AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹವಾಮಾನ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್; ಪಾಶ್ಚಿಮಾತ್ಯರಿಗೆ ಸಖತ್ ಪಾಠ ಮಾಡಿದ ಸಚಿವ ಪಿಯೂಶ್ ಗೋಯಲ್

ಬರ್ಲಿನ್ ಗ್ಲೋಬಲ್ ಡೈಲಾಗ್‌ನಲ್ಲಿ ಪಿಯೂಷ್ ಗೋಯಲ್ ಹವಾಮಾನ ಬದಲಾವಣೆಗೆ ಪಾಶ್ಚಿಮಾತ್ಯರ ಬೂಟಾಟಿಕೆ ಎತ್ತಿ ತೋರಿಸಿದರು. ಓಝೋನ್ ಪದರ ಹಾನಿಗೆ ಯಾರು ಕಾರಣ ಎಂದು ಪ್ರಶ್ನಿಸಿ, ಭಾರತದ ಇಂಗಾಲ ಕೊಡುಗೆ ಶೇ. 3ಕ್ಕಿಂತ ಕಡಿಮೆ ಎಂದರು. ಕ್ಲೀನ್ ಎನರ್ಜಿ ಕಡೆ ಭಾರತದ ಪ್ರಯತ್ನವನ್ನು ವಿವರಿಸಿದರು. CBAM, ಹೆಚ್ಚುವರಿ ನಿಯಮಗಳಿಂದ ಪಾಶ್ಚಿಮಾತ್ಯರಿಗೇ ಆಗುವ ಆರ್ಥಿಕ ಹಾನಿ ಕುರಿತು ಎಚ್ಚರಿಸಿದರು.

ಹವಾಮಾನ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್; ಪಾಶ್ಚಿಮಾತ್ಯರಿಗೆ ಸಖತ್ ಪಾಠ ಮಾಡಿದ ಸಚಿವ ಪಿಯೂಶ್ ಗೋಯಲ್
ಪಿಯೂಶ್ ಗೋಯಲ್ ಹಾಗೂ ಇತರರುImage Credit source: Screenshot of X video
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2026 | 1:05 PM

Share

ಬರ್ಲಿನ್, ಅಕ್ಟೋಬರ್ 23: ಹವಾಮಾನ ಬದಲಾವಣೆ ಸಮಸ್ಯೆ ಬಗೆಹರಿಸಲು ಭಾರತ ಹೆಚ್ಚು ಮುತುವರ್ಜಿ ತೋರಬೇಕು ಎಂದು ಪಾಶ್ಚಿಮಾತ್ಯರು ನೀಡಿದ ಸಲಹೆಗೆ ಭಾರತದ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ಜರ್ಮನಿಯಲ್ಲಿ ನಡೆದ ಬರ್ಲಿನ್ ಗ್ಲೋಬಲ್ ಡೈಲಾಗ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪೀಯುಶ್ ಗೋಯಲ್, ಹವಾಮಾನ ಬದಲಾವಣೆ ವಿಚಾರವಾಗಿ ಪಾಶ್ಚಿಮಾತ್ಯರ ಆಷಾಡಭೂತಿತನವನ್ನು ನೇರವಾಗಿ ಎತ್ತಿ ಹಾಡಿದ್ದಾರೆ.

‘ಈ ಸಮಸ್ಯೆಗೆ ಮೊದಲು ಯಾರು ಕಾರಣ? ಈ ಓಝೋನ್ ಪದರ ಹೇಗೆ ಹಾನಿಗೊಂಡಿತು? ಅಲ್ಲಿಗೆ ಕಾರ್ಬಲ್ ಕಳುಹಿಸಿದವರು ಯಾರು?’ ಎಂದು ಗೋಯಲ್ ಪ್ರಶ್ನೆ ಮಾಡಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಸಿಂಗಾಪುರದ ಸಚಿವ ಟಾನ್ ಸೀ ಲಿಂಗ್, ಇಟಲಿಯ ಉದ್ಯಮಿ ಎಮ್ಮಾ ಮಾರ್ಸಿಗಾಗ್ಲಿಯಾ ಮತ್ತು ಜರ್ಮನಿಯ ಬ್ಯಾಂಕಿಂಗ್ ಉದ್ಯಮಿ ಮಾರ್ಟಿನ್ ಬ್ಲೆಸ್ಸಿಂಗ್ ಪಾಲ್ಗೊಂಡು, ಹವಾಮಾನ ಬದಲಾವಣೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಇದನ್ನೂ ಓದಿ: ಇನ್ಮುಂದೆ ಮೊಬೈಲ್‌ನಲ್ಲಿ ಆಕ್ಟಿವ್ ಸಿಮ್ ಇರಲೇಬೇಕು: ವಾಟ್ಸಾಪ್, ಟೆಲಿಗ್ರಾಂ ಬಳಕೆಗೆ ಸರ್ಕಾರದ ಹೊಸ ರೂಲ್ಸ್

ಅಭಿವೃದ್ಧಿ ಹೊಂದುವಾಗ ಎಷ್ಟು ಇಂಗಾಲ ಹೊರಹಾಕಿದಿರಿ…?

‘ನಾನು ವಿಶ್ವದ ಶೇ. 70 ಜನಸಂಖ್ಯೆಯ ಪರವಾಗಿ ಮಾತನಾಡುತ್ತಿದ್ದೇನೆ. ಇಂಗಾಲದ ಕೊಡುಗೆ ನಮ್ಮದು ಶೇ. 3ಕ್ಕಿಂತಲೂ ಕಡಿಮೆ. ನೀವು ವಿಶ್ವದ ಶೇ. 3-4 ಜನಸಂಖ್ಯೆಯನ್ನು ಹೊಂದಿದ್ದೀರಿ. ನಿಮ್ಮ ಕಾರ್ಬನ್ ಕೊಡುಗೆ ಬಹಳ ದೊಡ್ಡದು. ಹವಾಮಾನ ಬದಲಾವಣೆ ಸಮಸ್ಯೆಗೆ ಕಾರಣ ನೀವು’ ಎಂದು ಈ ಕಾರ್ಯಕ್ರಮದಲ್ಲಿ ಐರೋಪ್ಯ ಪ್ರತಿನಿಧಿಗಳನ್ನು ಗೋಯಲ್ ಝಾಡಿಸಿದರು.

ಪಿಯೂಶ್ ಗೋಯಲ್ ಮಾತನಾಡಿರುವ ವಿಡಿಯೋ

‘ನೀವು ಕಲ್ಲಿದ್ದಲು ಸುಡಲು ಒಳ್ಳೆಯ ಕಾರಣವಿರಬಹುದು. ನಿಮ್ಮ ಆರ್ಥಿಕತೆಗಳನ್ನು ಬೆಳೆಸುತ್ತಿದ್ದಿರಿ. ನಿಮಗೆ ಕಡಿಮೆ ವೆಚ್ಚದ ಕಾರ್ಬನ್ ಎನರ್ಜಿ ಬೇಕಿತ್ತು. ಕಡಿಮೆ ಬೆಲೆಗೆ ಇಂಧನ ಸಿಕ್ಕಲೆಂದು ನೀವು ದಿನಂಪ್ರತಿ ಕಲ್ಲಿದ್ದಲನ್ನು ಸುಟ್ಟಿರಿ’ ಎಂದು ಭಾರತದ ವಾಣಿಜ್ಯ ಸಚಿವರು ವಿವರಿಸಿದರು.

ಭಾರತದ ತಲಾ ಇಂಗಾಲ ಹೊರಸೂಸುವಿಕೆ ಇವತ್ತೂ ಕೂಡ ಯೂರೋಪ್​ನ ಶೇ. 10-12ರಷ್ಟಿರಬಹುದು. ನಾವು ದೊಡ್ಡ ಜನಸಂಖ್ಯೆಯನ್ನು ಸಾಕಬೇಕು. ಅತಿವೇಗವಾಗಿ ಆರ್ಥಿಕ ಬೆಳೆಯುತ್ತಿದೆ. ಆದರೂ ಕೂಡ ಭಾರತದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಕ್ಲೀನ್ ಎನರ್ಜಿ ಪ್ರೋಗ್ರಾಮ್ ಚಾಲನೆಯಲ್ಲಿದೆ ಎಂದು ಪಿಯೂಶ್ ಗೋಯಲ್ ಅವರು ಹವಾಮಾನ ಸಮಸ್ಯೆ ವಿಚಾರದಲ್ಲಿ ಭಾರತ ಹಾಕುತ್ತಿರುವ ಶ್ರಮವನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ: ಗ್ಲೋಬಲ್ ವೆಬ್‌ಸೈಟ್ ಸೆಕ್ಯುರಿಟಿ ಸರ್ಟಿಫಿಕೇಟ್ ವ್ಯವಹಾರದಿಂದ ಹಿಂದೆ ಸರಿಯಲು eMudhra ನಿರ್ಧಾರ

ಯೂರೋಪ್ ಕಾಲ ಮೇಲೆ ಚಪ್ಪಡಿ ಹಾಕಿಕೊಳ್ಳುತ್ತಿದೆ…

ಹೆಚ್ಚೆಚ್ಚು ನಿರ್ಬಂಧಗಳು, ನಿಯಮಗಳನ್ನು ತಂದು ನಿಮ್ಮ ಕಾಲ ಮೇಲೆ ಚಪ್ಪಡಿ ಎಳೆದುಕೊಳ್ಳುತ್ತಿದ್ದೀರಿ. ನೀವು CBAM (ಕಾರ್ಬನಲ್ ಬಾರ್ಡರ್ ಅಡ್ಜಸ್ಟ್​ಮೆಂಟ್ ಮೆಕಾನಿಸಂ) ಅನ್ನು ಜಾರಿಗೆ ತಂದಿರಿ. ನಿಮ್ಮ ದೇಶಕ್ಕೆ ಬರುವ ಉಕ್ಕಿನ ಮೇಲೆ ಶೇ. 50 ಸುಂಕ ಹಾಕಿದಿರಿ. ನೀವು ಆಪತ್ತು ಬರಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಜೀವನ ವೆಚ್ಚ ಹೆಚ್ಚುತ್ತದೆ ಎಂದು ಯೂರೋಪಿಯನ್ ಯೂನಿಯನ್​ಗೆ ಪಿಯೂಶ್ ಗೋಯಲ್ ತಿಳಿಹೇಳಿದರು.

‘ಐರೋಪ್ಯ ಒಕ್ಕೂಟ 75-77 ನಿಯಮಗಳನ್ನು ಹೊಂದಿದೆ. ನಮಗೆ ಅದರ ಲೆಕ್ಕವೇ ತಪ್ಪಿ ಹೋಗಿದೆ. ನೀವು ಹೀಗೆ ನಿಯಮಗಳನ್ನು ಸೇರಿಸುತ್ತಾ ಹೋದರೆ ನಿಮ್ಮ ಉದ್ಯಮಕ್ಕೆ ಸಂಚಕಾರವಾಗುತ್ತದೆ. ನಿಮ್ಮ ಸ್ಪರ್ಧಾತ್ಮಕತೆ ನಶಿಸುತ್ತದೆ…. ಈಗಂತೂ ಪ್ರತಿಕ್ರಮದ ಸನ್ನಿವೇಶವಿದೆ. ನೀವು ಒಂದು ನಿಯಮ ಜಾರಿ ಮಾಡಿದರೆ ಅವರು ಎರಡು ನಿಯಮಗಳನ್ನು ತರುತ್ತಾರೆ. ಅದು ನಿಮ್ಮ ಉದ್ಯಮಗಳಿಗೆ ಅನನುಕೂಲವಾಗಬಹುದು’ ಎಂದು ಬರ್ಲಿನ್ ಗ್ಲೋಬಲ್ ಡೈಲಾಗ್ ಕಾರ್ಯಕ್ರಮದಲ್ಲಿ ಪಿಯೂಶ್ ಗೋಯಲ್ ತಿಳಿಸಿದರು.

ಬರ್ಲಿನ್ ಗ್ಲೋಬಲ್ ಡೈಲಾಗ್​ನ ಪ್ಯಾನಲ್ ಚರ್ಚೆಯ ಪೂರ್ಣ ವಿಡಿಯೋ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More