Rakesh Jhunjhunwala: ಟಾಟಾ ಸಮೂಹದ ಈ 2 ಕಂಪೆನಿ ಷೇರಿನಿಂದ ಜುಂಜುನ್​ವಾಲಾಗೆ ವಾರದಲ್ಲೇ 1300 ಕೋಟಿ ರೂ.ಗೂ ಹೆಚ್ಚು ಲಾಭ

| Updated By: Srinivas Mata

Updated on: Oct 16, 2021 | 11:24 AM

ಟಾಟಾ ಸಮೂಹದ ಈ ಎರಡು ಕಂಪೆನಿಗಳ ಷೇರು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರಾಕೇಶ್​ ಜುಂಜುನ್​ವಾಲಾ ಪೋರ್ಟ್​ಫೋಲಿಯೋದಲ್ಲಿನ ಈ ಷೇರುಗಳು ಒಂದೇ ವಾರದಲ್ಲಿ 1300 ಕೋಟಿ ರೂಪಾಯಿಯಷ್ಟು ಲಾಭ ತಂದುಕೊಟ್ಟಿದೆ.

Rakesh Jhunjhunwala: ಟಾಟಾ ಸಮೂಹದ ಈ 2 ಕಂಪೆನಿ ಷೇರಿನಿಂದ ಜುಂಜುನ್​ವಾಲಾಗೆ ವಾರದಲ್ಲೇ 1300 ಕೋಟಿ ರೂ.ಗೂ ಹೆಚ್ಚು ಲಾಭ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆಯ ಯಶಸ್ವಿ ಹೂಡಿಕೆದಾರ ರಾಕೇಶ್ ಜುಂಜುನ್​ವಾಲಾ ಅವರ ಪೋರ್ಟ್​ಫೋಲಿಯೋದಲ್ಲಿನ ಈ ಎರಡು ಟಾಟಾ ಸಮೂಹದ ಷೇರುಗಳು ವಾರದಲ್ಲಿ 1,331 ಕೋಟಿ ರೂಪಾಯಿಯ ಗಳಿಕೆ ತಂದಿವೆ. ಸೆನ್ಸೆಕ್ಸ್​, ನಿಫ್ಟಿ ಹೊಸ ದಾಖಲೆ ಎತ್ತರದಲ್ಲಿದೆ. ಜುಂಜುನ್​ವಾಲಾ ಅವರು ಹೂಡಿಕೆ ಮಾಡಿದ ಟೈಟಾನ್ ಕಂಪೆನಿ ಲಿಮಿಟೆಡ್ ಮತ್ತು ಟಾಟಾ ಮೋಟಾರ್ಸ್ ಹಿಂದಿನ 4 ಟ್ರೇಡಿಂಗ್ ಸೆಷನ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಮೇಲೇರಿರುವುದರಿಂದ ಲಾಭವನ್ನೂ ದೊಡ್ಡ ಮಟ್ಟದಲ್ಲಿ ಮಾಡಿಕೊಟ್ಟಿದೆ. ಟೈಟಾನ್‌ ಷೇರಿನ ಬೆಲೆ ಶೇ 8.98ರಷ್ಟು ಏರಿಕೆಯಾಗಿದ್ದರೆ, ವಾಹನ ಪ್ರಮುಖ ಕಂಪೆನಿಯಾದ ಟಾಟಾ ಮೋಟಾರ್ಸ್ ಶೇ 30ರಷ್ಟು ಏರಿಕೆಯಾಗಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಮತ್ತೆ ಮತ್ತೆ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿವೆ. ಷೇರುಪೇಟೆಯಲ್ಲಿ ಗಳಿಕೆಯ ಋತು ಆರಂಭವಾಗುತ್ತಿದ್ದಂತೆ ಆರೋಗ್ಯಕರ ಆರ್ಥಿಕತೆಗೆ ಸಹಾಯವಾಗಿದೆ.

ಟಾಟಾ ಮೋಟಾರ್ಸ್ ಷೇರು ಬೆಲೆ ದಾಖಲೆ ಏರಿಕೆ
ಟಾಟಾ ಮೋಟಾರ್ಸ್‌ನ ಷೇರು ಬೆಲೆ ಈ ವಾರ ತನ್ನದೇ ಹಾದಿಯಲ್ಲಿ ಮೇಲ್ಮುಖವಾಗಿ ಸಾಗಿದೆ. ಕಳೆದ ಶುಕ್ರವಾರದಂದು ದಿನಾಂತ್ಯದ ವಹಿವಾಟು ಮುಕ್ತಾಯದಿಂದ ಈಚೆಗೆ ಪ್ರತಿ ಷೇರಿಗೆ ಶೇ 30ರಷ್ಟು ಗಳಿಕೆ ಕಂಡಿದೆ. ಗುರುವಾರ (ಅಕ್ಟೋಬರ್ 14) ದಿನಾಂತ್ಯಕ್ಕೆ ವಹಿವಾಟು ಮುಕ್ತಾಯ ಆಗುವಾಗ ಪ್ರತಿ ಷೇರಿಗೆ ರೂ. 496 ಇತ್ತು. ರಾಕೇಶ್ ಜುಂಜುವಾಲಾ ಅವರ ಬಳಿ ಟಾಟಾ ಮೋಟಾರ್ಸ್​ನ 3.77 ಕೋಟಿ ಈಕ್ವಿಟಿ ಷೇರುಗಳಿದ್ದು, ಅವುಗಳ ಮೌಲ್ಯ 1,445 ಕೋಟಿ ರೂಪಾಯಿ ಇತ್ತು. ಈ ಸ್ಟಾಕ್ ಬೆಲೆಯು ಏರಿಕೆ ಕಂಡು, 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದಂತೆ ಗುರುವಾರದ ವಹಿವಾಟಿನ ನಂತರ ಜುಂಜುನ್​ವಾಲಾ ಅವರ ಬಳಿ ಇರುವ ಷೇರುಗಳ ಮೌಲ್ಯ 1,874 ಕೋಟಿ ರೂಪಾಯಿಗೆ ಹೋಯಿತಿ. ಕೇವಲ ನಾಲ್ಕು ಟ್ರೇಡಿಂಗ್​ ಸೆಷನ್​ನಲ್ಲಿ ರೂ. 429.59 ಕೋಟಿ ಲಾಭ ಆಗಿದೆ.

ಈ ವರ್ಷ ಇಲ್ಲಿಯವರೆಗೆ ಟಾಟಾ ಮೋಟಾರ್‌ನ ಷೇರಿನ ಬೆಲೆ ಶೇ 166.27ರಷ್ಟು ಹೆಚ್ಚಾಗಿದೆ ಮತ್ತು ವಿಶ್ಲೇಷಕರು ಈ ಷೇರು ಇನ್ನಷ್ಟು ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ. ಎಮ್‌ಕೆ ಗ್ಲೋಬಲ್‌ನ ವಿಶ್ಲೇಷಕರು, ಟಾಟಾ ಮೋಟಾರ್ಸ್ ಈ ವಾರ ಘೋಷಿಸಿದ ಟಿಪಿಜಿ ಒಪ್ಪಂದದ ನಂತರ ಪ್ರತಿ ಷೇರಿಗೆ 515 ರೂ., ಐಸಿಐಸಿಐ ಡೈರೆಕ್ಟ್​ನಿಂದ ಟಾಟಾ ಮೋಟಾರ್ಸ್ ಮೇಲೆ 515 ರೂಪಾಯಿ ಬೆಲೆಯ ಗುರಿಯನ್ನು ನಿಗದಿ ಮಾಡಿದ್ದಾರೆ. ಟಿಪಿಜಿ ಇನ್ವೆಸ್ಟ್​ಮೆಂಟ್ ಸ್ಟಾಕ್ ಮೌಲ್ಯವನ್ನು ಹೆಚ್ಚು ಮಾಡಲಿದೆ. “ಈ ವಹಿವಾಟು ಎಲೆಕ್ಟ್ರಿಕಲ್ ವೆಹಕಲ್ ವ್ಯಾಪಾರ ಮೌಲ್ಯವನ್ನು ವಿಸ್ತರಿಸುತ್ತದೆ ಮತ್ತು ಮೊಬಿಲಿಟಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಭವಿಷ್ಯದ ಸಾಮರ್ಥ್ಯವನ್ನು ತೋರಿಸುತ್ತದೆ,” ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಟೈಟಾನ್ ಸ್ಟಾಕ್ ಹೊಳೆಯುತ್ತಿದೆ
ರಾಕೇಶ್ ಜುಂಜುನ್‌ವಾಲಾ ಮತ್ತು ಅವರ ಪತ್ನಿ ರೇಖಾ ಜತೆಗೂಡಿ ಟೈಟಾನ್ ಕಂಪೆನಿ ಲಿಮಿಟೆಡ್‌ನ 4.26 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಕಳೆದ ವಾರದ ಅಂತ್ಯದ ವೇಳೆಗೆ ದಂಪತಿ ಶೇ 4.81ರಷ್ಟು ಪಾಲನ್ನು, ಅಂದರೆ 10,046 ಕೋಟಿ ರೂಪಾಯಿ ಮೌಲ್ಯದ ಷೇರು ಹೊಂದಿದ್ದರು. ಈ ಷೇರು ಈ ವಾರ ಶೇ 8.98ರಷ್ಟು ಗಳಿಕೆ ಕಂಡಿತು. ಪ್ರತಿ ಷೇರಿಗೆ ರೂ 2,567ರಂತೆ ಗುರುವಾರದ ಸೆಷನ್ ಮುಕ್ತಾಯಗೊಳಿಸಿತು. ರಾಕೇಶ್ ಜುಂಜುನ್‌ವಾಲಾ ಹೂಡಿಕೆ ಮೌಲ್ಯ 10,948 ಕೋಟಿ ರೂಪಾಯಿ ಆಗಿದ್ದು, ಇದರಿಂದ ಈ ವಾರ ರೂ. 902 ಕೋಟಿ ಲಾಭವಾಗಿದೆ.

ರಾಕೇಶ್ ಜುಂಜುನ್‌ವಾಲಾ ಅವರ ಪೋರ್ಟ್​ಫೋಲಿಯೋದಲ್ಲಿ ಟೈಟಾನ್ ಹಲವು ವರ್ಷಗಳಿಂದ ಇದೆ. 2021ರಲ್ಲಿ ಈ ಸ್ಟಾಕ್ ಇದುವರೆಗೆ ಶೇ 64.7ರಷ್ಟು ಏರಿಕೆ ಕಂಡಿದೆ. ಈ ತಿಂಗಳ ಆರಂಭದಲ್ಲಿ ಟೈಟಾನ್ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೃಢವಾದ ಪ್ರದರ್ಶನವನ್ನು ನೀಡಿದೆ. ಇದು ಕೊವಿಡ್ -19 ರ ಎರಡನೇ ಅಲೆಯ ಕನಿಷ್ಠ ಮಟ್ಟದಿಂದ ಬಲವಾದ ಚೇತರಿಕೆಯನ್ನು ಕಂಡಿದೆ. ವಿಶ್ಲೇಷಕರು ಸ್ಟಾಕ್‌ ಬಗ್ಗೆ ಸಕಾರಾತ್ಮಕವಾಗಿದ್ದಾರೆ. ಆದರೂ ಸದ್ಯಕ್ಕೆ ಟೈಟಾನ್ ಕಂಪೆನಿಯ ಷೇರುಗಳು ಮೋತಿಲಾಲ್ ಓಸ್ವಾಲ್, ಎಮ್‌ಕೆ ಗ್ಲೋಬಲ್ ಮತ್ತು ಐಸಿಐಸಿಐ ಡೈರೆಕ್ಟ್​ನಲ್ಲಿ ವಿಶ್ಲೇಷಕರು ಮಾಡಿದ ಅಂದಾಜುಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ: Akasa Airlines: ರಾಕೇಶ್​ ಜುಂಜುನ್​ವಾಲಾ ಬೆಂಬಲಿತ ಆಕಾಶ ಏರ್​ಲೈನ್ಸ್​ಗೆ ಸರ್ಕಾರದ ನೋ ಅಬ್ಜೆಕ್ಷನ್

Published On - 8:24 pm, Fri, 15 October 21