ಝೀ ಎಂಟರ್ಟೇನ್ಮೆಂಟ್ (Zee Entertainment) ಸ್ಟಾಕ್ ಮೇಲ್ಮುಖವಾಗಿ ಸಾಗುತ್ತಿರುವ ಟ್ರೆಂಡ್ನಲ್ಲಿದೆ. ಇದೇ ಷೇರಿನಲ್ಲಿ ಹೂಡಿಕೆ ಮಾಡಿರುವ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) 49.50 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಜುಂಜುನ್‌ವಾಲಾ ಸೆಪ್ಟೆಂಬರ್ 14ರಂದು ಝೀ ಎಂಟರ್ಟೇನ್ಮೆಂಟ್ನ 50 ಲಕ್ಷ ಷೇರುಗಳನ್ನು ಖರೀದಿಸಿದರು. ಅತಿದೊಡ್ಡ ಸಾಂಸ್ಥಿಕ ಷೇರುದಾರರಾದ ಇನ್ವೆಸ್ಕೋ ಒಪೆನ್ಹೈಮರ್ನಿಂದ ಸಿಇಒ ಪುನಿತ್ ಗೋಯೆಂಕಾ ಅವರನ್ನು ಪದಚ್ಯುತಗೊಳಿಸಲು ಮತ್ತು ಜೀ ಎಂಟರ್‌ಟೈನ್‌ಮೆಂಟ್ ಮಂಡಳಿಯ ಪುನರ್ರಚನೆಗೆ ಕರೆ ನೀಡಿದ ದಿನದಂದೇ ಷೇರು ಖರೀದಿಸಿದರು. ಜುಂಜುನ್‌ವಾಲಾ ಸೆ.14ರಂದು ಈ ಷೇರು ಖರೀದಿಸಿದ್ದು ರೂ. 220ರ ದರದಲ್ಲಿ. ಸೆ. 23ರ ಗುರುವಾರ ದಿನಾಂತ್ಯಕ್ಕೆ ಈ ಷೇರಿನ ಬೆಲೆ 318.95 ರೂಪಾಯಿ ಇದೆ.
ಅಂದರೆ ಪ್ರತಿ ಷೇರಿಗೆ 99 ರೂಪಾಯಿ ಲಾಭ ಸಿಕ್ಕಿದೆ. ರಾಕೇಶ್ ಜುಂಜುನ್‌ವಾಲಾ ಖರೀದಿ ಮಾಡಿದ್ದದ್ದು 50 ಲಕ್ಷ ಷೇರುಗಳನ್ನು ಬರೀ ಎಂಟೇ ಟ್ರೇಡಿಂಗ್ ಸೆಷನ್ನಲ್ಲಿ ಜುಂಜುನ್ವಾಲಾಗೆ ಬಂದಿರುವ ಒಟ್ಟು ಲಾಭ 50,00,000 X 99= 49,50,00,000 (49.50 ಕೋಟಿ) ರೂಪಾಯಿ. 9 ದಿನದಲ್ಲಿ ಬಂದಿರುವ ಲಾಭದ ಪ್ರಮಾಣವನ್ನು ಶೇಕಡಾವಾರು ಎಷ್ಟು ಅಂತ ನೋಡುವುದಾದರೆ ಶೇ 45ರಷ್ಟಾಗುತ್ತದೆ. ಇದನ್ನು ವಾರ್ಷಿಕ ಲೆಕ್ಕಾಚಾರಕ್ಕೆ ಹೇಳುವುದಾದರೆ ಶೇ 1825ರಷ್ಟಾಗುತ್ತದೆ. ನಿಮಗೆ ಗೊತ್ತಾ? ಈ ವರ್ಷ ಇಲ್ಲಿಯ ತನಕ ನಿಫ್ಟಿ ಶೇ 26.43ರಷ್ಟು ರಿಟರ್ನ್ಸ್ ನೀಡಿದ್ದು, ಕಳೆದ ಒಂದು ವರ್ಷದಿಂದ ಇಲ್ಲಿಯ ತನಕ ಶೇ 59.22ರಷ್ಟು ರಿಟರ್ನ್ಸ್ ನೀಡಿದೆ. ಇಂಥ ಹೂಡಿಕೆ ಅವಕಾಶ ಸಿಗುವುದು ಅಪರೂಪ. ಹೂಡಿಕೆದಾರರು ಕ್ಯಾಲ್ಕುಲೇಟೆಡ್ ಅಪಾಯ ತೆಗೆದುಕೊಳ್ಳಲು ಸಿದ್ಧರಿರಬೇಕು. ಅಂದಹಾಗೆ ಈ ರೀತಿಯ ನಡೆಗಳಿಗೆ ರಾಕೇಶ್ ಜುಂಜುನ್‌ವಾಲಾ ಕಳೆದ ಹಲವು ವರ್ಷಗಳಿಂದ ಹೆಸರಾಗಿದ್ದಾರೆ.
ಜುಂಜುನ್‌ವಾಲಾ ಮಾತ್ರವಲ್ಲ, ಇತರ ಕೆಲವು ಫಂಡ್ ಮ್ಯಾನೇಜರ್ಗಳು ಕೂಡ ಸೆ.14ರಂದು ಝೀ ಎಂಟರ್ಟೇನ್ಮೆಂಟ್ ಷೇರು ಖರೀದಿಸಿದ್ದರು. ಬ್ರೋಕರೇಜ್ಗಳು ಶಿಫಾರಸು ಮಾಡಿದಂತೆ ಹೆಚ್ಚಿನ ಸಾಂಸ್ಥಿಕ ಹೂಡಿಕೆದಾರರು ಸಹ ಕೊಂಡರು. ಕಂಪೆನಿಗೆ ಅಗತ್ಯ ಇರುವ ಬಂಡವಾಳ ಪೂರೈಕೆಗೆ ಸೋನಿ ಪಿಕ್ಚರ್ಸ್ ಮುಂದಾಗಿದೆ. ಇದರಿಂದ ಝೀ ಎಂಟರ್ಟೇನ್ಮೆಂಟ್ನ ಡಿಜಿಟಲ್ ವ್ವವಹಾರದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ. ಲಾಭದ ದೃಷ್ಟಿಯಿಂದ ನೋಡಿದರೆ FY21ರಲ್ಲಿ ಸೋನಿ ಪಿಕ್ಚರ್ಸ್ 582 ಕೋಟಿ ರೂ. ಲಾಭ ಮಾಡಿದೆ. ಅದಕ್ಕೂ ಮುಂಚೆ 896 ಕೋಟಿ ಲಾಭ ಮಾಡಿತ್ತು. ಒಂದು FY23ರಲ್ಲಿ ಆ ಸಂಖ್ಯೆ ಪುನರಾವರ್ತನೆ ಆದಲ್ಲಿ ಝೀ ಹಾಗೂ ಸೋನಿ ಕಂಪೆನಿಯ ಒಟ್ಟು ಲಾಭ 2500 ಕೋಟಿ ರೂ. ಹತ್ತಿರ ಆಗುತ್ತದೆ ಎನ್ನುತ್ತಾರೆ ವಿಶ್ಲೇಷಕರು. ಶೇ 10ರಷ್ಟು ಲಾಭದ ಪ್ರಮಾಣ ಹೆಚ್ಚಾದರೂ 2750 ಕೋಟಿ ಲಾಭ ಬರುತ್ತದೆ.
ಇದನ್ನೂ ಓದಿ: Sensex Stocks: ಸೆನ್ಸೆಕ್ಸ್ ಲಿಸ್ಟೆಡ್ ಷೇರುಗಳ ಹೂಡಿಕೆದಾರರ ಸಂಪತ್ತು 3 ಲಕ್ಷ ಕೋಟಿ ರೂಪಾಯಿ ಏರಿಕೆ
(Rakesh Jhunjhunwala Investment Gains Profit Of Rs 49.50 Crore Within 9 Days Here Is The Details)