ಗೋದಾವರಿ, ಜುಲೈ 18: ಭಾರತದ ಪೂರ್ವ ಕರಾವಳಿ ತೀರದ ಪ್ರದೇಶಗಳ ಜನರಿಗೆ ಅಚ್ಚುಮೆಚ್ಚಿನ ಮೀನೆಂದರೆ ಅದು ಇಲಿಸ್. ಬಹಳ ರುಚಿಕರವಾದ ಇಲಿಸ್ ಅನ್ನು ಮೀನುಗಳ ರಾಜ ಎಂದು ಕರೆಯುವುದುಂಟು. ಬಂಗಾಳಿಗಳಿಗಂತೂ ಇದು ಪ್ರಮುಖ ಆಹಾರ. ಆಂಧ್ರಪ್ರದೇಶದ ಗೋದಾವರಿ ಪ್ರದೇಶದ ಜನರಿಗೂ ಇದು ಅಚ್ಚುಮೆಚ್ಚು. ತೆಲುಗಿನಲ್ಲಿ ಇಲಿಸ್ ಮೀನನ್ನು ಪುಲಸ ಎಂದು ಕರೆಯುತ್ತಾರೆ. ಇತ್ತೀಚೆಗೆ ಗೋದಾವರಿಯ ಕುಟುಂಬವೊಂದಕ್ಕೆ 2 ಕಿಲೋ ತೂಕದ ಪುಲಸ ಮೀನು ಸಿಕ್ಕಿದ್ದು, ಇದು ಹರಾಜಿನಲ್ಲಿ ಬರೋಬ್ಬರಿ 13,000 ರುಪಾಯಿಗೆ ಮಾರಾಟವಾಗಿ ಹೊಸ ದಾಖಲೆ ಬರೆದಿದೆ.
ಗೋದಾವರಿ ನದಿಯಲ್ಲಿ ಪ್ರವಾಹ ಉಕ್ಕೇರಿ ಕೆಂಪು ನೀರು ಪ್ರವಹಿಸಿದಾಗ ಜನರಿಗೆ ಪುಲಸದ ನಿರೀಕ್ಷೆ ಶುರುವಾಗುತ್ತದೆ. ಸಾಮಾನ್ಯವಾಗಿ ಜುಲೈನಿಂದ ಸೆಪ್ಟಂಬರ್ ಅವಧಿಯಲ್ಲಿ ಗೋದಾವರಿ ನದಿ ಪ್ರವಾಹ ಎರಗಿದಾಗ ನೀರು ವಿವಿಧ ಖನಿಜಗಳ ಕಾರಣಕ್ಕೆ ಕೆಂಪಾಗಿರುತ್ತದೆ. ಆಂಧ್ರದಲ್ಲಿ ಪುಲಸ ಮೀನು ಸಿಗುವುದು ಗೋದಾವರಿ ನದಿಯ ಈ ಕೆಂಪು ನೀರಿನಿಂದಲೇ. ಇದರ ರುಚಿಯೂ ಅದ್ಬುತವಾದುದು. ಹೀಗಾಗಿ, ಪುಲಸ ಮೀನಿಗೆ ಆಂಧ್ರದಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಗೋದಾವರಿ ನದಿ ನೀರಿನಲ್ಲಿ ಈ ಸೀಸನ್ನ ಮೊದಲ ಪುಲಸ ಮೀನು ಪತ್ತೆಯಾಗಿದೆ.
ಇದನ್ನೂ ಓದಿ: Tomato: 2021ರಲ್ಲಿ ಟೊಮೆಟೋದಿಂದ 20 ಲಕ್ಷ ನಷ್ಟ ಮಾಡಿಕೊಂಡಿದ್ದ ರೈತನಿಗೆ ಈ ಬಾರಿ 3 ಕೋಟಿ ರೂ ಬಂಪರ್
ಯಾನಂನಲ್ಲಿರುವ ಗೋದಾವರಿ ನದಿಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಮೊಟ್ಟಮೊದಲ ಬಾರಿಗೆ 2 ಕೆ.ಜಿ. ತೂಕದ ಇಲಿಸ್ ಅಥವಾ ಪುಲಸ ಮೀನು ಸಿಕ್ಕಿದೆ. ಪಾರ್ವತಿ ಮತ್ತು ಸತ್ಯವತಿ ಎಂಬುವವರು ಹರಾಜಿನಲ್ಲಿ ಈ ಮೀನನ್ನು ಮಾರಿದರು. ಭೀಮಾವರದ ವ್ಯಕ್ತಿಯೊಬ್ಬರು ಹರಾಜಿನಲ್ಲಿ ಈ 2 ಕಿಲೋ ತೂಕದ ಪುಲಸನ ಮೀನನ್ನು ಬರೋಬ್ಬರಿ 15,000 ರುಪಾಯಿಗೆ ಖರೀದಿ ಮಾಡಿದರು.
ಗೋದಾವರಿ ನದಿ ನೀರಿನಲ್ಲಿ ಪುಲಸ ಮೀನು 1 ತಿಂಗಳು ಮಾತ್ರ ಸಿಗುತ್ತದೆ. ಹೀಗಾಗಿ, ಇದಕ್ಕೆ ವಿಪರೀತ ಬೇಡಿಕೆ ಇದೆ. ಪಾಂಫ್ರೆಟ್, ಮಂಜ್ರಮ್ ಇತ್ಯಾದಿ ಮೀನಿಗಿಂತಲೂ ಇದರ ಬೆಲೆ ಹೆಚ್ಚು. ಬಾಂಗ್ಲಾದೇಶದಲ್ಲಿ ಇದರ ಲಭ್ಯತೆ ಹೆಚ್ಚು. ಇಲಿಶ್ ಎಂದು ಕರೆಯಲಾಗುವ ಈ ಮೀನು ಬಾಂಗ್ಲಾದೇಶದ ಪ್ರಮುಖ ಆದಾಯಮೂಲಗಳಲ್ಲಿ ಒಂದೆನಿಸಿದೆ. ತಮಿಳುನಾಡಿನಲ್ಲಿ ಈ ಮೀನಿಗೆ ಉಳ್ಳ ಮೀನ್ ಎಂದು ಕರೆಯುತ್ತಾರೆ. ಬೆಂಗಳೂರಿನಲ್ಲಿ ಈ ಮೀನು ವಿರಳವಾಗಿ ಲಭ್ಯ ಇದೆ. ಇಲ್ಲಿ ಇದರ ಬೆಲೆ ಕಿಲೋಗೆ 4 ಸಾವಿರ ರೂಗಿಂತಲೂ ಹೆಚ್ಚು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ