
ನವದೆಹಲಿ, ಜೂನ್ 29: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಇತ್ತೀಚೆಗೆ ನಡೆದ ಸ್ಪ್ರಿಂಗ್ ಸಮ್ಮರ್ 2026 ಫ್ಯಾಷನ್ ಶೋನಲ್ಲಿ ಕೆಲ ಪುರುಷ ಮಾಡಲ್ಗಳು ಕೊಲ್ಹಾಪುರಿ ಶೈಲಿಯ ಚಪ್ಪಲಿಗಳನ್ನು (Kolhapuri sandals) ಧರಿಸಿ ರ್ಯಾಂಪ್ ವಾಕ್ ಮಾಡಿದ್ದರು. ಪ್ಯಾರಿಸ್ನ ಪ್ರಾದ (Prada) ಎನ್ನುವ ಫ್ಯಾಷನ್ ಬ್ರ್ಯಾಂಡ್ ಆಯೋಜಿಸಿದ ಶೋ ಇವೆಂಟ್ ಆಗಿತ್ತು. ಕೊಲ್ಹಾಪುರಿ ಹೆಸರಿಗೆ ಅದು ಎಲ್ಲೂ ಕ್ರೆಡಿಟ್ ಕೊಟ್ಟಿರಲಿಲ್ಲ. ಇದಕ್ಕೆ ವ್ಯಾಪಕ ಟೀಕೆ ಕೇಳಿ ಬಂದ ಬೆನ್ನಲ್ಲೇ ಪ್ರಾದ ಸಂಸ್ಥೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಈ ಚಪ್ಪಲಿಗಳು ಭಾರತದ ಕೊಲ್ಹಾಪುರಿ ಚಪ್ಪಲಿಯಿಂದ ಪ್ರೇರಿತಗೊಂಡಂತಹವು ಎಂದು ಅದು ಹೇಳಿದೆ.
‘ಇತ್ತೀಚೆಗೆ ಆದ ಪ್ರಾದ ಪುರುಷರ ಫ್ಯಾಷನ್ ಶೋನಲ್ಲಿ ಪ್ರದರ್ಶಿತವಾದ ಚಪ್ಪಲಿಗಳು ಶತಮಾನಗಳಷ್ಟು ಹಳೆಯ ಪರಂಪರೆ ಇರುವ ಭಾರತೀಯ ಸಾಂಪ್ರದಾಯಿಕ ಪಾದರಕ್ಷೆಯಿಂದ ಸ್ಫೂರ್ತಿ ಪಡೆದಿವೆ. ಭಾರತದ ಕುಶಲಕಲೆಗಳ ಸಾಂಸ್ಕೃತಿಕ ಮಹತ್ವವನ್ನು ನಾವು ಗುರುತಿಸುತ್ತೇವೆ’ ಎಂದು ಪ್ರಾದ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೊಲ್ಹಾಪುರಿ ಚಪ್ಪಲಿ ತಯಾರಿಸುವವರಲ್ಲಿ ಬಹಳ ಮಂದಿ ಕರ್ನಾಟಕದವರು: ಸಚಿವ ಪ್ರಿಯಾಂಕ್ ಖರ್ಗೆ
ಕೊಲ್ಹಾಪುರಿ ಚಪ್ಪಲಿಯನ್ನು ಪ್ರಾದ ರೀಬ್ರ್ಯಾಂಡಿಂಗ್ ಮಾಡಿ 1.2 ಲಕ್ಷ ರೂಗೆ ಮಾರಾಟ ಮಾಡಲಿದೆ ಎನ್ನುವಂತಹ ಸುದ್ದಿ ಇದೆ. ಪ್ರಾದ ಈ ಸುದ್ದಿಯನ್ನು ತಳ್ಳಿಹಾಕಿದೆ.
ಫ್ಯಾಷನ್ ಶೋನದಲ್ಲಿ ಪ್ರದರ್ಶಿತವಾದ ಚಪ್ಪಲಿಗಳು ಇನ್ನೂ ವಿನ್ಯಾಸದ ಹಂತದಲ್ಲಿವೆ. ವೇದಿಕೆ ಮೇಲೆ ಮಾಡಲ್ಗಳು ಧರಿಸಿದ ಚಪ್ಪಲಿಗಳನ್ನು ಕಮರ್ಷಿಯಲ್ ಆಗಿ ಮಾರಲಿರುವುದು ಖಚಿತ ಆಗಿಲ್ಲ ಎಂದು ಪ್ರಾದ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Kolhapuri Chappal: ಕೊಲ್ಹಾಪುರಿ ಚಪ್ಪಲಿ ಹಾಕಿದ್ದೀರಾ? ವಿದೇಶೀ ಕಂಪನಿ ಕೈಗೆ ಸಿಕ್ಕ ಈ ಚಪ್ಪಲಿಯ ಹೊಸ ಬೆಲೆ ಕೇಳಿದ್ರೆ ಶಾಕ್
ಕೊಲ್ಹಾಪುರಿ ಚಪ್ಪಲಿಗೆ ಜಿಐ ಟ್ಯಾಗ್ ಹಕ್ಕು ಇದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಏಳೆಂದು ಜಿಲ್ಲೆಗಳಿಗೆ ಈ ಜಿಐ ಟ್ಯಾಗ್ ಇದೆ. ಮಹಾರಾಷ್ಟ್ರದ ಕೊಲ್ಹಾಪುರ, ಸೋಲಾಪುರ, ಸಾಂಗ್ಲಿ ಮೊದಲಾದ ಕೆಲ ಜಿಲ್ಲೆಗಳು, ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮೊದಲಾದ ಕೆಲ ಜಿಲ್ಲೆಗಳಲ್ಲಿನ ಚಮ್ಮಾರರಿಗೆ ವಿಶೇಷವಾಗಿ ಸಿದ್ಧಿಸಿರುವ ಮತ್ತು ಪರಂಪರಾಗತವಾಗಿ ಬೆಳೆಸಿಕೊಂಡು ಬಂದಿರುವ ಕಲಾ ಪ್ರಾಕಾರ ಇದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ