ಪಿಎಂ ಕಿಸಾನ್ ಯೋಜನೆಯಲ್ಲಿ ಹಣದ ಮೊತ್ತ ಹೆಚ್ಚಳ ಸಾಧ್ಯತೆ; ಈ ಸ್ಕೀಮ್​ಗೆ ನೊಂದಾಯಿಸಿಕೊಳ್ಳುವುದು ಹೇಗೆ?

|

Updated on: Jul 04, 2024 | 3:56 PM

PM Kisan Scheme update in Union Budget: ಪಿಎಂ ಕಿಸಾನ್ ಯೋಜನೆಯ ಅಡಿ ಒಂಬತ್ತು ಕೋಟಿಗೂ ಅಧಿಕ ರೈತರು ನೊಂದಾಯಿಸಿಕೊಂಡು ವರ್ಷಕ್ಕೆ 6 ಸಾವಿರ ರೂ ಪಡೆಯುತ್ತಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಯ ಹಣವನ್ನು ಆರು ಸಾವಿರ ರೂನಿಂದ ಎಂಟು ಸಾವಿರ ರೂಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. 2019ರಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಈವರೆಗೆ ತಲಾ ಎರಡು ಸಾವಿರ ರೂಗಳಂತೆ 17 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಹಣದ ಮೊತ್ತ ಹೆಚ್ಚಳ ಸಾಧ್ಯತೆ; ಈ ಸ್ಕೀಮ್​ಗೆ ನೊಂದಾಯಿಸಿಕೊಳ್ಳುವುದು ಹೇಗೆ?
ಪಿಎಂ ಕಿಸಾನ್ ಯೋಜನೆ
Follow us on

ನವದೆಹಲಿ, ಜುಲೈ 4: ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಗೆ ಅನುದಾನ ಹೆಚ್ಚಿಸುವ ಸಾಧ್ಯತೆ ಇದೆ. ಸ್ಕೀಮ್​ನಲ್ಲಿ ಈಗ ವರ್ಷಕ್ಕೆ 6,000 ರೂ ನೀಡಲಾಗುತ್ತಿದ್ದು, ಅದನ್ನು 8,000 ರೂಗೆ ಹೆಚ್ಚಿಸಲು ಸರ್ಕಾರ ಯೋಜಿಸಿರುವುದು ತಿಳಿದುಬಂದಿದೆ. ಈಗ ಪ್ರತೀ ನಾಲ್ಕು ತಿಂಗಳಿಗೊಮ್ಮೆ, ಅಂದರೆ ವರ್ಷದಲ್ಲಿ ಮೂರು ಬಾರಿ ತಲಾ 2,000 ರೂನ ಕಂತುಗಳಲ್ಲಿ ರೈತರಿಗೆ ಹಣ ಕೊಡಲಾಗುತ್ತಿದೆ. ಈಗ ಕಂತುಗಳ ಸಂಖ್ಯೆಯನ್ನು ಎಂಟು ಸಾವಿರ ರೂಗೆ ಹೆಚ್ಚಿಸಬಹುದು ಎನ್ನುವಂತಹ ಸುದ್ದಿ ಹರಿದಾಡುತ್ತಿದೆ.

ಇತ್ತೀಚೆಗೆ ಕೃಷಿ ಕ್ಷೇತ್ರದ ತಜ್ಞರು, ಪ್ರತಿನಿಧಿಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಈ ವಿಚಾರವನ್ನು ಚರ್ಚಿಸಿ ಮನವಿ ಕೂಡ ಮಾಡಿದ್ದಾರೆ. ಕೃಷಿ ಸಚಿವಾಲಯ ಕೂಡ ಪಿಎಂ ಕಿಸಾನ್ ಯೋಜನೆ ಕಂತು ಹೆಚ್ಚಿಸಲು ಶಿಫಾರಸು ಮಾಡಿರುವುದು ತಿಳಿದುಬಂದಿದೆ. ಈ ಬಾರಿ ಕೃಷಿ ಸಚಿವರಾಗಿರುವುದು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್. ಇದೇ ವೇಳೆ ಪಿಎಂ ಕಿಸಾನ್ ಯೋಜನೆಗೆ ಅನುದಾನ ಹೆಚ್ಚಿಸುವುದಷ್ಟೇ ಅಲ್ಲ, ಬಜೆಟ್​ನಲ್ಲಿ ಕೃಷಿ ಸಂಶೋಧನೆಗೆ ಇರುವ ಅನುದಾನವನ್ನೂ ಹೆಚ್ಚಿಸಬೇಕು ಎಂದು ಕೃಷಿ ಕ್ಷೇತ್ರದವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಸ್ಟ್ಯಾಂಡರ್ಡ್ ಡಿಡಕ್ಷನ್ ಒಂದು ಲಕ್ಷ ರೂಗೆ ಏರಿಕೆ ಸಾಧ್ಯತೆ; ಬಜೆಟ್​ನಿಂದ ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ..!

ಪಿಎಂ ಕಿಸಾನ್ ಯೋಜನೆ ಏನು?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಜಮೀನು ಹೊಂದಿರುವ ಕೃಷಿಕರಿಗೆ ಧನ ಸಹಾಯ ಒದಗಿಸಲಾಗುತ್ತದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ತಲಾ ಎರಡು ಸಾವಿರ ರೂನಂತೆ ಒಟ್ಟು ಆರು ಸಾವಿರ ರೂಗಳನ್ನು ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ಒದಗಿಸುತ್ತದೆ.

2019ರ ಫೆಬ್ರುವರಿಯಲ್ಲಿ ಆರಂಭವಾದ ಈ ಸ್ಕೀಮ್​ನಲ್ಲಿ ಇಲ್ಲಿಯವರೆಗೆ 17 ಕಂತುಗಳ ಹಣ ಬಿಡುಗಡೆ ಮಾಡಲಾಗಿದೆ. 9 ಕೋಟಿಗೂ ಅಧಿಕ ಫಲಾನುಭವಿಗಳು ಇದ್ದಾರೆ.

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?

ನೀವು ಕೃಷಿ ಜಮೀನು ಹೊಂದಿದ್ದು ಯೋಜನೆಗೆ ನೊಂದಾಯಿಸದಿದ್ದರೆ ಈಗಲೂ ಅವಕಾಶ ಇದೆ. ಪಿಎಂ ಕಿಸಾನ್ ಯೋಜನೆಯ ವೆಬ್​ಸೈಟ್​ ಮುಖಾಂತರ ನೊಂದಾಯಿಸಬಹುದು. ಅಥವಾ ನಿಮ್ಮ ಗ್ರಾಮ ಸಮೀಪದ ರೈತ ಕೇಂದ್ರಗಳಿಗೆ ಹೋಗಿಯೂ ಆ ಕೆಲಸ ಮಾಡಬಹುದು. ಪಿಎಂ ಕಿಸಾನ್ ಯೋಜನೆ ವೆಬ್​ಸೈಟ್ ಮೂಲಕ ರಿಜಿಸ್ಟರ್ ಮಾಡುವ ಕ್ರಮ ಇಲ್ಲಿದೆ:

  • ಪಿಎಂ ಕಿಸಾನ್ ಯೋಜನೆ ವೆಬ್​ಸೈಟ್​ ವಿಳಾಸ: pmkisan.gov.in/
  • ಮುಖ್ಯಪುಟದಲ್ಲಿ ಕೆಳಗೆ ತುಸು ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ನೋಡಬಹುದು.
  • ಅಲ್ಲಿ ‘ನ್ಯೂ ಫಾರ್ಮರ್ ರಿಜಿಸ್ಟ್ರೇಶನ್’ ಅನ್ನು ಕ್ಲಿಕ್ ಮಾಡಿ.
  • ಇಲ್ಲಿ ನಿಮ್ಮ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು. ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ನಂತರ ಒಟಿಪಿ ಪಡೆದು ಮುಂದುವರಿಯಿರಿ.
  • ಇಲ್ಲಿ ನೀವು ಯೋಜನೆಗೆ ನೊಂದಾಯಿಸಿಕೊಳ್ಳಬಹುದು. ನಿಮ್ಮ ಹೆಸರು, ಭೂಮಿಯ ವಿವರ, ಪಹಣಿಯ ಪ್ರತಿ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು. ನಂತರ ಸೇವ್ ಕ್ಲಿಕ್ ಮಾಡಿರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ