ಇನ್ಫ್ರಾಸ್ಟ್ರಕ್ಚರ್
ನವದೆಹಲಿ, ಜೂನ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಇನ್ಫ್ರಾಸ್ಟ್ರಕ್ಚರ್ ಆಭಿವೃದ್ಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರೈಲ್ವೇಸ್ನಿಂದ ಹಿಡಿದು ಹೈವೇಸ್ವರೆಗೆ, ಪೋರ್ಟ್ಗಳಿಂದ ಹಿಡಿದು ಏರ್ಪೋರ್ಟ್ಗಳವರೆಗೆ ಭಾರತದಲ್ಲಿ ಮೂಲಸೌಕರ್ಯ ಜಾಲ ಬಹಳ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಇದರಿಂದ ಸಮೃದ್ಧಿ ಹೆಚ್ಚುತ್ತಿದೆ, ಸುಗಮ ಜೀವನವೂ ಹೆಚ್ಚುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಆಡಳಿತಕ್ಕೆ 11 ವರ್ಷವಾದ ಹಿನ್ನೆಲೆಯಲ್ಲಿ ಸರ್ಕಾರದ MyGovIndia ತನ್ನ ಎಕ್ಸ್ ಪೋಸ್ಟ್ನಲ್ಲಿ ಈ 11 ವರ್ಷಗಳಲ್ಲಿ ಆಗಿರುವ ಇನ್ಫ್ರಾಸ್ಟ್ರಕ್ಚರ್ ಕ್ರಾಂತಿಯನ್ನು ಎತ್ತಿತೋರಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಸ್ಮಾರ್ಟ್ ಸಿಟಿ, ಸುರಕ್ಷಿತ ರಸ್ತೆ, ಸುಗಮ ಸಂಚಾರ ಸಾಧ್ಯವಾಗಿದೆ ಎಂದು ಹೇಳಿದೆ. ಈ ಪೋಸ್ಟ್ಗೆ ನರೇಂದ್ರ ಮೋದಿ ಪ್ರತಿಕ್ರಿಯಿಸಿ, ದೇಶದಲ್ಲಾಗಿರುವ ಮೂಲಸೌಕರ್ಯ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ.
ದೂರದೃಷ್ಟಿ ಮತ್ತು ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಲೆಮಾರಿನ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಭಾರತ ಒತ್ತುಕೊಡುತ್ತಿದೆ. ಇದು ಸ್ವಾವಲಂಬಿ ದೇಶ ನಿರ್ಮಾಣಕ್ಕೆ ಗಟ್ಟಿ ಅಡಿಪಾಯ ಹಾಕಿದಂತೆ ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶೇ. 27 ಇದ್ದ ಅತಿಬಡತನ 11 ವರ್ಷದಲ್ಲಿ ಶೇ. 5.3ಕ್ಕೆ ಇಳಿಕೆ; ವಿಶ್ವಬ್ಯಾಂಕ್ ದತ್ತಾಂಶದಿಂದ ಮಾಹಿತಿ
2014ರಿಂದ ಭಾರತದಲ್ಲಿ ಆದ ಇನ್ಫ್ರಾಸ್ಟ್ರಕ್ಚರ್ ಕ್ರಾಂತಿಗಳ ಮುಖ್ಯಾಂಶಗಳು
- ಪಿಎಂ ಗತಿಶಕ್ತಿ ಮಾಸ್ಟರ್ ಪ್ಲಾನ್: ಪ್ರಮುಖ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳ ಮಧ್ಯೆ ಸಮನ್ವಯತೆ ತರುವ ಪಿಎಂ ಗತಿಶಕ್ತಿ ಪ್ಲಾನ್ 2021ರಲ್ಲಿ ಆರಂಭವಾಗಿದೆ.
- ಕಳೆದ 11 ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿ 91,287 ಕಿಮೀ ಇದ್ದದ್ದು 1,46,204 ಕಿಮೀಗೆ ಏರಿದೆ. ಶೇ. 60ರಷ್ಟು ಹೆದ್ದಾರಿ ಹೆಚ್ಚಿದೆ.
- ಹೆದ್ಧಾರಿ ನಿರ್ಮಾಣದ ವೇಗ ಮೂರು ಪಟ್ಟು ಹೆಚ್ಚು. 2014ರಲ್ಲಿ ದಿನಕ್ಕೆ ಸರಾಸರಿಯಾಗಿ 11.6 ಕಿಮೀ ಹೆದ್ದಾರಿ ನಿರ್ಮಾಣ ಆಗುತ್ತಿತ್ತು. ಈಗ ದಿನಕ್ಕೆ 34 ಕಿಮೀ ಹೆದ್ದಾರಿ ನಿರ್ಮಾಣ ಆಗುತ್ತಿದೆ.
- ಭಾರತಮಾಲ ಯೋಜನೆ: 26,425 ಕಿಮೀಗೆ ಅನುಮೋದನೆ ಸಿಕ್ಕಿದೆ. ಇದರಲ್ಲಿ 20,378 ಕಿಮೀ ನಿರ್ಮಾಣ ಆಗಿದೆ.
- ವಂದೇ ಭಾರತ್: 333 ಜಿಲ್ಲೆಗಳಲ್ಲಿ 68 ವಂದೇ ಭಾರತ್ ಟ್ರೈನ್ಗಳು ಓಡುತ್ತಿವೆ.
- 2014ರಿಂದ 45,000 ಕಿಮೀಯಷ್ಟು ರೈಲು ವಿದ್ಯುದೀಕರಣ ಆಗಿದೆ.
- ರೈಲ್ವೆ ಸುರಕ್ಷತೆ ದೃಷ್ಟಿಯಿಂದ ಪ್ರಮುಖ ಮಾರ್ಗಗಳಲ್ಲಿ ಕವಚ್ ಅಳವಡಿಕೆ ಆಗಿದೆ.
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸುಲಭವಾಗಲು 1,790 ಲಿಫ್ಟ್ ಮತ್ತು 1,602 ಎಸ್ಕಲೇಟರ್ಗಳನ್ನು ಅಳವಡಿಸಲಾಗಿದೆ.
- ಕಳೆದ 11 ವರ್ಷದಲ್ಲಿ ಗ್ರಾಮೀಣ ಭಾಗದಲ್ಲಿ 7.8 ಲಕ್ಷ ಕಿಮೀ ರಸ್ತೆಗಳ ನಿರ್ಮಾಣ ಪೂರ್ಣವಾಗಿದೆ.
- ಉಡಾನ್ ಯೋಜನೆ ಅಡಿ ದೇಶಾದ್ಯಂತ 88 ಏರ್ಪೋರ್ಟ್ಗಳು ಕಾರ್ಯಾತ್ಮಕವಾಗಿವೆ.
- ಒಂದೂವರೆ ಕೋಟಿಗೂ ಅಧಿಕ ಜನರು ಪ್ರಾದೇಶಿಕ ಮಾರ್ಗಗಳಲ್ಲಿ ವಿಮಾನ ಸಂಚಾರ ಮಾಡಿದ್ದಾರೆ.
- 24 ಏರ್ಪೋರ್ಟ್ಗಳಲ್ಲಿ ಡಿಜಿ ಯಾತ್ರಾ ಅಳವಡಿಕೆ ಆಗಿದೆ. 522 ಕೋಟಿ ಜನರು ಇದನ್ನು ಬಳಸಿದ್ದಾರೆ.
- ಬಂದರು ಸಾಮರ್ಥ್ಯ ದ್ವಿಗುಣಗೊಂಡು 2,762 ಎಂಎಂಟಿಪಿಎ ಮುಟ್ಟಿದೆ.
- ಹಡಗುಗಳ ಟರ್ನರೌಂಡ್ ಟೈಮ್ 93 ಗಂಟೆಯಿಂದ 49 ಗಂಟೆಗೆ ಇಳಿದಿದೆ. ಟರ್ನರೌಂಡ್ ಟೈಮ್ ಎಂದರೆ ಒಂದು ಹಡಗಿನಲ್ಲಿರುವ ಸರಕುಗಳನ್ನು ಇಳಿಸಿ, ಹೊಸ ಸರಕುಗಳನ್ನು ತುಂಬಿಸಿ ಸಂಚಾರಕ್ಕೆ ಸಿದ್ಧವಾಗುವವರೆಗಿನ ಸಮಯ.
- ಸಾಗರಮಾಲ ಯೋಜನೆ ಅಡಿ 277 ಪ್ರಾಜೆಕ್ಟ್ ಪೂರ್ಣಗೊಂಡಿದೆ. ಎರಡನೇ ಭಾಗದ ಸಾಗರಮಾಲ ಯೋಜನೆಯನ್ನು ಆರಂಭಿಸಲಾಗಿದೆ.
- ಒಳನಾಡು ಜಲಮಾರ್ಗಗಳಲ್ಲಿ ಸರಕು ಸಾಗಣೆಯು ಶೇ. 710ರಷ್ಟು ಹೆಚ್ಚಾಗಿದೆ. 18 ಎಂಎಂಟಿಯಷ್ಟು ಸರಕು ಸಾಗಣೆಯಾಗುತ್ತಿತ್ತು. ಈಗ 146 ಎಂಎಂಟಿ ಸರಕು ಸಾಗಣೆ ಆಗುತ್ತಿದೆ.
- ಮೂರು ಪ್ರಮುಖ ಬಂದರುಗಳಲ್ಲಿ ಗ್ರೀನ್ ಹೈಡ್ರೋಜನ್ ಹಬ್ಗಳನ್ನು ನಿರ್ಮಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ