ಬೆಂಗಳೂರು: ಹೂಡಿಕೆದಾರರ ಸಮಾವೇಶದಲ್ಲಿ (Invest Karnataka 2022) ಭಾಗಿಯಾದ ವಿಶ್ವದ ಎಲ್ಲ ಮೂಲೆ ಮೂಲೆಗಳಿಂದ ಬಂದಿರುವ ಹೂಡಿಕೆದಾರರಿಗೂ ಆತ್ಮೀಯ ಸ್ವಾಗತ. ಇದು (ಕರ್ನಾಟಕ) ಸಂಪ್ರದಾಯ ಮತ್ತು ತಂತ್ರಜ್ಞಾನ ಒಳಗೊಂಡ ಪ್ರದೇಶ. ಇದು ಪ್ರಕೃತಿ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮವಿರುವ ಸ್ಥಳವಾಗಿದೆ. ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಯೋಚನೆ ಮಾಡಿದರೆ ನಮ್ಮ ಮನಸಿನಲ್ಲಿ ಬರುವ ಮೊದಲ ಚಿತ್ರಣ ಬೆಂಗಳೂರಿನದ್ದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಬೆಂಗಳೂರು (Bengaluru) ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ 2022’ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತು, ಲೈವ್ ಇಲ್ಲಿ ವೀಕ್ಷಿಸಿ
ವೆಲ್ಕಂ ಟು ನಮ್ಮ ಬೆಂಗಳೂರು
ವಿಶ್ವದ ಎಲ್ಲ ಮೂಲೆ ಮೂಲೆಗಳಿಂದ ಬಂದಿರುವ ಹೂಡಿಕೆದಾರರೇ ‘ವೆಲ್ಕಂ ಟು ಇಂಡಿಯಾ, ವೆಲ್ಕಂ ಟು ನಮ್ಮ ಕರ್ನಾಟಕ, ವೆಲ್ಕಂ ಟು ನಮ್ಮ ಬೆಂಗಳೂರು. ನಿನ್ನೆಯಷ್ಟೇ ಕರ್ನಾಟಕದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಎಲ್ಲ ಕನ್ನಡಿಗರಿಗೂ ನನ್ನ ಅಭಿನಂದನೆಗಳು ಎಂದು ಮೋದಿ ಮಾತು ಆರಂಭಿಸಿದರು.
ಇದನ್ನೂ ಓದಿ: Invest Karnataka: ₹7 ಲಕ್ಷ ಕೋಟಿ ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ: ಸಿಎಂ ಬೊಮ್ಮಾಯಿ
ದೇಶದ ಅರ್ಥ ವ್ಯವಸ್ಥೆ ಈಗ ಉತ್ತಮವಾಗಿ ಸುಧಾರಣೆಯಾಗುತ್ತಿದೆ. ಅರ್ಥ ವ್ಯವಸ್ಥೆಯ ಸುಧಾರಣೆಗಾಗಿ ಸರ್ಕಾರವೂ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪರಿಣಾಮವಾಗಿ ಭಾರತದ ಶಕ್ತಿ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಕೋವಿಡೋತ್ತರ ಕಾಲಘಟ್ಟದಲ್ಲಿ ಭಾರತದ ಆರ್ಥಿಕತೆ ಮುಂಚೂಣಿಯಲ್ಲಿದೆ. ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆಯೂ ಸಾಕಷ್ಟಿದೆ ಎಂದು ಮೋದಿ ಹೇಳಿದರು. ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಸಾಕಷ್ಟು ಶ್ರಮಿಸಲಾಗಿದೆ. ಕಾರ್ಪೊರೇಟ್ ತೆರಿಗೆ ಕಡಿತಕ್ಕೂ ಕ್ರಮ ಕೈಗೊಳ್ಳಲಾಗಿದೆ. ಪರಿಣಾಮವಾಗಿ ಉತ್ಪಾದನೆ ಕ್ಷೇತ್ರದಲ್ಲಿ ದೇಶವು ಶೀಘ್ರ ಬೆಳವಣಿಗೆ ಸಾಧಿಸುತ್ತಿದೆ. ಮುಖ್ಯವಾಗಿ ಇದು ಜಾಗತಿಕ ಬಿಕ್ಕಟ್ಟಿನ ಸಂದರ್ಭವಾಗಿದೆ. ವಿಶ್ವದಾದ್ಯಂತ ಎಲ್ಲ ಅರ್ಥಶಾಸ್ತ್ರಜ್ಞರು, ತಜ್ಞತರು ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ಹೇಳುತ್ತಿದ್ದಾರೆ. ಆರ್ಥಿಕತೆಯನ್ನು ಸಶಕ್ತಗೊಳಿಸಲು ಬೇಕಾದ ಎಲ್ಲ ಮೂಲಭೂತ ಕೆಲಸಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ. ಸಹಿ ಮಾಡಲಾದ ಮುಕ್ತ ವ್ಯಾಪಾರ ಒಪ್ಪಂದಗಳು ನಮ್ಮ ಸನ್ನದ್ಧತೆಯ ಒಂದು ನೋಟವನ್ನು ಜಗತ್ತಿಗೆ ನೀಡುತ್ತಿವೆ ಎಂದು ಪ್ರಧಾನಿ ಹೇಳಿದರು.
‘ಹೂಡಿಕೆದಾರರನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದ್ದೇವೆ’
ನಾವು ನಮ್ಮ ಹೂಡಿಕೆದಾರರನ್ನು ರೆಡ್ ಟ್ಯಾಪಿಸಂನಿಂದ ಮುಕ್ತಗೊಳಿಸಿದ್ದೇವೆ ಮತ್ತು ಅವರಿಗೆ ಅವಕಾಶಗಳ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದ್ದೇವೆ. ಅನೇಕ ಕ್ಷೇತ್ರಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡಿದ್ದೇವೆ. ಈ ಹಿಂದೆ ಖಾಸಗಿ ಕ್ಷೇತ್ರದವರಿಗೆ ಹೂಡಿಕೆಗೆ ಅವಕಾಶವೇ ಇರದಿದ್ದ ರಕ್ಷಣೆ, ಡ್ರೋನ್, ಬಾಹ್ಯಾಕಾಶ, ಜಿಯೋಸ್ಪೇಷಿಯಲ್ ಮ್ಯಾಪಿಂಗ್ನಂಥ ಕ್ಷೇತ್ರಗಳಲ್ಲೂ ಹೂಡಿಕೆಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ಮೋದಿ ಹೇಳಿದರು.
ಭಾರತದ ಅಭಿವೃದ್ಧಿಯ ವೇಗವೀಗ ಮೊದಲಿಗಿಂತ ಹೆಚ್ಚಾಗಿದೆ. ಭಾರತದ ಯುವ ಸಮೂಹದ ಪ್ರತಿಭೆ ನೋಡಿ ಜಗತ್ತೇ ಅಚ್ಚರಿ ಪಟ್ಟಿದೆ. ದೇಶದಲ್ಲಿ ಎಂಟು ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ಗಳ ಸ್ಥಾಪನೆಯಾಗಿದೆ. ಸ್ಟಾರ್ಟಪ್ ಉದ್ಯಮ ವೇಗವಾಗಿ ಅಭಿವೃದ್ಧಿ ಆಗುತ್ತಿದೆ. ಕೃಷಿ ವಲಯದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ. ತಂತ್ರಜ್ಞಾನ ವಿವಿಗಳು, ಮ್ಯಾನೇಜ್‌ಮೆಂಟ್ ವಿವಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಮ್ಮ ಉದ್ದೇಶ ಆರ್ಥಿಕತೆ, ಉತ್ಪಾದನೆ ಹೆಚ್ಚಿಸುವುದು ಮತ್ತು ಮಾನವ ಸಂಪನ್ಮೂಲದ ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗಿದೆ. ನಮ್ಮ ದೇಶ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳ ನಿರ್ಮಾಣ ಮತ್ತು ಸೇವೆಗಳಲ್ಲಿ ಮುಂದಿದೆ. ಸ್ವಚ್ಚತಾ ಅಭಿಯಾನದಲ್ಲೂ ಮುಂದಿದ್ದೇವೆ. ಸ್ಮಾರ್ಟ್ ಶಾಲೆಗಳನ್ನೂ ತೆರೆಯಲಾಗುತ್ತಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಕ್ರಾಂತಿ ನಡೆಯುತ್ತಿದೆ ಎಂದು ಮೋದಿ ಹೇಳಿದರು.
‘ಇದು ಭಾರತದ ಅಮೃತ ಕಾಲ’
ಇದು ಭಾರತದ ಪಾಲಿಗೆ ಅಮೃತ ಕಾಲವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ‘ನವ ಭಾರತದ’ ಹೊಸ್ತಿಲಲ್ಲಿದ್ದೇವೆ. ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಯುಕವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
ನಮ್ಮ ಕಾನೂನುಗಳನ್ನು ಉದ್ಯಮ ಸ್ನೇಹಿ ಮಾಡಬೇಕಿದೆ. ನವ ಭಾರತದ ನಿರ್ಮಾಣದ ಅಗತ್ಯ ಇದೆ. ಬ್ಯಾಂಕಿಂಗ್ ಸೇರಿ ಹಲವು ವಲಯಗಳಲ್ಲಿ ಸುಧಾರಣೆ ಆಗುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಕರೆನ್ಸಿ ತರಲಾಗುತ್ತಿದೆ. ಹಳೆಯ ಹಲವು ಕಾನೂನುಗಳನ್ನು ರದ್ದು ಮಾಡಲಾಗಿದೆ. ಕಾರ್ಪೊರೇಟ್ ತೆರಿಗೆ ಇಳಿಸಿದ್ದೇವೆ. ಎಫ್ ಡಿಐ ಹೂಡಿಕೆಗೆ ಹೊಸ ಅವಕಾಶಗಳನ್ನು ತೆರೆಯಲಾಗಿದೆ
ರಕ್ಷಣಾ ವಲಯದಲ್ಲೂ ಎಫ್ ಡಿಐಗೆ ಅವಕಾಶ ಕೊಡಲಾಗಿದೆ ಎಂದು ಅವರು ಹೇಳಿದರು.
ಡಬಲ್ ಎಂಜಿನ್ ಸರ್ಕಾರದಿಂದ ಉತ್ತಮ ಸಾಧನೆ; ಮೋದಿ ಬಣ್ಣನೆ
ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ರಾಜ್ಯವಾಗಿದೆ. ಈ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಉತ್ತಮವಾಗಿ ಸಾಥ್ ನೀಡುತ್ತಿದೆ ಎಂದು ಮೋದಿ ಹೇಳಿದರು. ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಹೊಸ ಪಥದಲ್ಲಿ ಹೆಜ್ಜೆ ಹಾಕುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕದಷ್ಟು ಮುಂಚೂಣಿಯಲ್ಲಿ ಸಾಗುತ್ತಿರುವ ಬೇರೆ ರಾಜ್ಯವಿಲ್ಲ.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ದೆಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 am, Wed, 2 November 22