ನವದೆಹಲಿ: ಒಂದೂವರೆ ತಿಂಗಳ ಹಿಂದೆ ಮಂಡಿಸಲಾದ ಕೇಂದ್ರ ಬಜೆಟ್ (Union Budget 2023) ಬಗ್ಗೆ ಅರ್ಧಕ್ಕಿಂತ ಹೆಚ್ಚು ಜನರು ಈಗಲೂ ಅಭಿಮಾನ ಇಟ್ಟುಕೊಂಡಿದ್ದಾರೆ. ಇಪ್ಸೋಸ್ ಇಂಡಿಯಾಬಸ್ ದೇಶಾದ್ಯಂತ ನಡೆಸಿದ ಬಜೆಟೋತ್ತರ ಸಮೀಕ್ಷೆಯಲ್ಲಿ (Post Budget Survey) ಶೇ. 54ರಷ್ಟು ಜನರು 2023-24ನೇ ಸಾಲಿನ ಬಜೆಟ್ ಬಗ್ಗೆ ಸಂತುಷ್ಟಿ ಹೊಂದಿರುವುದು ತಿಳಿದುಬಂದಿದೆ. ಅದರಲ್ಲೂ ಪಶ್ಚಿಮ ಭಾರತೀಯ ಪ್ರದೇಶಗಳಲ್ಲಿ ಶೇ. 70ರಷ್ಟು ಮಂದಿಗೆ ಈ ಬಾರಿಯ ಬಜೆಟ್ ಇಷ್ಟವಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಮಾರ್ಕೆಟ್ ರಿಸರ್ಚ್ ಕಂಪನಿಯಾದ ಇಪ್ಸೋಸ್ (Market Research Company Ipsos) ಭಾರತದ ನಾಲ್ಕು ವಲಯದ ವಿವಿಧ ಸ್ತರಗಳ ನಗರಗಳಲ್ಲಿ ವೈಜ್ಞಾನಿಕವಾಗಿ ಆಯ್ಕೆ ಮಾಡಲಾದ 2 ಸಾವಿರಕ್ಕೂ ಹೆಚ್ಚು ಜನರ ಬಳಿ ಫೆಬ್ರುವರಿ 17ರಿಂದ ಮಾರ್ಚ್ 3ರವರೆಗಿನ ಅವಧಿಯಲ್ಲಿ ಈ ಸಮೀಕ್ಷೆ ನಡೆಸಿತ್ತು. ಬಜೆಟ್ನ ಎಲ್ಲಾ ಅಂಶಗಳು ಹಾಗೂ ನಾಗರಿಕರಿಗೆ ಅದರ ಉಪಯುಕ್ತತೆ ಎಷ್ಟಿದೆ ಎನ್ನುವ ಸಂಪೂರ್ಣ ಸಮೀಕ್ಷೆ ಕೈಗೊಳ್ಳಲಾಗಿದೆ. ಆನ್ಲೈನ್ ಮತ್ತು ಮೌಖಿಕ ಎರಡೂ ವಿಧಾನಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಇದು ಶೇ. 75ರಷ್ಟು ನಿಖರವಾಗಿದೆ ಎಂಬುದು ಇಪ್ಸೋಸ್ ಪ್ರತಿಪಾದನೆ.
ಸಮೀಕ್ಷೆಗೆ ಒಳಗಾದವರ ಪೈಕಿ ಪಶ್ಚಿಮ ಭಾರತೀಯರಲ್ಲಿ ಶೇ. 70ರಷ್ಟು ಮಂದಿ ಬಜೆಟ್ಗೆ ಸಕಾರಾತ್ಮಕ ಅಭಿಪ್ರಾಯ ತೋರಿದ್ದಾರೆ. ಶೇ. 59ರಷ್ಟು ಉತ್ತರಭಾರತೀಯರು, ಶೇ. 44ರಷ್ಟು ದಕ್ಷಿಣ ಭಾರತೀಯರು ಮತ್ತು ಶೇ. 35ರಷ್ಟು ಪೂರ್ವ ಭಾಗದವರು ಬಜೆಟ್ಗೆ ಬೆಂಬಲ ಕೊಟ್ಟಿದ್ದಾರೆ. ಒಟ್ಟಾರೆ ಶೇ. 54 ಮಂದಿ ಖುಷಿಯಿಂದಿದ್ದಾರೆ. ಶೇ. 20 ಮಂದಿ ಈ ಬಜೆಟ್ ಅನ್ನು ಕಳಪೆ ಎಂದು ಬಣ್ಣಿಸಿದ್ದಾರೆ. ಶೇ. 12 ಮಂದಿಗೆ ಅನಿಶ್ಚಿತರಾದರೆ ಶೇ. 14ರಷ್ಟು ಜನರಿಗೆ ಬಜೆಟ್ ಸಮಾಧಾನ ತಂದಿಲ್ಲ ಎಂಬುದು ಈ ಸಮೀಕ್ಷೆ ಹೇಳುತ್ತದೆ.
ನಿರುದ್ಯೋಗಿಗಳಿಗಿಂತ ಸ್ವಂತ ಉದ್ಯೋಗದವರು ಬಜೆಟ್ ಬಗ್ಗೆ ಹ್ಯಾಪಿ ಆಗಿದ್ದಾರೆ. ಉನ್ನತ ಶಿಕ್ಷಣ ಪಡೆದ ವರ್ಗದವರು ಮತ್ತು ಉನ್ನತ ಆರ್ಥಿಕತೆಯ ಜನರಿಗೆ ಬಜೆಟ್ ಹೆಚ್ಚು ಇಷ್ಟವಾಗಿದೆ.
ದೇಶದ ಎಲ್ಲಾ ಸ್ತರಗಳ ನಗರಗಳು, ವರ್ಗಗಳ ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಲೋಕಸಭಾ ಚುನಾವಣೆಗಳು ಸಮೀಪದಲ್ಲೇ ಇರುವುದರಿಂದ ಈ ಸಮೀಕ್ಷೆ ಕೇಂದ್ರ ಸರ್ಕಾರದ ಬಗ್ಗೆ ಜನರ ಅಭಿಪ್ರಾಯಕ್ಕೆ ಕನ್ನಡಿಯಂತೆಯೂ ಆಗಿರಬಹುದು.
ಫ್ರಾನ್ಸ್ ಮೂಲದ ಇಪ್ಸೋಸ್ ಸಂಸ್ಥೆ ವಿಶ್ವದ ಮೂರನೇ ಅತಿದೊಡ್ಡ ಮಾರ್ಕೆಟ್ ರಿಸರ್ಚ್ ಕಂಪನಿಯಾಗಿದೆ. 90 ದೇಶಗಳಲ್ಲಿ ಇದರ ಉಪಸ್ಥಿತಿ ಇದ್ದು 19,000 ಉದ್ಯೋಗಿಗಳನ್ನು ಹೊಂದಿದೆ.
ಇನ್ನು, ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಾದ ಆಯವ್ಯಯ ಪತ್ರವನ್ನು ಮೊದಲ ಅಮೃತಕಾಲ ಬಜೆಟ್ ಎಂದು ಕರೆಯಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ್ದರಿಂದ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸಲಾಗುತ್ತಿದೆ. ಈ ಮುಂದಿನ 25 ವರ್ಷವನ್ನು ಅಮೃತಕಾಲ ಎಂದು ಪರಿಗಣಿಸಲಾಗಿದೆ. ಈ ಅಮೃತಕಾದಲ್ಲಿ ಮಂಡಿಸಲಾದ ಮೊದಲ ಬಜೆಟ್ ಇದಾಗಿದೆ.
Published On - 5:08 pm, Fri, 17 March 23