
ನವದೆಹಲಿ: ದೇಶದ ಮೊದಲ ಮಲ್ಟಿಪ್ಲೆಕ್ಸ್ ಆಪರೇಟರ್ ಎನಿಸಿದ ಪಿವಿಆರ್ ಇದೀಗ 50 ಸಿನಿಮಾ ಸ್ಕ್ರೀನ್ಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. 2023ರ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಪಿವಿಆರ್ ಐನಾಕ್ಸ್ ಸಂಸ್ಥೆ (PVR Inox) 333 ಕೋಟಿ ನಿವ್ವಳ ನಷ್ಟ ಅನುಭವಿಸಿದೆ. ಈ ಕಾರಣಕ್ಕೆ ನಷ್ಟ ತರುತ್ತಿರುವ ಸಿನಿಮಾ ಹಾಲ್ಗಳನ್ನು ಮುಚ್ಚಲು ಪಿವಿಆರ್ ಐನಾಕ್ಸ್ ನಿರ್ಧರಿಸಿದೆ. 2022ರ ಮಾರ್ಚ್ ಅಂತ್ಯದ ಕ್ವಾರ್ಟರ್ನಲ್ಲೂ ಪಿವಿಆರ್ ಸಂಸ್ಥೆ 105.49 ಕೋಟಿ ರೂ ನಿವ್ವಳ ನಷ್ಟ ಅನುಭವಿಸಿತ್ತು. ಈ ವರ್ಷದ ತ್ರೈಮಾಸಿಕ ಅವಧಿಯಲ್ಲಿ 3 ಪಟ್ಟು ಹೆಚ್ಚು ನಷ್ಟವಾಗಿದೆ. ಆದರೆ, 2022ರ ಜನವರಿಯಿಂದ ಮಾರ್ಚ್ವರೆಗಿನ ಅವಧಿಯಲ್ಲಿ ಅದರ ಆದಾಯ 536.17 ಕೋಟಿ ರೂ ಇದ್ದದ್ದು ಈ ವರ್ಷ 1,143.17 ಕೋಟಿ ರೂಗೆ ಏರಿದೆ.
ಅಷ್ಟು ಆದಾಯ ಬಂದರೂ ಈ ಬೃಹತ್ ಮಲ್ಟಿಪ್ಲೆಕ್ಸ್ ಸಂಸ್ಥೆ 333.90 ಕೋಟಿ ರೂ ನಿವ್ವಳ ನಷ್ಟ ಕಂಡಿರುವುದು ಗಮನಾರ್ಹ. ಆ ಕ್ವಾರ್ಟರ್ನಲ್ಲಿ ಪಿವಿಆರ್ ಐನಾಕ್ಸ್ನ ಒಟ್ಟು ವೆಚ್ಚ 1,364.11 ಕೋಟಿ ರೂ ಎನ್ನಲಾಗಿದೆ. ಹೀಗಾಗಿ, ನಷ್ಟ ಅಗಾಧವಾಗಿದೆ.
ನಾಲ್ಕೈದು ತಿಂಗಳ ಹಿಂದಿನವರೆಗೂ ಪಿವಿಆರ್ ಮತ್ತು ಐನಾಕ್ಸ್ ಎರಡು ಬೇರೆ ಕಂಪನಿಗಳಾಗಿದ್ದವು. 2023 ಫೆಬ್ರುವರಿ ತಿಂಗಳ ಮೊದಲ ವಾರದಲ್ಲಿ ಎರಡೂ ಸಂಸ್ಥೆಗಳು ವಿಲೀನಗೊಂಡು ಪಿವಿಆರ್ ಐನಾಕ್ಸ್ ಎಂದು ಹೆಸರು ಬದಲಿಸಲಾಯಿತು. ಹೀಗಾಗಿ, ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅದರ ಲಾಭ ನಷ್ಟದ ವರದಿಯಲ್ಲಿ ಹಿಂದಿನ ಅಂಕಿ ಅಂಶಗಳಿಗಿಂತ ತುಸು ಭಿನ್ನವಾಗಿದೆ. ಕುತೂಹಲವೆಂದರೆ ಐನಾಕ್ಸ್ ವಿಲೀನವಾಗುವ ಮುನ್ನ ಪಿವಿಆರ್ ಸಂಸ್ಥೆ 2022ರ ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ 16.1 ಕೋಟಿ ರೂ ಲಾಭ ಮಾಡಿತ್ತು. ಐನಾಕ್ಸ್ ವಿಲೀನಗೊಂಡ ಬಳಿಕ ನಷ್ಟ ಹೆಚ್ಚಾಗಿದೆ.
ಪಿವಿಆರ್ ಮತ್ತು ಐನಾಕ್ಸ್ ಎರಡೂ ಸೇರಿ ಭಾರತ ಮತ್ತು ಶ್ರೀಲಂಕಾದಲ್ಲಿ 115 ನಗರಗಳಲ್ಲಿ 361 ಸಿನಿಮಾ ಮಂದಿರಗಳನ್ನು ಹೊಂದಿದ್ದು, ಅದರಲ್ಲಿ 1,670 ಸಿನಿಮಾ ಸ್ಕ್ರೀನ್ಗಳನ್ನು ಆಪರೇಟ್ ಮಾಡಲಾಗುತ್ತಿದೆ. ಪ್ರತೀ ವರ್ಷವೂ ಹೊಸ ಸ್ಕ್ರೀನ್ ಹಾಲ್ಗಳನ್ನು ಸೇರಿಸಲಾಗುತ್ತಿದೆ. 2023ರ ಹಣಕಾಸು ವರ್ಷದಲ್ಲಿ 140 ಪರದೆಗಳನ್ನು ಸೇರಿಸಲಾಗಿದೆ. ಈ ಹಣಕಾಸು ವರ್ಷದಲ್ಲಿ 180 ಸ್ಕ್ರೀನ್ಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರ ಮಧ್ಯೆ ನಷ್ಟ ತರುತ್ತಿರುವ 50 ಸ್ಕ್ರೀನ್ಗಳನ್ನು ಮುಚ್ಚಲಾಗುತ್ತದೆ.
ಕೆಲ ಪ್ರದೇಶಗಳಲ್ಲಿ ಮತ್ತು ಮಾಲ್ಗಳಲ್ಲಿ ಜನರು ಹೋಗುವುದು ಕಡಿಮೆ ಆಗಿದೆ. ಅಂಥ ಕಡೆ ಇರುವ ಸಿನಿಮಾ ಸ್ಕ್ರೀನ್ಗಳನ್ನು ಗುರುತಿಸಿ ಮುಚ್ಚುತ್ತೇವೆ ಎಂದು ಪಿವಿಆರ್ ಐನಾಕ್ಸ್ ಹೇಳಿದೆ.
ಪಿವಿಆರ್ ಐನಾಕ್ಸ್ ಸಂಸ್ಥೆ ಒಂದು ಇಂಟರೆಸ್ಟಿಂಗ್ ಮಾಹಿತಿ ನೀಡಿದೆ. ಕಳೆದ 4 ಕ್ವಾರ್ಟರ್ನಲ್ಲಿ ಹಿಂದಿ ಸಿನಿಮಾಗಳಿಗೆ ಜನರ ಸ್ಪಂದನೆ ಬಹಳ ಮಿಶ್ರ ರೀತಿಯಲ್ಲಿದೆ, ಅನಿಶ್ಚಿತ ಪರಿಸ್ಥಿತಿ ಇದೆ. ಕೋವಿಡ್ಗೆ ಮುಂಚಿನ ದಿನಗಳಿಗೆ ಹೋಲಿಸಿದರೆ ಈಗೀಗ ಪ್ರೇಕ್ಷಕರ ಭಾವನೆಗಳಿಗೆ ಹೆಚ್ಚು ಹತ್ತಿರ ಇರುವ ಸಿನಿಮಾಗಳು ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿವೆ ಎಂದು ಪಿವಿಆರ್ ಹೇಳಿದೆ.
ಹಿಂದಿ ಸಿನಿಮಾಗಳ ಕಲೆಕ್ಷನ್ ಕಡಿಮೆ ಆಗಿದ್ದು ಒಂದಾದರೆ, ಹಾಲಿವುಡ್ ಚಿತ್ರಗಳು ಹೆಚ್ಚು ಬಿಡುಗಡೆ ಆಗದೇ ಇದ್ದದ್ದು ಮಲ್ಟಿಪ್ಲೆಕ್ಸ್ ನಷ್ಟಕ್ಕೆ ಕಾರಣ ಎನ್ನಲಾಗಿದೆ. ಸಾಮಾನ್ಯವಾಗಿ ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳು ಮಲ್ಟಿಪ್ಲೆಕ್ಸ್ಗಳಿಗೆ ಹೆಚ್ಚು ಆದಾಯಮೂಲವಾಗಿರುತ್ತವೆ. ಈಗೀಗ ಪ್ರಾದೇಶಿಕ ಸಿನಿಮಾಗಳು ಮಲ್ಟಿಪ್ಲೆಕ್ಸ್ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ತೆರೆ ಕಾಣುತ್ತಿದ್ದು, ಉತ್ತಮ ಕಲೆಕ್ಷನ್ ಕೂಡ ಪಡೆಯುತ್ತಿರುವುದು ಗಮನಾರ್ಹ.
Published On - 10:37 am, Tue, 16 May 23