PF Balance Check: ದೀಪಾವಳಿಗೂ ಮುನ್ನ 6 ಕೋಟಿ ಖಾತೆಗಳಿಗೆ ಬರಲಿದೆ ಶೇ 8.5ರ ಪಿಎಫ್​ ಬಡ್ಡಿ; ಬ್ಯಾಲೆನ್ಸ್ ಚೆಕ್ ಹೇಗೆ?

| Updated By: Srinivas Mata

Updated on: Oct 11, 2021 | 6:14 PM

ಆರು ಕೋಟಿಯಷ್ಟು ಪಿಎಫ್​ ಖಾತೆಗಳಿಗೆ ಈ ಬಾರಿಯ ದೀಪಾವಳಿಗೂ ಮುನ್ನವೇ ಶೇ 8.5ರ ಬಡ್ಡಿ ಜಮೆ ಆಗುವ ಸಾಧ್ಯತೆ ಇದೆ. ಪಿಎಫ್​ ಬಾಕಿಯನ್ನು ಪರೀಕ್ಷಿಸುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

PF Balance Check: ದೀಪಾವಳಿಗೂ ಮುನ್ನ 6 ಕೋಟಿ ಖಾತೆಗಳಿಗೆ ಬರಲಿದೆ ಶೇ 8.5ರ ಪಿಎಫ್​ ಬಡ್ಡಿ; ಬ್ಯಾಲೆನ್ಸ್ ಚೆಕ್ ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಇಪಿಎಫ್‌ಒ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) 2020-21ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಖಾತೆದಾರರ ಖಾತೆಗೆ ಜಮೆ ಮಾಡುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ- ದೀಪಾವಳಿಯ ಸಮಯಕ್ಕೆ 6 ಕೋಟಿಗೂ ಅಧಿಕ ಉದ್ಯೋಗಿಗಳು ಸ್ವೀಕರಿಸುತ್ತಾರೆ. 2020-21ರ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.5ಕ್ಕೆ ನಿಗದಿಪಡಿಸಲಾಗಿದೆ. ಕೊವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಸದಸ್ಯರಿಂದ ಹೆಚ್ಚಿನ ಹಿಂಪಡೆಯುವಿಕೆ ಮತ್ತು ಕಡಿಮೆ ಕೊಡುಗೆ ಇತ್ತು. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಕೊರೊನಾ ಬಿಕ್ಕಟ್ಟು ಏಕಾಏಕಿ ಕಾಣಿಸಿಕೊಂಡ ನಂತರ ಇಪಿಎಫ್‌ಒ ಬಡ್ಡಿದರವನ್ನು ಏಳು ವರ್ಷದ ಕನಿಷ್ಠ ಮಟ್ಟವಾದ ಶೇಕಡಾ 8.5ಕ್ಕೆ 2019-20ನೇ ಸಾಲಿಗೆ ಮಾರ್ಚ್‌ನಲ್ಲಿ ಕಡಿತಗೊಳಿಸಿತು. 2018-19ರಲ್ಲಿ ಬಡ್ಡಿದರ ಶೇಕಡಾ 8.65ರಷ್ಟಿತ್ತು. 2017-18ರ ಆರ್ಥಿಕ ವರ್ಷಕ್ಕೆ EPFO ​​ತನ್ನ ಚಂದಾದಾರರಿಗೆ ಶೇಕಡಾ 8.55 ಬಡ್ಡಿ ನೀಡಿತು. 2016-17ರಲ್ಲಿ ಬಡ್ಡಿ ದರ ಶೇ 8.65 ಆಗಿತ್ತು.

ಕೊವಿಡ್ -19 ಬಿಕ್ಕಟ್ಟನ್ನು ಉಲ್ಲೇಖಿಸಿ, ಇಪಿಎಫ್‌ಒ ಇತ್ತೀಚೆಗೆ ಸದಸ್ಯರಿಗೆ ತಮ್ಮ ನಿವೃತ್ತಿ ನಿಧಿಯಿಂದ ಮರುಪಾವತಿಸಲಾಗದ ಮುಂಗಡವಾಗಿ ಹಣವನ್ನು ತೆಗೆದುಕೊಳ್ಳಲು ಅನುಮತಿ ನೀಡಿದೆ. ಕೇಂದ್ರ ಸರ್ಕಾರವು ಮಾರ್ಚ್ 2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKY) ಅಡಿಯಲ್ಲಿ ಒಂದು ಹೊಸ ಅವಕಾಶವನ್ನು ನೀಡಿತು. ಈ ಮೂಲಕವಾಗಿ ಇಪಿಎಫ್ ಸದಸ್ಯರು ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿ ಭತ್ಯೆ (ಡಿಎ) ಅಥವಾ ಅವರ ಭವಿಷ್ಯ ನಿಧಿಯ ಹಣದ ಶೇ 75ರಷ್ಟು ಹಣ- ಈ ಪೈಕಿ ಯಾವುದು ಕಡಿಮೆಯೋ ಅದನ್ನು ಮುಂಗಡವಾಗಿ ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿತು.

“ಕೊವಿಡ್-19 ಬಿಕ್ಕಟ್ಟಿನ ಎರಡನೇ ಅಲೆಯ ಸಂದರ್ಭದಲ್ಲಿ ತನ್ನ ಚಂದಾದಾರರಿಗೆ ನೆರವಾಗುವ ಉದ್ದೇಶದಿಂದ EPFO ತನ್ನ ಸದಸ್ಯರಿಗೆ ಎರಡನೇ ಬಾರಿಗೆ ಮರುಪಾವತಿಸಲು ಅಗತ್ಯ ಇಲ್ಲದ ಕೊವಿಡ್-19 ಮುಂಗಡವನ್ನು ಪಡೆಯಲು ಅವಕಾಶ ನೀಡಿತು. ಕೊರೊನಾ ಸಮಯದಲ್ಲಿ ಸದಸ್ಯರ ಆರ್ಥಿಕ ಅಗತ್ಯವನ್ನು ಪೂರೈಸಲು ವಿಶೇಷ ಹಿಂತೆಗೆದುಕೊಳ್ಳುವ ಅವಕಾಶವನ್ನು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (PMGKY) ಅಡಿಯಲ್ಲಿ ಮಾರ್ಚ್ 2020ರಲ್ಲಿ ಪರಿಚಯಿಸಲಾಯಿತು,” ಎಂದು ಸಚಿವಾಲಯ ಹೇಳಿದೆ. “ಕೊವಿಡ್-19 ಕಷ್ಟದ ಸಮಯದಲ್ಲಿ, EPFO ​​ತನ್ನ ಎಲ್ಲ ಪಾಲುದಾರರಿಗೆ ಸಹಾಯ ಹಸ್ತ ನೀಡಲು ಬದ್ಧವಾಗಿದೆ,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ 2021ರಲ್ಲಿ ಹೇಳಿರುವ ಪ್ರಕಾರ, ಉದ್ಯೋಗಿಯ ಕೊಡುಗೆ ಮೇಲಿನ ವಾರ್ಷಿಕ ಬಡ್ಡಿಯು ರೂ. 2.5 ಲಕ್ಷಕ್ಕಿಂತ ಹೆಚ್ಚಾದಲ್ಲಿ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ.

ಪಿಎಫ್ ಬ್ಯಾಲೆನ್ಸ್ ಅನ್ನು ಪರೀಕ್ಷಿಸುವುದು ಹೇಗೆ:
1) ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್
UAN (ಯೂನಿವರ್ಸಲ್ ಅಕೌಂಟ್ ನಂಬರ್) ಹೊಂದಿರುವ EPFO ​​ಸದಸ್ಯರು ತಮ್ಮ ನೋಂದಾಯಿತ ಸೆಲ್‌ಫೋನ್‌ನಿಂದ “EPFOHO UAN ENG” ಇದನ್ನು 7738299899ಗೆ ಸಂದೇಶ ಕಳುಹಿಸಬಹುದು. ಎಸ್‌ಎಂಎಸ್ ಅನ್ನು ಯಶಸ್ವಿಯಾಗಿ ಕಳುಹಿಸಿದ ನಂತರ ನಿಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಸೇರಿದಂತೆ ಇಪಿಎಫ್ ಖಾತೆಯ ಮಾಹಿತಿಯನ್ನು ಒದಗಿಸುವ ಸಂದೇಶವನ್ನು ಬಳಕೆದಾರರು ಸ್ವೀಕರಿಸುತ್ತಾರೆ. SMSನಲ್ಲಿ EPFO ​​ಸದಸ್ಯರು ಆದ್ಯತೆಯ ಸಂವಹನ ಭಾಷೆಯನ್ನು ಆಯ್ಕೆ ಮಾಡಬೇಕು.

2) ಇಪಿಎಫ್ ಬ್ಯಾಲೆನ್ಸ್ ಪರೀಕ್ಷೆ
ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಅಧಿಕೃತ ಫೋನ್‌ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು. UAN ಅನ್ನು KYC ಮಾಹಿತಿಗೆ ಜೋಡಣೆ ಮಾಡಿದ್ದರೆ ಮಾತ್ರ ಈ ಫೀಚರ್ ಲಭ್ಯವಿರುತ್ತದೆ.

ಇದನ್ನೂ ಓದಿ: EPF explainer: ಇಪಿಎಫ್​ ಕೊಡುಗೆ 2.5 ಲಕ್ಷ ರೂಪಾಯಿಗಿಂತ ಹೆಚ್ಚಾದಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?