
ಝುಂಝುನು, ಆಗಸ್ಟ್ 11: ರೈತರ ಬೆಳೆಗಳಿಗೆ ವಿಮಾ ರಕ್ಷಣೆ ನೀಡುವ ಪಿಎಂ ಫಸಲ್ ಬಿಮಾ ಯೋಜನೆ (PM Fasal Bima Yojana) ಅಡಿ ರೈತರ ಇನ್ಷೂರೆನ್ಸ್ ಕ್ಲೇಮ್ಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಸೋಮವಾರ 30 ಲಕ್ಷ ರೈತರ (farmers) ಖಾತೆಗಳಿಗೆ ಒಟ್ಟು 3,200 ಕೋಟಿ ರೂ ಹಣ ವರ್ಗಾವಣೆ ಮಾಡಿದ್ದಾರೆ. ರಾಜಸ್ಥಾನದ ಝುಂಝುನು ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆ ಅಡಿ ನಡೆದ ಕಾರ್ಯಕ್ರಮದಲ್ಲಿ ಅವರು ರೈತರ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ ಮಧ್ಯಪ್ರದೇಶ ಮತ್ತು ರಾಜಸ್ಥಾನದ ರೈತರಿಗೆ ಅತಿಹೆಚ್ಚು ಹಣ ರವಾನೆಯಾಗಿದೆ. ಮಧ್ಯಪ್ರದೇಶದ ರೈತರಿಗೆ 1,156 ಕೋಟಿ ರೂ ಸಿಕ್ಕರೆ, ರಾಜಸ್ಥಾನದ ರೈತರಿಗೆ 1,121 ಕೋಟಿ ರೂ ಸಿಕ್ಕಿದೆ. ಸುಮಾರು 923 ಕೋಟಿ ರೂ ಹಣವು ಇತರ ರಾಜ್ಯಗಳ ರೈತರ ಖಾತೆಗಳಿಗೆ ಹೋಗುತ್ತಿದೆ.
ಇದನ್ನೂ ಓದಿ: ಮ್ಯುಚುವಲ್ ಫಂಡ್ ಕಂಪನಿಗಳು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಕೊಡಬೇಕಿಲ್ಲ: ಸೆಬಿ ಕ್ರಮ
ಪಿಎಂ ಫಸಲ್ ಬಿಮಾ ಯೋಜನೆ ಅಡಿ ಹೊಸ ಮಾದರಿ ಕ್ಲೇಮ್ ಸೆಟಲ್ಮೆಂಟ್ ಸಿಸ್ಟಂ ಅನ್ನು ರೂಪಿಸಲಾಗಿದೆ. ರೈತರ ಬೆಳೆ ನಷ್ಟಕ್ಕೆ ಬೇಗ ಪರಿಹಾರ ಸಿಗುತ್ತದೆ.
2025ರ ಮುಂಗಾರು ಋತು ಬಳಿಕ ಕೇಂದ್ರ ಸರ್ಕಾರ ಒಂದಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸಬ್ಸಿಡಿ ಕೊಡುಗೆ ನೀಡಲು ವಿಳಂಬ ಮಾಡಿದರೆ ರಾಜ್ಯ ಸರ್ಕಾರಗಳಿಗೆ ಶೇ. 12ರಷ್ಟು ದಂಡ ವಿಧಿಸಲಾಗುತ್ತದೆ. ಇನ್ಷೂರೆನ್ಸ್ ಕಂಪನಿಗಳು ಕ್ಲೇಮ್ ಸೆಟಲ್ ಮಾಡಲು ವಿಳಂಬ ತೋರಿದರೆ, ಅವುಗಳಿಗೂ ಶೇ. 12ರಷ್ಟು ಪೆನಾಲ್ಟಿ ಹಾಕಲಾಗುತ್ತದೆ.
ಇದು ರೈತರಿಗೆಂದು ಇರುವ ಬೆಳೆ ವಿಮಾ ಸ್ಕೀಮ್. 2016ರಲ್ಲಿ ಆರಂಭವಾದ ಈ ಯೋಜನೆಯಲ್ಲಿ ರೈತರು ತಮ್ಮ ಬೆಳೆಗಳಿಗೆ ಇನ್ಷೂರೆನ್ಸ್ ಮಾಡಿಸಬಹುದು. ನಿಗದಿತ ಇನ್ಷೂರೆನ್ಸ್ ಕಂಪನಿಗಳಿಂದ ವಿಮೆ ಪಡೆಯಬಹುದು. ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ಸಬ್ಸಿಡಿ ಸಿಗುತ್ತದೆ. ಪ್ರೀಮಿಯಮ್ ಬಹಳ ಕಡಿಮೆ ಇರುತ್ತದೆ.
ಇದನ್ನೂ ಓದಿ: ರೈತರ ಹಿತರಕ್ಷಣೆಗೆ ಪ್ರಧಾನಿ ಮೋದಿಗಿರುವ ಬದ್ಧತೆಯನ್ನು ಮೆಚ್ಚಿದ ಮಾಜಿ ಡಬ್ಲ್ಯುಎಚ್ಒ ಡಿಡಿಜಿ ಸೌಮ್ಯಾ ಸ್ವಾಮಿನಾಥನ್
ಪ್ರಕೃತಿ ವಿಕೋಪ, ಕೆಟ್ಟ ಹವಾಗುಣ ಇತ್ಯಾದಿಯಿಂದ ಬೆಳೆಗಳಿಗೆ ಹಾನಿಯಾಗಿದ್ದರೆ ರೈತರು ವಿಮಾ ಹಣಕ್ಕೆ ಕ್ಲೇಮ್ ಸಲ್ಲಿಸಬಹುದು. ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಮೀಕ್ಷೆ ನಡೆಸಿ ಬೆಳೆಹಾನಿ ಅಂದಾಜು ಮಾಡುತ್ತಾರೆ. ಅವರ ಶಿಫಾರಸು ಪ್ರಕಾರ ಕ್ಲೇಮ್ ಹಣ ನಿರ್ಧಾರವಾಗುತ್ತದೆ.
ಹೆಚ್ಚಿನ ಮಾಹಿತಿಗೆಗೆ ಪಿಎಂ ಫಸಲ್ ಬಿಮಾ ಯೋಜನೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು. ಅದರ ಲಿಂಕ್ ಇಲ್ಲಿದೆ: pmfby.gov.in/
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ