ಪಿಎಂ ಕಿಸಾನ್: ಎಲ್ಲಾ ಅರ್ಹ ರೈತರನ್ನೂ ತಲುಪಲು ಸರ್ಕಾರ ಯತ್ನ; ನೀವು ಈ ಯೋಜನೆಗೆ ಅರ್ಹರಾ? ಇಲ್ಲಿದೆ ಡೀಟೇಲ್ಸ್

PM Kisan Samman Nidhi Yojana: ರೈತರಿಗೆ ಕೃಷಿಗೆ ಸಹಾಯವಾಗಲು ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು 2019ರಲ್ಲಿ ಆರಂಭಿಸಿದೆ. ವರ್ಷಕ್ಕೆ ಮೂರು ಬಾರಿ ರೈತರಿಗೆ 2,000 ರೂ ಹಣವನ್ನು ಸರ್ಕಾರ ನೀಡುತ್ತದೆ. ಇಲ್ಲಿಯವರೆಗೆ 19 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 10 ಕೋಟಿಯಷ್ಟು ಫಲಾನುಭವಿ ರೈತರಿದ್ದಾರೆ. ಯೋಜನೆಗೆ ಅರ್ಹರಾಗಿರುವ ಯಾವ ರೈತರನ್ನೂ ಕೈಬಿಡದಂತೆ ಸರ್ಕಾರ ಮೇ 31ರವರೆಗೂ ಅಭಿಯಾನ ನಡೆಸಿದೆ.

ಪಿಎಂ ಕಿಸಾನ್: ಎಲ್ಲಾ ಅರ್ಹ ರೈತರನ್ನೂ ತಲುಪಲು ಸರ್ಕಾರ ಯತ್ನ; ನೀವು ಈ ಯೋಜನೆಗೆ ಅರ್ಹರಾ? ಇಲ್ಲಿದೆ ಡೀಟೇಲ್ಸ್
ಪಿಎಂ ಕಿಸಾನ್ ಯೋಜನೆ

Updated on: May 22, 2025 | 7:29 PM

ನವದೆಹಲಿ, ಮೇ 22: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (PM Kisan Samman Nidhi Yojana) ಎಲ್ಲಾ ಅರ್ಹ ರೈತರಿಗೂ (farmer) ತಲುಪಿಸಲು ಸರ್ಕಾರ ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ. ಯೋಜನೆಗೆ ಅರ್ಹರಿರುವ ಯಾವ ವ್ಯಕ್ತಿಯೂ ಹೊರಗುಳಿಯಬಾರದು ಎಂಬುದು ಸರ್ಕಾರದ ಗುರಿ. ಈ ಸ್ಯಾಚುರೇಶನ್ ಡ್ರೈವ್ ಮೇ 1ರಂದು ಆರಂಭವಾಗಿದ್ದು, ಮೇ 31ರವರೆಗೆ ಇರಲಿದೆ.

2019ರಲ್ಲಿ ಆರಂಭವಾದ ಈ ಯೋಜನೆಯಲ್ಲಿ 11 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ರೈತರ ವ್ಯವಸಾಯಕ್ಕೆ ನೆರವಾಗಲು ಸರ್ಕಾರ ಈ ಸ್ಕೀಮ್ ಆರಂಭಿಸಿದೆ. ವರ್ಷಕ್ಕೆ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತದೆ. ವರ್ಷಕ್ಕೆ ಮೂರು ಬಾರಿ, ಅಂದರೆ, ನಾಲ್ಕು ತಿಂಗಳಿಗೊಮ್ಮೆ ತಲಾ 2,000 ರೂ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಹಣ ಹಾಕಲಾಗುತ್ತದೆ.

ಇಲ್ಲಿಯವರೆಗೆ 19 ಕಂತುಗಳನ್ನು ಸರ್ಕಾರ ನೀಡಿದೆ. ಫೆಬ್ರುವರಿ 24ರಂದು 9.8 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ 19ನೇ ಕಂತಿನ ಹಣ ಬಿಡುಗಡೆ ಮಾಡಲಾಗಿತ್ತು. ಈ 9.8 ಕೋಟಿ ರೈತರಲ್ಲಿ 2.41 ಕೋಟಿ ಮಹಿಳೆಯರೇ ಇದ್ದಾರೆ.

ಇದನ್ನೂ ಓದಿ
ಯಾರು ಯಾವ ಐಟಿಆರ್ ಫಾರ್ಮ್ ಭರ್ತಿ ಮಾಡಬೇಕು?
ಡಿಜಿಟಲ್ ಕೃಷಿ: ಬಂಗಾರವಾಗಲಿದೆ ರೈತರ ಬದುಕು: ಪತಂಜಲಿ
ಭಾರತದಿಂದ ಆಹಾರವಸ್ತುಗಳ ರಫ್ತಿನಲ್ಲಿ ದಾಖಲೆ ಏರಿಕೆ
ರೈತರು ಬೆಳೆ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: ಟ್ಯಾಕ್ಸ್ ಸಮಯ; ಭಾರತದಲ್ಲಿ 7 ರೀತಿಯ ತೆರಿಗೆದಾರರು, 7 ಐಟಿಆರ್ ಫಾರ್ಮ್​​ಗಳು; ಯಾವುದು ಯಾರಿಗೆ? ಇಲ್ಲಿದೆ ಡೀಟೇಲ್ಸ್

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?

ತಮ್ಮ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರುವ ಯಾವುದೇ ವ್ಯಕ್ತಿಯೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಆದರೆ, ಈ ಕೆಳಕಂಡ ರೈತರನ್ನು ಹೊರತುಪಡಿಸಿ…

  • ಕಳೆದ ಮೂರು ವರ್ಷಗಳಲ್ಲಿ ಐಟಿ ರಿಟರ್ನ್ ಸಲ್ಲಿಸಿರುವವರು
  • ವೈದ್ಯ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರುವವರು
  • ಶಾಸಕ, ಸಂಸದ ಇತ್ಯಾದಿ ಆದವರು, ಹಿಂದೆ ಆಗಿದ್ದವರೂ…
  • ಸರ್ಕಾರಿ ನೌಕರರು, ಪಿಂಚಣಿದಾರರು

ಈ ಮೇಲಿನವರನ್ನು ಬಿಟ್ಟು ಸ್ವಂತ ಕೃಷಿಭೂಮಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಬಹುದು.

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?

ರೈತರು ಸಮೀಪದ ಕೃಷಿ ಕೇಂದ್ರ ಅಥವಾ ಕಾಮನ್ ಸರ್ವಿಸ್ ಸೆಂಟರ್​​ಗೆ (ಸಿಎಸ್​​ಸಿ) ಹೋಗಿ ಯೋಜನೆಗೆ ನೊಂದಾಯಿಸಬಹುದು. ಕೃಷಿ ಜಮೀನಿನ ಪಹಣಿ ಪತ್ರ, ಆಧಾರ್ ಕಾರ್ಡ್ ದಾಖಲೆ ಇದ್ದರೆ ಸಾಕು ನೊಂದಾಯಿಸಬಹುದು. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​​ಸೈಟ್​​ಗೆ ಹೋಗಿ ಅಲ್ಲಿಯೂ ನೊಂದಾಯಿಸಲು ಅವಕಾಶ ಇದೆ.

ಇದನ್ನೂ ಓದಿ: ರೈತರಿಗೆ ಬೆಳೆ ವಿಮೆ ಯೋಜನೆ ಪಿಎಂಎಫ್​​ಬಿವೈ; ಪಿಎಂ ಫಸಲ್ ಬಿಮಾ ಯೋಜನೆಯ ಸಮಗ್ರ ಮಾಹಿತಿ

ನೀವು ಈಗಾಗಲೇ ಹಿಂದೆ ನೊಂದಾಯಿಸಿದ್ದು ಕಂತಿನ ಹಣ ಬರುವುದು ನಿಂತುಹೋಗಿದ್ದರೆ ಅದಕ್ಕೆ ಕಾರಣ ಇದೆ. ನೀವು ಕೆವೈಸಿ ಅಪ್​ಡೇಟ್ ಮಾಡಿಲ್ಲದೇ ಹೋದರೆ ಹಣ ಸಿಗುವುದಿಲ್ಲ. ಹಾಗೆಯೇ, ನೀವು ಯೋಜನೆಗೆ ನೀಡಿರುವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದೇ ಹೋದರೂ ಹಣ ಸಿಗುವುದಿಲ್ಲ. ಪಿಎಂ ಕಿಸಾನ್​​ನ 20ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಸಿಗಬಹುದು. ಅಷ್ಟರೊಳಗೆ ನೀವು ಕೆವೈಸಿ ಅಪ್​ಡೇಟ್ ಮಾಡಿಕೊಳ್ಳಬಹುದು, ಅಥವಾ ಯೋಜನೆಗೆ ನೊಂದಾಯಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ