Philips Layoff: ಮತ್ತೆ 6,000 ಉದ್ಯೋಗಿಗಳ ವಜಾಗೊಳಿಸಿದ ಫಿಲಿಪ್ಸ್

|

Updated on: Jan 30, 2023 | 12:40 PM

2022ರ ಅಕ್ಟೋಬರ್​ನಲ್ಲಿ ಕಂಪನಿ 4,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕಂಪನಿ ಹೇಳಿತ್ತು.

Philips Layoff: ಮತ್ತೆ 6,000 ಉದ್ಯೋಗಿಗಳ ವಜಾಗೊಳಿಸಿದ ಫಿಲಿಪ್ಸ್
ಫಿಲಿಪ್ಸ್
Follow us on

ನವದೆಹಲಿ: ಜಾಗತಿಕ ವೈದ್ಯಕೀಯ ಸಾಧನ ಉತ್ಪಾದನಾ ಕಂಪನಿ ಫಿಲಿಪ್ಸ್ (Philips) ಮತ್ತೆ ಉದ್ಯೋಗ ಕಡಿತದ ಮೊರೆ ಹೋಗಿದ್ದು, 6,000 ಮಂದಿಯನ್ನು ವಜಾಗೊಳಿಸುತ್ತಿರುವುದಾಗಿ (Layoff) ಘೋಷಿಸಿದೆ. ವೈದ್ಯಕೀಯ ಸಾಧನವೊಂದನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಿಂಪಡೆಯಬೇಕಾಗಿ ಬಂದಿದ್ದು ಕಂಪನಿಗೆ ನಷ್ಟವಾಗಿದೆ ಎನ್ನಲಾಗಿದೆ. ಇದನ್ನು ಸರಿದೂಗಿಸುವುದಕ್ಕಾಗಿ ಮತ್ತು ವೆಚ್ಚ ಕಡಿತದ ದೃಷ್ಟಿಯಿಂದ ಉದ್ಯೋಗ ಕಡಿತದ ಮೊರೆ ಹೋಗಿರುವುದಾಗಿ ಕಂಪನಿ ಹೇಳಿದೆ. ಇದೊಂದು ಕಠಿಣ ಮತ್ತು ಅನಿವಾರ್ಯ ನಿರ್ಧಾರವಾಗಿದೆ. ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಬೇಕಾದ ಅಗತ್ಯ ಇದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಯ್ ಜೇಕಬ್ಸ್ ತಿಳಿಸಿದ್ದಾರೆ. ರೋಗಿಗಳಿಗೆ ನಿದ್ರೆ ಸಂದರ್ಭದಲ್ಲಿ ಉಸಿರಾಟಕ್ಕೆ ಅನುವು ಮಾಡಿಕೊಡುವ, ಕಂಪನಿಯು ತಯಾರಿಸಿದ ಸಾಧನಗಳಲ್ಲಿ ಲೋಪ ಇರುವುದು ಇತ್ತೀಚೆಗೆ ವರದಿಯಾಗಿತ್ತು. ಪರಿಣಾಮವಾಗಿ ಅಪಾರ ಸಂಖ್ಯೆಯ ಸಾಧನಗಳನ್ನು ಕಂಪನಿ ವಾಪಸ್ ಪಡೆಯಬೇಕಾಗಿ ಬಂದಿತ್ತು.

2022ರ ಅಕ್ಟೋಬರ್​ನಲ್ಲಿ ಕಂಪನಿ 4,000 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಕಾರ್ಯಾಚರಣೆ ಮತ್ತು ಪೂರೈಕೆ ಸವಾಲುಗಳಿಂದಾಗಿ ಮೂರನೇ ತ್ರೈಮಾಸಿಕದಲ್ಲಿ ಮಾರಾಟಕ್ಕೆ ತೊಂದರೆಯಾಗಿದೆ. ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕಂಪನಿ ಹೇಳಿತ್ತು.

ಇದನ್ನೂ ಓದಿ: Layoffs: ಟೆಕ್ ಉದ್ಯೋಗಿಗಳಿಗೆ ಕಹಿ ತಂದ ಹೊಸ ವರ್ಷ; ದಿನಕ್ಕೆ ಸರಾಸರಿ 1,600 ಮಂದಿ ಕೆಲಸದಿಂದ ವಜಾ

ಹಣದುಬ್ಬರ ಒತ್ತಡ, ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹಾಗೂ ರಷ್ಯಾ – ಉಕ್ರೇನ್ ಯುದ್ಧದ ಪರಿಣಾಮ ಪೂರೈಕೆ ಸವಾಲನ್ನು ಎದುರಿಸುತ್ತಿದ್ದೇವೆ. ಇದು ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಹೆಚ್ಚಿದ ದಾಸ್ತಾನು ಮತ್ತು ನಿಬಂಧನೆಗಳಿಂದಾಗಿ ಕಂಪನಿಯ ನಗದು ಗಳಿಕೆಯಲ್ಲಿಯೂ ಇಳಿಕೆಯಾಗಿದೆ ಎಂದು ಅಕ್ಟೋಬರ್​​ನಲ್ಲಿ ಫಿಲಿಪ್ಸ್ ತಿಳಿಸಿತ್ತು.

ಫಿಲಿಪ್ಸ್ ಉದ್ಯೋಗ ಕಡಿತದೊಂದಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮುಂದುವರಿದಂತಾಗಿದೆ. ಲಿಂಕ್ಡ್ ಇನ್, ಶೇರ್‌ಚಾಟ್ ಸೇರಿದಂತೆ ಪ್ರಮುಖ ಕಂಪನಿಗಳು ಇತ್ತೀಚೆಗೆ ನೂರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ್ದವು. ತಂತ್ರಜ್ಞಾನ ದೈತ್ಯ ಗೂಗಲ್ ಸುಮಾರು 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿತ್ತು. ವೆಚ್ಚವನ್ನು ಕಡಿತಗೊಳಿಸುವುದಕ್ಕಾಗಿ ಶೇ 20ರಷ್ಟು, ಅಂದರೆ ಸುಮಾರು 500 ಜನರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಶೇರ್​ಚಾಟ್ ಕೆಲವು ದಿನಗಳ ಹಿಂದೆ ತಿಳಿಸಿತ್ತು. ಕ್ಯಾಬ್ ಸೇವೆ ಒದಗಿಸುವ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಓಲಾ ಕೂಡ ವಿವಿಧ ಘಟಕಗಳಿಂದ 200 ಮಂದಿ ಉದ್ಯೋಗಿಗಳನ್ನು ಕೆಲವು ದಿನಗಳ ಹಿಂದಷ್ಟೇ ವಜಾಗೊಳಿಸಿದೆ. ವಿತರಣಾ ಉದ್ಯಮ ಸಂಸ್ಥೆ, ಬೆಂಗಳೂರು ಮೂಲದ ಡುಂಜೋ ಕೂಡ ಶೇ 3ರಷ್ಟು ಉದ್ಯೋಗಿಗಳನ್ನು ಇತ್ತೀಚೆಗೆ ವಜಾಗೊಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Mon, 30 January 23