PTC India Financial: ಸ್ವತಂತ್ರ ನಿರ್ದೇಶಕರ ರಾಜೀನಾಮೆ ನಂತರ ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಷೇರು ಶೇ 20ರಷ್ಟು ಕುಸಿತ

| Updated By: Praveen Sahu

Updated on: Jan 20, 2022 | 10:58 PM

ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಷೇರು ಹತ್ತಿರ ಹತ್ತಿರ ಶೇ 20ರಷ್ಟು ಕುಸಿತ ಕಂಡಿದೆ. ಕಾರ್ಪೊರೇಟ್ ಆಡಳಿತದಲ್ಲಿನ ವೈಫಲ್ಯದ ಕಾರಣ ನೀಡಿ ಮೂವರು ಸ್ವತಂತ್ರ ನಿರ್ದೇಶಕರು ರಾಜೀನಾಮೆ ಕೊಟ್ಟ ಮೇಲೆ ಈ ಬೆಳವಣಿಗೆ ಆಗಿದೆ.

PTC India Financial: ಸ್ವತಂತ್ರ ನಿರ್ದೇಶಕರ ರಾಜೀನಾಮೆ ನಂತರ ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಷೇರು ಶೇ 20ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
Follow us on

ಪಿಟಿಸಿ ಇಂಡಿಯಾ ಫೈನಾನ್ಷಿಯಲ್ (PTC India Financial) ಕಂಪೆನಿಯ ಮೂವರು ಸ್ವತಂತ್ರ ನಿರ್ದೇಶಕರು ಕಾರ್ಪೊರೇಟ್ ಆಡಳಿತದಲ್ಲಿನ ವ್ಯತ್ಯಯದ ಕಾರಣಕ್ಕೆ ತಮ್ಮ ಹುದ್ದೆಯನ್ನು ತ್ಯಜಿಸಿದ ನಂತರದ ಒಂದು ದಿನಕ್ಕೆ ಅದರ ಷೇರುಗಳು ಭಾರೀ ಕುಸಿತ ಕಂಡವು. ಗುರುವಾರ ಬೆಳಗ್ಗೆ ಆರಂಭದ ವಹಿವಾಟಿನಲ್ಲಿ ಶೇಕಡಾ 20ರ ತನಕ ಬೆಲೆ ನೆಲ ಕಚ್ಚಿತು. ಈ ಕಂಪೆನಿಯ ಮಾತೃಸಂಸ್ಥೆಯಾದ ಪಿಟಿಸಿ ಇಂಡಿಯಾ (PTC India) ಷೇರು ಶೇಕಡಾ 6ರಷ್ಟು ಇಳಿಯಿತು. ಬೆಳಗ್ಗೆ 11ರ ಹೊತ್ತಿಗೆ ಪಿಟಿಸಿ ಇಂಡಿಯಾ ಷೇರು ಶೇ 6.29ರಷ್ಟು ಕುಸಿದು, ಪ್ರತಿ ಷೇರಿಗೆ 105.70ರಂತೆ ವಹಿವಾಟು ನಡೆಸಿತ್ತು. ಇನ್ನು ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಶೇ 17.45ರಷ್ಟು ಇಳಿಕೆ ಕಂಡು, ಪ್ರತಿ ಷೇರಿಗೆ 21.10 ರೂಪಾಯಿಯಂತೆ ವ್ಯವಹಾರ ಮಾಡಿತ್ತು. ಕಂಪೆನಿಯ ಹೂಡಿಕೆದಾರರ ಆತಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಲಾಗಿದ್ದು, ಆಡಳಿತ ಮಂಡಳಿ ಹಂತದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಅದಾದ ನಂತರ ಸೂಕ್ತ ಮಾಹಿತಿಯನ್ನು ಸಂಬಂಧ ಪಟ್ಟವರಿಗೆ ಅಪ್​ಡೇಟ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸ್ವತಂತ್ರ ನಿರ್ದೇಶಕರಾದ ಕಮಲೇಶ್ ವಿಕಮ್ಸೆ, ಥಾಮಸ್ ಮಾಥ್ಯೂ, ಸಂತೋಷ್ ನಾಯರ್ ಬುಧವಾರದಂದು ರಾಜೀನಾಮೆ ನೀಡಿದ್ದಾರೆ. ನಾವು ಪ್ರಮುಖವಾಗಿ ಗಮನ ಸೆಳೆದ ಕಾರ್ಪೊರೇಟ್ ಆಡಳಿತದ ಗಂಭೀರ ಸ್ವರೂಪದ ವ್ಯತ್ಯಯಗಳನ್ನು ಸರಿಪಡಿಸುವಲ್ಲಿ ಆಡಳಿತ ಮಂಡಳಿಯು ವಿಫಲವಾಗಿದೆ ಎಂಬ ಕಾರಣ ನೀಡಿ, ಪದತ್ಯಾಗ ಮಾಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ರತ್ನೇಶ್ ಅವರನ್ನು ಫೈನಾನ್ಸ್ ನಿರ್ದೇಶಕ ಮತ್ತು ಸಿಎಫ್​ಒ ಆಗಿ ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿ ಪ್ರೊಸೆಸ್​ ಮೂಲಕ ರತ್ನೇಶ್ ಆಯ್ಕೆಯಾದ ನಂತರವೂ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಮಾಹಿತಿ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಇನ್​ಸ್ಟಿಟ್ಯೂಷನ್ ಎಂದು ನೋಂದಣಿ ಆಗಿದೆ. ಇದರ ವ್ಯವಹಾರದಲ್ಲಿ ಈಕ್ವಿಟಿ ಮತ್ತು ಸಾಲಪತ್ರಗಳಿಗೆ ಹಣಕಾಸು ಸೌಲಭ್ಯ ಒದಗಿಸುವುದು ಒಳಗೊಂಡಿದೆ. ನಾಗಪಟ್ಣಂ ಪವರ್ ಅಂಡ್ ಇನ್​ಫ್ರಾಟೆಕ್​ಗೆ 124 ಕೋಟಿ ರೂ. ಮತ್ತು 150 ಕೋಟಿ ರೂ. ಸೇತುವೆ ಸಾಲವನ್ನು ವಿಸ್ತರಣೆ ಮಾಡಿರುವ ಬಗ್ಗೆ ಆಡಿಟ್ ವರದಿ ಫೈಲ್ ಮಾಡುವುದನ್ನು 2 ವರ್ಷ ತಡ ಮಾಡಿರುವ ಬಗ್ಗೆ ಕೂಡ ಸ್ವತಂತ್ರ ನಿರ್ದೇಶಕರು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕರು ಹೇಳಿರುವ ಪ್ರಕಾರ, ಇಬ್ಬರು ಸ್ವತಂತ್ರ ನಿರ್ದೇಶಕರ ಸಮಿತಿಯ ಸಲಹೆಯಂತೆ, ನಾಗಪಟ್ಣಂ ವಿಚಾರವನ್ನು ಶಂಕಿತ ವಂಚನೆ ಪ್ರಕರಣ ಎಂದು ಆರ್​ಬಿಐಗೆ ವರದಿ ಮಾಡುವಂತೆ ಸಲಹೆ ನೀಡಲಾಗಿತ್ತು. ಈ ವರದಿ ಸಿದ್ಧ ಆಗುವ ಹೊತ್ತಿಗೆ ಪಿಟಿಸಿ ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಶೇ 16.18ರಷ್ಟು ಇಳಿಕೆಯಾಗಿ, 21.50 ರೂಪಾಯಿಯಲ್ಲಿ ವಹಿವಾಟು ಆಗುತ್ತಿತ್ತು.

ಇದನ್ನೂ ಓದಿ: Sensex stocks: ಸತತ ಎರಡು ದಿನದಲ್ಲಿ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000 ಪಾಯಿಂಟ್ಸ್ ಇಳಿಕೆ

Published On - 1:13 pm, Thu, 20 January 22