PM Kisan eKYC: ಪಿಎಂ ಕಿಸಾನ್ ಇಕೆವೈಸಿ ದಿನಾಂಕ ವಿಸ್ತರಣೆ ಆಗಿದ್ದರೂ ಆನ್​ಲೈನ್​ನಲ್ಲಿ ಅಪ್​ಡೇಟ್ ಆಗಲ್ಲ

| Updated By: Srinivas Mata

Updated on: Apr 05, 2022 | 9:49 PM

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ಇಕೆವೈಸಿ ಗಡುವನ್ನು ವಿಸ್ತರಣೆ ಮಾಡಲಾಗಿದೆ. ಆದರೆ ಆಫ್​ಲೈನ್ ಮೂಲಕ ಮಾತ್ರ ಮಾಡಬಹುದು.

PM Kisan eKYC: ಪಿಎಂ ಕಿಸಾನ್ ಇಕೆವೈಸಿ ದಿನಾಂಕ ವಿಸ್ತರಣೆ ಆಗಿದ್ದರೂ ಆನ್​ಲೈನ್​ನಲ್ಲಿ ಅಪ್​ಡೇಟ್ ಆಗಲ್ಲ
ಸಾಂದರ್ಭಿಕ ಚಿತ್ರ
Follow us on

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-Kisan Samman Nidhi Yojana) ಅಡಿಯಲ್ಲಿ ಅರ್ಹ ರೈತರಿಗೆ ಇಕೆವೈಸಿ ಗಡುವನ್ನು ಸರ್ಕಾರ ವಿಸ್ತರಣೆ ಮಾಡಿದೆ. ಈ ವರ್ಷದ ಮಾರ್ಚ್ 31ರಂದು ಗಡುವು ಕೊನೆ ಆಗಬೇಕಿತ್ತು. ಅದನ್ನು ಈಗ ಮೇ 22, 2022ಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. “ಪಿಎಂ ಕಿಸಾನ್ ಎಲ್ಲ ಫಲಾನುಭವಿಗಳ ಇಕೆವೈಸಿ ಗಡುವು 2022ರ ಮೇ 22ಕ್ಕೆ ವಿಸ್ತರಣೆ ಮಾಡಲಾಗಿದೆ” ಎಂದು ಪಿಎಂ ಕಿಸಾನ್ ವೆಬ್​ಸೈಟ್​ನಲ್ಲಿ ಹೇಳಲಾಗಿದೆ. ವಾರ್ಷಿಕವಾದ ಮೊತ್ತವು ಬರಬೇಕು ಅಂದರೆ ಎಲ್ಲ ಫಲಾನುಭವಿ ರೈತರು ಕಡ್ಡಾಯವಾಗಿ ಇಕೆವೈಸಿ ನೀಡಬೇಕು. ಅಂದಹಾಗೆ ಈ ಯೋಜನೆ ಕೇಂದ್ರದ್ದಾಗಿದ್ದು, ನೇರ ಅನುಕೂಲ ವರ್ಗಾವಣೆ (DBT) ಮೂಲಕ ವರ್ಷಕ್ಕೆ 6000 ರೂಪಾಯಿ ಅರ್ಹ ರೈತ ಫಲಾನುಭವಿಗಳಿಗೆ ತಲುಪಿಸಲಾಗುವುದು.

ಪ್ರತಿ ವರ್ಷ ಮೂರು ಕಂತಿನಲ್ಲಿ ಹಣ ವರ್ಗಾವಣೆ ಮಾಡಲಾಗುವುದು. ಏಪ್ರಿಲ್​ನಿಂದ ಜುಲೈ, ಆಗಸ್ಟ್​ನಿಂದ ನವೆಂಬರ್ ಮತ್ತು ಮಾರ್ಚ್ ಈ ಮೂರು ಅವಧಿಯಲ್ಲಿ ನೀಡಲಾಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭವಾಗಿದ್ದು 2018ರ ಡಿಸೆಂಬರ್​ನಲ್ಲಿ. ಸಣ್ಣ ಪ್ರಮಾಣದ ಭೂ ಹಿಡುವಳಿ ಹೊಂದಿರುವ ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಜಾರಿಗೆ ತಂದ ಯೋಜನೆಯು ಇದಾಗಿದೆ. ಈ ಕಂತುಗಳನ್ನು ಬಿಡುಗಡೆ ಮಾಡುವುದಕ್ಕೆ ಪಿಎಂ ಕಿಸಾನ್ ಪೋರ್ಟಲ್​ನಿಂದ ರೈತರ ಆಧಾರ್ ಡೇಟಾ ಬಳಸಿಕೊಳ್ಳಲಾಗುತ್ತದೆ. ಅದರ ಅಡಿಯಲ್ಲಿ ಇಕೆವೈಸಿ ಕಡ್ಡಾಯ ಆಗಿದೆ. ಆದರೆ ದಿನಾಂಕ ವಿಸ್ತರಣೆ ನಂತರ ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಇಕೆವೈಸಿ ಆಯ್ಕೆಗಳಿಲ್ಲ.

ಪಿಎಂ ಕಿಸಾನ್ ವೆಬ್​ಸೈಟ್​ ಪ್ರಕಾರ, ಪಿಎಂ ಕಿಸಾನ್ ನೋಂದಾಯಿತ ರೈತರಿಗೆ ಇಕೆವೈಸಿ ಕಡ್ಡಾಯ. ದಯವಿಟ್ಟು ಹತ್ತಿರದ ಸಿಎಸ್​ಸಿ ಸೆಂಟರ್​ ಅನ್ನು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಭೇಟಿ ಮಾಡಿ. ಆಧಾರ್​ ಆಧಾರಿತ ಇಕೆವೈಸಿಯನ್ನು ಒಟಿಪಿ ದೃಢೀಕರಣದ ಮೂಲಕ ಮಾಡುವುದನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಇದರರ್ಥ ಎಲ್ಲ ಅರ್ಹ ರೈತರು ಆಧಾರ್​ ಜತೆಗೆ ಒಟಿಪಿ ದೃಢೀಕರಣದ ಬಳಸಿ ಇಕೆವೈಸಿ ಪೂರ್ಣಗೊಳಿಸಲು ಆಗಲ್ಲ. ಬಯೋಮೆಟ್ರಿಕ್ ದೃಢೀಕರಣದ ಮೂಲಕ ಮಾರದೆ ಪಿಎಂ ಕಿಸಾನ್ ಇಕೆವೈಸಿ ಪೂರ್ತಿ ಮಾಡಲು ಸಾಧ್ಯ. ಅದನ್ನು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್​ಗೆ ಭೇಟಿ ನೀಡುವ ಮೂಲಕ, ಬಯೋಮೆಟ್ರಿಕ್ ನಮಾಹಿತಿ ನೀಡುವ ಮೂಲಕ ಮಾತ್ರ ಸಾಧ್ಯ.

11ನೇ ಕಂತಿನ ಪಿಎಂ ಕಿಸಾಬ್ ಯೋಜನೆ ಹಣ ಪಡೆಯಲು ಇದು ಅಗತ್ಯ. ಆಫ್​ಲೈನ್ ಮೂಲಕ ಇಕೆವೈಸಿ ಮುಗಿಸಿದ ಮೇಲೆ ರೈತ ಫಲಾನುಭವಿಗಳ ಖಾತೆಗೆ ಎರಡು ಸಾವಿರ ರೂಪಾಯಿ ಜಮೆ ಆಗುತ್ತದೆ. ಒಂದು ವೇಳೆ ಫಲಾನುಭವಿ ರೈತರು ತಪ್ಪಾದ ಮಾಹಿತಿ ನೀಡಿದಲ್ಲಿ ಜಮೆಯಾದ ಹಣಕ್ಕೆ ಹೊಣೆ ಆಗಬೇಕಾಗುತ್ತದೆ ಮತ್ತು ದಂಡ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹೇಗೆ? ಇಲ್ಲಿದೆ ವಿವರಣೆ