ನವದೆಹಲಿ: ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಂ ಕಿಸಾನ್ ಯೋಜನೆಯ (PM-KISAN) 13ನೇ ಕಂತಿನ ಹಣ ತುಸು ವಿಳಂಬವಾಗಿ ಬಿಡುಗಡೆ ಆಗುತ್ತಿದೆ. ಕಳೆದ ತಿಂಗಳೇ ಕಂತು ಬಿಡುಗಡೆ ಆಗಬೇಕಿತ್ತು. ವಿವಿಧ ಕಾರಣಗಳಿಂದ ತಡವಾಗಿ ಹಣವು ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಫೆಬ್ರುವರಿ 24ರಂದು ಹೊಸ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ.
2019ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈವರೆಗೆ 2 ಸಾವಿರ ರೂಗಳ 12 ಕಂತು ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. 2022ರ ಅಕ್ಟೋಬರ್ 17ರಂದು 12ನೇ ಕಂತಿನ 2 ಸಾವಿರ ರೂ ಹಣವನ್ನು 8 ಕೋಟಿ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಅಷ್ಟೂ ಸೇರಿ ಒಟ್ಟು ಮೊತ್ತವಾದ 16 ಸಾವಿರ ಕೋಟಿ ರೂ ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕೆವೈಸಿ ಭರ್ತಿ ಮಾಡಲು ಕೋರಲಾಗಿದ್ದು, ಅದಕ್ಕೆ ಕೊನೆಯ ದಿನಾಂಕ ಫೆ. 10ರಂದು ಇತ್ತು. ಕೆವೈಸಿ ಯಶಸ್ವಿಯಾಗಿದ್ದವರಿಗೆ ಈ 13ನೇ ಕಂತಿನ ಹಣ ಸಿಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣ ಬಿಡುಗಡೆ ಆಗಿದೆಯೇ? ಅದು ಖಾತೆಗೆ ವರ್ಗಾವಣೆಯಾಗಿದೆಯೇ ಎಂದು ಆನ್ಲೈನ್ ಮೂಲಕ ಪರಿಶೀಲಿಸುವ ಹಂತ ಹಂತದ ವಿವರ ಇಲ್ಲಿ ನೀಡಲಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂ. ನೀಡಲಾಗುತ್ತದೆ. 2,000 ರೂ.ಗಳ ಮೂರು ಕಂತಿನಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಅರ್ಹ ರೈತರ ಕುಟುಂಬದವರು, ಅಂದರೆ ರೈತನ ಪತ್ನಿ, ಸಣ್ಣ ಮಕ್ಕಳೂ ಕಂತಿನ ಹಣ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ರೈತರು ಯಾರು ಎಂಬುದನ್ನು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಗುರುತಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ