ನಿವೃತ್ತಿ ಬದುಕಿಗೆ ಪೆನ್ಷನ್ ವ್ಯವಸ್ಥೆ ಮಾಡಿಕೊಳ್ಳುವುದು ಆಯಾ ವ್ಯಕ್ತಿಗಳ ವಯಕ್ತಿಕ ಜವಾಬ್ದಾರಿ ಆಗಿಬಿಟ್ಟಿದೆ. ಒಂದು ವೇಳೆ ಅದಕ್ಕೆ ಸರಿಯಾದ ಯೋಜನೆ ರೂಪಿಸಿ, ಸಿದ್ಧತೆ ಮಾಡಿಕೊಳ್ಳದಿದ್ದಲ್ಲಿ ವಯಸ್ಸಾದ ಮೇಲೆ ಪಾಡು ಪಡಬೇಕಾಗುತ್ತದೆ. ಈ ಅವಸ್ಥೆಯನ್ನು ಪಡಬಾರದು ಅನ್ನೋ ಕಾರಣಕ್ಕೆ ಹಲವರು ವಿವಿಧ ಸ್ಕೀಮ್ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದು ಖಾಸಗಿಯದ್ದಾಗಿರಬಹುದು ಅಥವಾ ಸರ್ಕಾರದ್ದಾಗಿರಬಹುದು; ವಯಸ್ಸಾದ ಕಾಲಕ್ಕೆ ಅಥವಾ ನಿವೃತ್ತ ಬದುಕಿಗೆ ಗೌರವಯುತವಾದ ಜೀವನ ನಡೆಸುವುದಕ್ಕೆ ಬೇಕಾದಷ್ಟು ಹಣ ಬರಬೇಕು ಎಂಬ ಉದ್ದೇಶ ಇಟ್ಟುಕೊಂಡು ಹೂಡಿಕೆ ಮಾಡುತ್ತಾರೆ. ಅಂಥದ್ದೇ ಒಂದು ಪೆನ್ಷನ್ ಸ್ಕೀಮ್ ಪ್ರಧಾನ್ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನಾ (Pradhan Mantri Shramyogi Maandhan Yojana- PMSMY). ಈ ಯೋಜನೆ ಅಡಿಯಲ್ಲಿ ತಿಂಗಳಿಗೆ 3000 ರೂಪಾಯಿ ಪಿಂಚಣಿ ಬರುತ್ತದೆ.
ಅಂದಹಾಗೆ, ಹೀಗೆ 3000 ರೂಪಾಯಿ ಪಿಂಚಣಿ ಬರುವುದಕ್ಕೆ ದಿನದ ಲೆಕ್ಕಕ್ಕೆ ಹೇಳುವುದಾದರೆ ನೀವು ಉಳಿಸಬೇಕಾದದ್ದು 1.80 ರೂಪಾಯಿ ಮಾತ್ರ. ಅಂದರೆ 1 ರೂಪಾಯಿ 80 ಪೈಸೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂಥವರಿಗೆ ಇದರಿಂದ ಬಹಳ ಅನುಕೂಲ ಆಗುತ್ತದೆ. ಮನೆಗೆಲಸ ಮಾಡುವವರು, ದರ್ಜಿಗಳು, ಚಪ್ಪಲಿ ಹೊಲಿಯುವಂಥವರು, ಮಡಿವಾಳರು, ರಿಕ್ಷಾ ಎಳೆಯುವವರು, ಕಾರ್ಮಿಕರಿಗೆ ಇದರಿಂದ ಅನುಕೂಲ ಆಗುತ್ತದೆ. ಸರ್ಕಾರದ ದತ್ತಾಂಶದ ಪ್ರಕಾರ, ದೇಶದಲ್ಲಿ 40 ಕೋಟಿಯಷ್ಟು ಮಂದಿ ಅಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಒಂದು ವೇಳೆ ನಿಮ್ಮ ಆದಾಯ 15 ಸಾವಿರ ರೂಪಾಯಿಗಿಂತ ಕಡಿಮೆ ಇದ್ದು, 40 ವರ್ಷದೊಳಗೆ ವಯಸ್ಸಿದ್ದರೆ ಪ್ರತಿ ತಿಂಗಳು 3000 ರೂಪಾಯಿ ತನಕ ಪೆನ್ಷನ್ ಬರುತ್ತದೆ.
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಯೋಜನೆಯನ್ನು ಆರಂಭಿಸಿತು. ಮುಂದಿನ 5 ವರ್ಷದಲ್ಲಿ ಕನಿಷ್ಠ 10 ಕೋಟಿ ಕಾರ್ಮಿಕರಿಗೆ ಇದರಿಂದ ಅನುಕೂಲ ಆಗಬೇಕು ಎಂಬ ಉದ್ದೇಶಕ್ಕೆ ಶುರು ಮಾಡಲಾಯಿತು. ನೆನಪಿರಲಿ, ಈ ಯೋಜನೆಗೆ ಸರ್ಕಾರದ್ದೇ ಬೆಂಬಲ ಇದೆ. ಆದ್ದರಿಂದ ಸುರಕ್ಷತೆ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ಯಾರು ಸಂಘಟಿತ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅಂಥವರಿಗಾಗಿ ಇರುವ ಇಪಿಎಫ್ಒ, ಎನ್ಪಿಎಸ್ ಅನುಕೂಲ ಪಡೆಯುತ್ತಿದ್ದಲ್ಲಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿದ್ದಲ್ಲಿ ಈ ಪೆನ್ಷನ್ ಸ್ಕೀಮ್ ದೊರೆಯುವುದಿಲ್ಲ.
ಇನ್ನು ಈ ಯೋಜನೆಗೆ ಕಟ್ಟಬೇಕಾದ ಮೊತ್ತದ ವಿಚಾರಕ್ಕೆ ಬಂದರೆ, ಒಂದೊಂದು ವಯಸ್ಸಿನವರಿಗೆ ಒಂದೊಂದು ಬರುತ್ತದೆ. ಒಂದು ವೇಳೆ ಅರ್ಜಿದಾರರ ವಯಸ್ಸು 18 ವರ್ಷ ಆಗಿದ್ದಲ್ಲಿ ತಿಂಗಳಿಗೆ 55 ರೂಪಾಯಿ, 29 ವರ್ಷವಾದಲ್ಲಿ ತಿಂಗಳಿಗೆ 100 ರೂಪಾಯಿ ಹಾಗೂ 40 ವರ್ಷವಾದಲ್ಲಿ ಪ್ರತಿ ತಿಂಗಳು 200 ರೂಪಾಯಿ ಬರುತ್ತದೆ. ಒಂದು ವೇಳೆ ಫಲಾನುಭವಿಯು ಪೆನ್ಷನ್ ಪಡೆಯುವುದಕ್ಕೆ ಆರಂಭವಾಗುವ ಮುಂಚೆಯೇ ಮೃತಪಟ್ಟಲ್ಲಿ ಮೃತರ ಸಂಗಾತಿಗೆ ಶೇ 50ರಷ್ಟು ಪಿಂಚಣಿ ಸಿಗುತ್ತದೆ.
ಅಗತ್ಯ ದಾಖಲಾತಿಗಳು
ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಅಡಿಯಲ್ಲಿ ಖಾತೆ ತೆರೆಯುವುದಕ್ಕೆ ಈ ಮೂರು ಮುಖ್ಯ ದಾಖಲಾತಿಗಳು ಅತ್ಯಗತ್ಯ.
1. ಐಎಫ್ಎಸ್ಸಿ ಕೋಡ್ ಹಾಗೂ ಜತೆಗೆ ಸೇವಿಂಗ್ಸ್ ಅಥವಾ ಜನ್ಧನ್ ಖಾತೆ
2. ಆಧಾರ್ ಕಾರ್ಡ್
3. ಮೊಬೈಲ್ ಸಂಖ್ಯೆ
ಇದನ್ನೂ ಓದಿ: Atal Pension Yojana: ಅಟಲ್ ಪೆನ್ಷನ್ ಯೋಜನೆ ಮೂಲಕ ಗಂಡ- ಹೆಂಡತಿಗೆ ಸಿಗಲಿದೆ 10,000 ರೂ. ತನಕ ತಿಂಗಳ ಪಿಂಚಣಿ
ಇದನ್ನೂ ಓದಿ: PM Pension Yojana: ಪಿಎಂ ಪೆನ್ಷನ್ ಯೋಜನೆಯಲ್ಲಿ ಹಣ ತೊಡಗಿಸಿ ತಿಂಗಳಿಗೆ 9250 ರೂಪಾಯಿ ಪಡೆಯುವುದು ಹೇಗೆ?
(PMSMY Invest Rs 2 Per Day And Get Rs 3000 Per Month Monthly Pension Under This Central Government)
Published On - 12:01 pm, Wed, 4 August 21