Textile Park: ಕಲಬುರ್ಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಸ್ಥಾಪನೆ: ಪ್ರಧಾನಿ ಮೋದಿ ಘೋಷಣೆ
PM Mitra Mega Textile Parks: ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಪಿಎಂ ಮಿತ್ರಾ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳು ಸ್ಥಾಪನೆ ಆಗಲಿವೆ ಎಂದು ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ
ನವದೆಹಲಿ: ದೇಶದಲ್ಲಿ ಜವಳಿ ಉದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧೆಡೆ 7 ಬೃಹತ್ ಜವಳಿ ಪಾರ್ಕ್ಗಳನ್ನು (PM Mitra Mega Textile Park) ಸ್ಥಾಪಿಸುತ್ತಿದೆ. ಇದರ ಒಂದು ಪಾರ್ಕ್ ಕರ್ನಾಟಕಕ್ಕೆ ಸಿಕ್ಕಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳು ಸ್ಥಾಪನೆ ಆಗಲಿವೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17, ಶುಕ್ರವಾರ ಜವಳಿ ಪಾರ್ಕ್ ಸ್ಥಾಪನೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಈ 7 ಮಹಾ ಜವಳಿ ಕೇಂದ್ರಗಳು ತಲೆ ಎತ್ತಲಿವೆ. 5ಎಫ್ (ಫಾರ್ಮ್, ಫೈಬರ್, ಫ್ಯಾಕ್ಟರಿ, ಫ್ಯಾಷನ್, ಫಾರೀನ್) ದೃಷ್ಟಿಕೋನದಲ್ಲಿ ಈ ಪಾರ್ಕ್ಗಳಿಂದ ಜವಳಿ ಉದ್ಯಮಕ್ಕೆ ಪುಷ್ಟಿ ಸಿಗಲಿದೆ. ಕರ್ನಾಟಕದಲ್ಲಿ ಕಲಬುರ್ಗಿಗೆ ಜವಳಿ ಪಾರ್ಕ್ ಸ್ಥಾಪನೆಯ ಅವಕಾಶ ಸಿಕ್ಕಿದೆ.
ಪಿಎಂ ಮಿತ್ರಾ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳು ಜವಳಿ ವಲಯಕ್ಕೆ ಬೇಕಾದ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುತ್ತವೆ. ಕೋಟಿಗಟ್ಟಲೆ ಬಂಡವಾಳ ಹರಿದುಬರುವಂತೆ ಮಾಡುತ್ತದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಗುರಿ ಸಾಧನೆಗೆ ಇದು ಒಳ್ಳೆಯ ನಿದರ್ಶನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
The PM MITRA mega textile parks will provide state-of-the-art infrastructure for the textiles sector, attracts investment of crores and create lakhs of jobs. It will be a great example of ‘Make in India’ and ‘Make For the World.’ #PragatiKaPMMitra
— Narendra Modi (@narendramodi) March 17, 2023
ಪಿಎಂ ಮಿತ್ರಾ ಟೆಕ್ಸ್ಟೈಲ್ ಪಾರ್ಕ್ನ 5ಎಫ್ ವಿಶನ್ ಏನದು?
ಪ್ರಧಾನಿ ನರೇಂದ್ರ ಮೋದಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳಿಂದ ಜವಳಿ ಉದ್ಯಮಕ್ಕೆ ಪುಷ್ಟಿ ಸಿಗಲಿದೆ ಎಂದು ಹೇಳುತ್ತಾ 5ಎಫ್ ಆಯಾಮದ ಬಗ್ಗೆ ಮಾಹಿತಿ ನೀಡಿದರು. ಫಾರ್ಮ್ನಿಂದ ಫೈಬರ್, ಫೈಬರ್ನಿಂದ ಫ್ಯಾಕ್ಟರಿ, ಫ್ಯಾಕ್ಟರಿಯಿಂದ ಫ್ಯಾಷನ್ ವಲಯ, ಫ್ಯಾಷನ್ ಉಡುಪುಗಳು ವಿದೇಶಕ್ಕೆ ರವಾನೆ ಇದು ಈ 5ಎಫ್ ದೃಷ್ಟಿಕೋನ.
ಇದನ್ನೂ ಓದಿ: Truecaller Office: ಬೆಂಗಳೂರಿಗೆ ಮತ್ತೊಂದು ದೊಡ್ಡ ಕಂಪನಿ; ಉದ್ಯಾನನಗರಿಯಲ್ಲಿ ಟ್ರ್ಯೂಕಾಲರ್ನ ವಿಶಾಲ ಕಚೇರಿ ಉದ್ಘಾಟನೆ
ದೇಶಾದ್ಯಂತ ಏಳು ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಅಂಡ್ ಅಪ್ಪಾರಲ್ ಪಾರ್ಕ್ಗಳನ್ನು ನಿರ್ಮಿಸಲು ಕೇಂದ್ರ ಜವಳಿ ಸಚಿವಾಲಯ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಈ ಯೋಜನೆಗೆ 4,450 ಕೋಟಿ ರೂ ಔಟ್ಲೇ ನೀಡಲಾಗಿದೆ.
ಪಿಎಂ ಮಿತ್ರಾ ಜವಳಿ ಪಾರ್ಕ್ಗಳು ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ. ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣ ಜಾಗದಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಪಾರ್ಕ್ನಿಂದಲೂ 2ಲಕ್ಷದವರೆಗೆ ನೇರ ಉದ್ಯೋಗ ಸಿಗುವ ಸಾಧ್ಯತೆ ಇದೆ. ಒಂದು ಪಾರ್ಕ್ ಸ್ಥಾಪನೆಯಿಂದ ಆ ಸುತ್ತಲಿನ ಪ್ರದೇಶಗಳಲ್ಲಿ ಜವಳಿ ಉದ್ಯಮ ವಿಫುಲವಾಗಿ ಬೆಳೆಯುವ ಅವಕಾಶ ಇರಲಿದೆ. ಸ್ಪಿನ್ನಿಂಗ್, ನೇಯ್ಗೆಯಿಂದ ಹಿಡಿದು ಪ್ರಿಂಟಿಂಗ್ ಮತ್ತು ಉಡುಗೆ ತಯಾರಿಕೆಯವರೆಗೂ ಪ್ರತಿಯೊಂದು ವಿಭಾಗಗಳಿಗೆ ಉತ್ತೇಜನ ಸಿಕ್ಕು ಪ್ರಬಲ ಜವಳಿ ಸರಪಳಿ ರೂಪುಗೊಳ್ಳುವ ನಿರೀಕ್ಷೆ ಇದೆ.
ಕಲಬುರ್ಗಿಯ ಫಿರೋಜಾಬಾದ್ನಲ್ಲಿ ಜವಳಿ ಪಾರ್ಕ್
ದೇಶಾದ್ಯಂತ ಏಳು ಸ್ಥಳಗಳಲ್ಲಿ ಜವಳಿ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪ ಬಂದಾಗಲೇ ಕರ್ನಾಟಕದ ಕಲಬುರ್ಗಿಯಲ್ಲಿ ಒಂದು ಘಟಕ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ವಿಜಯಪುರ ಮತ್ತು ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡಿ ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಹಿಂದೆಯೇ ಶಿಫಾರಸು ಮಾಡಿತ್ತು. ಈಗ ಕಲಬುರ್ಗಿಗೆ ಜವಳಿ ಪಾರ್ಕ್ ಅವಕಾಶ ಸಿಕ್ಕಿದೆ. ಇಲ್ಲಿನ ಜನರ ಬಹುವರ್ಷದ ಕನಸು ಈಗ ಸಾಕಾರಗೊಂಡಿದೆ.
ಕಲಬುರ್ಗಿಯ ಫಿರೋಜಾಬಾದ್ನ ಹೊನ್ನಕಿರಣಗಿ ಎಂಬಲ್ಲಿ 1,000 ಎಕರೆ ಭೂಮಿಯನ್ನು ಜವಳಿ ಪಾರ್ಕ್ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಕೆಲ ತಿಂಗಳ ಹಿಂದೆ ಕೇಂದ್ರ ಅಧಿಕಾರಿಗಳ ತಂಡ ಇಲ್ಲಿ ಬಂದು ಭೂಮಿಯನ್ನು ಪರಿಶೀಲಿಸಿಕೊಂಡು ಹೋಗಿತ್ತು. ಅಂತಿಮವಾಗಿ ಕಲಬುರ್ಗಿಯ ನೇಕಾರರ ಕನಸು ನನಸಾಗಿದೆ. ಇಲ್ಲಿನ ಸುತ್ತಲಿನ ನೇಕಾರ ಕುಟುಂಬ ಮತ್ತು ಜವಳಿ ಉದ್ದಿಮೆಗಳಿಗೆ ಈ ಪಾರ್ಕ್ ಪುಷ್ಟಿ ತರುವ ಸಾಧ್ಯತೆ ಇದೆ.
ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Fri, 17 March 23