PhonePe: ಫೋನ್​ಪೇ ಮೂಲಕ ಇನ್ನು ವಿದೇಶಗಳಲ್ಲೂ ಹಣ ಪಾವತಿ ಮಾಡಬಹುದು

|

Updated on: Feb 07, 2023 | 6:02 PM

ಪ್ರಸ್ತುತ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್​​ನಲ್ಲಿ ಫೋನ್​ಪೇ ಸ್ಥಳೀಯ ಕ್ಯುಆರ್ ಕೋಡ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ದೇಶಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಫೋನ್​ಪೇ ತಿಳಿಸಿದೆ.

PhonePe: ಫೋನ್​ಪೇ ಮೂಲಕ ಇನ್ನು ವಿದೇಶಗಳಲ್ಲೂ ಹಣ ಪಾವತಿ ಮಾಡಬಹುದು
ಫೋನ್ ಪೇ
Follow us on

ನವದೆಹಲಿ: ಏಕೀಕೃತ ಪಾವತಿ ವ್ಯವಸ್ಥೆಯಲ್ಲಿ (UPI) ಅತಿದೊಡ್ಡ ಪಾಲು ಹೊಂದಿರುವ ಫೋನ್​ಪೇ (PhonePe) ಮೂಲಕ ಇನ್ನು ವಿದೇಶಗಳಲ್ಲಿಯೂ ಹಣ ವರ್ಗಾವಣೆ, ಪಾವತಿ ಮಾಡಬಹುದಾಗಿದೆ. ಇದರೊಂದಿಗೆ, ವಿದೇಶಗಳಲ್ಲಿ ಹಣ ಪಾವತಿಗೆ ಅನುವು ಮಾಡಿಕೊಟ್ಟ ಮೊದಲ ಫಿನ್​​ಟೆಕ್ ಕಂಪನಿಯಾಗಿ ಫೋನ್​ಪೇ ಗುರುತಿಸಿಕೊಂಡಿದೆ. ಇದರಿಂದ ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಪಾವತಿ ಮತ್ತಷ್ಟು ಸುಲಭವಾಗಲಿದೆ. ಬಳಕೆದಾರನ ಬ್ಯಾಂಕ್ ಖಾತೆಯಿಂದ ವಿದೇಶಿ ಕರೆನ್ಸಿ ಪಾವತಿಯಾಗಲಿದೆ. ಇದು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಟ್ರಾನ್ಸಾಕ್ಷನ್​​​ನಂತೆಯೇ ಕಾರ್ಯನಿರ್ವಹಿಸಲಿದೆ ಎಂದು ಫೋನ್​ಪೇ ತಿಳಿಸಿದೆ.

ಯಾವ ದೇಶಗಳಲ್ಲೆಲ್ಲ ಫೋನ್​ಪೇ ಪಾವತಿ ಸಾಧ್ಯ?

ಪ್ರಸ್ತುತ ಯುಎಇ, ಸಿಂಗಾಪುರ, ಮಾರಿಷಸ್, ನೇಪಾಳ ಹಾಗೂ ಭೂತಾನ್​​ನಲ್ಲಿ ಫೋನ್​ಪೇ ಸ್ಥಳೀಯ ಕ್ಯುಆರ್ ಕೋಡ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ದೇಶಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ಫೋನ್​ಪೇ ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಯುಪಿಐ ಅನುಭವ ದೊರೆಯುವಂತೆ ಫೋನ್​ಪೇ ಮಾಡುತ್ತಿದೆ. ಇದು ನಿಜವಾಗಿಯೂ ಮಹತ್ವದ ಪರಿವರ್ತನೆಗೆ ಕಾರಣವಾಗಲಿದೆ. ವಿದೇಶಗಳಿಗೆ ತೆರಳುವ ಭಾರತೀಯರಿಗೆ ಅಲ್ಲಿನ ವ್ಯಾಪಾರಿಗಳಿಗೆ ಹಣ ಪಾವತಿ ಮಾಡುವುದನ್ನು ಬಹಳ ಸುಲಭವಾಗಿಸಲಿದೆ ಎಂದು ಫೋನ್​ಪೇ ಸಹ ಸಂಸ್ಥಾಪಕ ರಾಹುಲ್ ಚರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Investment Ideas: ಷೇರು ಮಾರುಕಟ್ಟೆ ಬಿಟ್ಬಿಡಿ; ಹಣ ಮಾಡಲು ಹೂಡಿಕೆಯ ದಾರಿಗಳು ಇಲ್ಲಿವೆ

ಆ್ಯಪ್​​ನಲ್ಲಿರುವ ಯುಪಿಐ ಇಂಟರ್​ನ್ಯಾಷನಲ್ ಮೂಲಕ ಬ್ಯಾಂಕ್ ಖಾತೆಯನ್ನು ಆ್ಯಕ್ಟಿವೇಟ್​ಗೊಳಿಸಬೇಕು. ಎಲ್ಲಿ ಗ್ರಾಹಕರು ಪಾವತಿ ಮಾಡಲು ಬಯಸುತ್ತಾರೆಯೋ ಅಲ್ಲಿಂದಲೇ ಅಥವಾ ಪ್ರಯಾಣಕ್ಕೆ ಮುಂಚಿತವಾಗಿಯೇ ಇದನ್ನು ಮಾಡಬಹುದು. ಇದರಿಂದಾಗಿ ಗ್ರಾಹಕರು ಭಾರತದ ಹೊರಭಾಗದಲ್ಲಿ ಪಾವತಿ ಮಾಡಲು ಕ್ರೆಡಿಟ್ ಕಾರ್ಡ್ ಅಥವಾ ಫಾರೆಕ್ಸ್ ಕಾರ್ಡ್​ ಬಳಸುವುದು ತಪ್ಪಲಿದೆ ಎಂದು ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪಾವತಿಗಳಿಗಾಗಿ ಯುಪಿಐ ಅನ್ನು ಸಿದ್ಧಪಡಿಸಿ ಮುಕ್ತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು 2022ರ ಜುಲೈನಲ್ಲಿ ರಾಷ್ಟ್ರೀಯ ಪಾವತಿ ನಿಗಮದ (NPCI) ಸಿಇಒ ರಿತೇಶ್ ಶುಕ್ಲಾ ಹೇಳಿದ್ದರು. ಸದ್ಯ ದೇಶದ ಒಟ್ಟಾರೆ ಯುಪಿಐ ವಹಿವಾಟಿನಲ್ಲಿ ಫೋನ್​ಪೇ, ಗೂಗಲ್ ಪೇ, ಪೇಟಿಎಂ ಹಾಗೂ ಕ್ರೆಡ್ ಪೇ ಒಟ್ಟಾಗಿ ಶೇ 96.4ರಷ್ಟು ಪಾಲು ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Tue, 7 February 23