು ಭೇಟಿ ಮಾಡಿ ನೋಡಿ. ಅವರಲ್ಲಿ ಹೆಚ್ಚಿನವರು ರಿಯಲ್ ಎಸ್ಟೇಟ್, ಕನ್ಸ್​ಟ್ರಕ್ಷನ್, ಫೈನಾನ್ಸ್, ಬಾರ್, ಪೆಟ್ರೋಲ್ ಬಂಕ್ ಇತ್ಯಾದಿ ಬಿಸಿನೆಸ್ ನಡೆಸುತ್ತಿರುತ್ತಾರೆ. ಸದ್ಯ ಲಾಭದಾಯಕ ಬಿಸಿನೆಸ್​ಗಳಲ್ಲಿ ಪೆಟ್ರೋಲ್ ಪಂಪ್ ಡೀಲರ್​ಶಿಪ್ ಕೂಡ ಒಂದು. ಆದರೆ, ಸೂಕ್ತ ಸ್ಥಳ ಆಯ್ಕೆ, ಅಧಿಕ ಬಂಡವಾಳ ಇತ್ಯಾದಿ ಸವಾಲುಗಳು ಈ ಬ್ಯುಸಿನೆಸ್​ನ ಆರಂಭಿಕ ತೊಡಕುಗಳಾಗಿವೆ. ಪೆಟ್ರೋಲ್ ಪಂಪ್​ನ ಡೀಲರ್​ಶಿಪ್ ಪಡೆಯುವುದು ಹೇಗೆ, ಅದಕ್ಕೆ ಬಂಡವಾಳ ಎಷ್ಟು ಬೇಕು ಇತ್ಯಾದಿ ವಿವರ ಮುಂದಿದೆ…

ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸಬೇಕಾದರೆ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಇತ್ಯಾದಿ ತೈಲ ಮಾರುಕಟ್ಟೆ ಕಂಪನಿಗಳಲ್ಲಿ ಲೈಸೆನ್ಸ್ ಪಡೆಯಬೇಕು. ಒಂದು ಬಂಕ್​ನಲ್ಲಿ ಒಂದೇ ಕಂಪನಿಯ ತೈಲ ಮಾರಾಟಕ್ಕೆ ಅವಕಾಶ ಇರುತ್ತದೆ. ಆಯಾ ಸಂಸ್ಥೆಗಳು ಪೆಟ್ರೋಲ್ ಪಂಪ್ ಡೀಲರ್​ಶಿಪ್​ಗೆ ನೀಡುವ ಜಾಹೀರಾತನ್ನು ಗಮನಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪೆಟ್ರೋಲ್ ಪಂಪ್ ಮಾಲೀಕನಾಗಲು ಅರ್ಹತೆಗಳಿವೆ….

  • ಅರ್ಜಿದಾರರ ವಯಸ್ಸು 21 ವರ್ಷದಿಂದ 55 ವರ್ಷ ವಯೋಮಾನದಲ್ಲಿರಬೇಕು.
  • ಅರ್ಜಿದಾರರು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು. ನಗರ ಭಾಗದಲ್ಲಿ ಡೀಲರ್​ಶಿಪ್ ಪಡೆಯುವವರು ಪದವಿ ಹೊಂದಿರಬೇಕು.
  • ಅರ್ಜಿದಾರರ ನಿವ್ವಳ ಆಸ್ತಿ ಮೌಲ್ಯ 25 ಲಕ್ಷ ರೂ ಇರಬೇಕು
  • ಅರ್ಜಿದಾರರಿಗೆ ಯಾವುದೇ ಅಪರಾಧ ಹಿನ್ನೆಲೆ ಇರಬಾರದು. ಹಿಂದೆ ಯಾವುದೇ ಬ್ಯುಸಿನೆಸ್ ಲೋನ್​ನಲ್ಲಿ ಡೀಫಾಲ್ಟರ್ ಆಗಿರಬಾರದು. ಅಂದರೆ ಸಾಲದ ವಿಚಾರದಲ್ಲಿ ಕೈ ಶುದ್ಧ ಇರಬೇಕು.

ಇದನ್ನೂ ಓದಿ: ಹೊಗೆಸೊಪ್ಪು ಕೃಷಿ ಲಾಭದಾಯಕವಾ? ತಂಬಾಕು ಬೆಳೆಯಲು ಅನುಮತಿ ಪಡೆಯುವುದು ಹೇಗೆ? ಇಲ್ಲಿದೆ ವಿವರ

ಪೆಟ್ರೋಲ್ ಪಂಪ್ ಆರಂಭಿಸಲು ಅಗತ್ಯಗಳಿವು…

ಪೆಟ್ರೋಲ್ ಪಂಪ್ ಆರಂಭಿಸಲು ಸೂಕ್ತ ಸ್ಥಳ ಆಯ್ದುಕೊಳ್ಳಬೇಕು. ಆ ಜಾಗವು ನಿಮ್ಮ ಸ್ವಂತದ್ದಾಗಿರಬೇಕು. ಯಾವುದೇ ಕಾನೂನು ತಕರಾರು ಇರಬಾರದು. ಒಂದು ಪಂಪ್ ಮಾತ್ರ ಇರುವ ಪೆಟ್ರೋಲ್ ಬಂಕ್​ಗೆ 500 ಚದರ ಮೀಟರ್ ಜಾಗ ಬೇಕು. ಎರಡು ಪಂಪ್​ಗಳಿರುವ ಬಂಕ್​ಗೆ 800 ಚದರ ಮೀಟರ್ ಜಾಗ ಬೇಕು. ಹೆದ್ದಾರಿಯಾದರೆ ಇನ್ನೂ ಹೆಚ್ಚಿನ ಜಾಗ ಬೇಕಾಗುತ್ತದೆ.

ನೀವು ಸ್ಥಳ ಆಯ್ಕೆ ಮಾಡಿಕೊಂಡರೆ ತೈಲ ಮಾರುಕಟ್ಟೆ ಸಂಸ್ಥೆಯಿಂದ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸುತ್ತಾರೆ. ಬಂಕ್ ಇರುವ ಸ್ಥಳದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಎಷ್ಟಿದೆ ಎಂಬುದನ್ನು ಅವಲೋಕಿಸಿ, ಇಲ್ಲಿ ಪಂಪ್ ಬಿಸಿನೆಸ್ ಉತ್ತಮವಾಗಿ ನಡೆಯಬಹುದು ಎನ್ನುವ ವಿಶ್ವಾಸ ಮೂಡಿದಲ್ಲಿ ನಿಮಗೆ ಪೆಟ್ರೋಲ್ ಬಂಕ್ ಆರಂಭಿಸಲು ಅನುಮತಿ ಸಿಗಬಹುದು.

ಪೆಟ್ರೋಲ್ ಬಂಕ್​ನಲ್ಲಿ ಲಾಭ ಎಷ್ಟು ಸಿಗುತ್ತದೆ?

ಇಲ್ಲಿ ಪೆಟ್ರೋಲ್ ಮತ್ತು ಡೀಸಲ್ ಮಾರಾಟ ಎಷ್ಟಾಗುತ್ತದೆ ಎಂಬುದರ ಮೇಲೆ ಬಿಸಿನೆಸ್ ನಿಂತಿದೆ. ಒಂದು ಲೀಟರ್ ಪೆಟ್ರೋಲ್ ಮಾರಿದರೆ ಸುಮಾರು 1.5 ರೂನಿಂದ 3 ರೂವರೆಗೆ ಲಾಭ ಸಿಗಬಹುದು. ಒಂದು ಲೀಟರ್ ಡೀಸಲ್​ಗೆ 2ರಿಂದ 3 ರೂ ಲಾಭ ಸಿಗಬಹುದು. ಇಲ್ಲಿ ರಿಸ್ಕ್ ಎಂದರೆ ಪೆಟ್ರೋಲ್ ಅಥವಾ ಡೀಸಲ್​ನ ಸೋರಿಕೆ ಸಾಧ್ಯತೆ ಇರುವುದು.

ಇದನ್ನೂ ಓದಿ: 2025-26ರಲ್ಲಿ ಭಾರತದ ರಿಯಲ್ ಜಿಡಿಪಿ ಶೇ. 6.8, ನಾಮಿನಲ್ ಜಿಡಿಪಿ ಶೇ. 10.5 ಇರುವ ಸಾಧ್ಯತೆ

ನಗರ ಭಾಗದಲ್ಲಿ ಒಂದು ಪೆಟ್ರೋಲ್ ಪಂಪ್ ದಿನವೊಂದಕ್ಕೆ 10,000 ದಿಂದ 20,000 ಲೀಟರ್​ವರೆಗೆ ಇಂಧನ ಮಾರಬಹುದು. ಲೀಟರ್​ಗೆ ಎರಡು ರೂ ಲಾಭವೆಂದರೂ ದಿನಕ್ಕೆ ಒಂದು ಪಂಪ್​ನಿಂದ 40,000 ರೂವರೆಗೆ ಲಾಭ ಮಾಡಬಹುದು. ತಿಂಗಳಿಗೆ ಸುಮಾರು 7ರಿಂದ 10 ಲಕ್ಷ ರೂ ಲಾಭ ಮಾಡಲು ಅವಕಾಶ ಇರುತ್ತದೆ.

ಪೆಟ್ರೋಲ್ ಪಂಪ್ ಆರಂಭಿಸಲು ಬೇಕಾಗುವ ಬಂಡವಾಳ

ಬಂಕ್ ಸ್ಥಳ ವೆಚ್ಚ: ಸುಮಾರು 20 ಲಕ್ಷ ರೂನಿಂದ ಒಂದು ಕೋಟಿ ರೂ

ನಿರ್ಮಾಣ ವೆಚ್ಚ: ಪೆಟ್ರೋಲ್ ಶೇಖರಿಸಲು ದೊಡ್ಡ ಸಂಪು ಸೇರಿದಂತೆ ಅಗತ್ಯ ಸೌಕರ್ಯಗಳ ನಿರ್ಮಾಣಕ್ಕೆ 30 ಲಕ್ಷ ರೂನಿಂದ ಒಂದು ಕೋಟಿ ರೂ ಆಗಬಹುದು.

ಉಪಕರಣ ವೆಚ್ಚ: ಪೆಟ್ರೋಲ್ ಹಾಕುವ ಯೂನಿಟ್, ಸ್ಟೋರೇಜ್ ಟ್ಯಾಂಕ್ ಇತ್ಯಾದಿ ಉಪಕರಣಗಳನ್ನು ಖರೀದಿಸಲು 20 ಲಕ್ಷ ರೂನಿಂದ 50 ಲಕ್ಷ ರೂ.

ಲೈಸೆನ್ಸ್ ಫೀ: ಪೆಟ್ರೋಲ್ ಬಂಕ್​ಗೆ ಪರವಾನಿಗೆ ಪಡೆಯಲು ಆಗುವ ವೆಚ್ಚ 2 ಲಕ್ಷ ರೂನಿಂದ 5 ಲಕ್ಷ ರೂ.

ಒಟ್ಟಾರೆ ಒಂದು ಪೆಟ್ರೋಲ್ ಬಂಕ್ ಮಾಲೀಕರಾಗಲು ನೀವು 2ರಿಂದ 4 ಕೋಟಿ ರೂ ಬಂಡವಾಳ ಹೂಡಲು ಸಿದ್ಧರಿರಬೇಕಾಗುತ್ತದೆ. ಈಗಾಗಲೇ ಸೂಕ್ತವಾದ ಸ್ವಂತ ಜಾಗ ಇದ್ದರೆ 2 ಕೋಟಿ ರೂನೊಳಗೆ ಬಿಸಿನೆಸ್ ಆರಂಭಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ