ಬೆಂಗಳೂರು: ಬೆಂಗಳೂರಿಗರ ಜಿಹ್ವಾ ಚಾಪಲ್ಯ ತಣಿಸುವ ಅಸಂಖ್ಯಾತ ಹೋಟೆಲ್ಗಳಿವೆ. ಫುಟ್ಪಾತ್ನಲ್ಲಿರುವ ಒಂದು ಸಣ್ಣ ಗೂಡಂಗಡಿ ಹೋಟೆಲ್ನಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್ವರೆಗೂ ವಿವಿಧ ಸ್ತರಗಳ ಜನರ ಬಜೆಟ್ಗಳಿಗೆ, ಅಭಿರುಚಿಗಳಿಗೆ ಅನುಗುಣವಾದ ಆಹಾರ ಆಯ್ಕೆಗಳಿವೆ. ಆದರೂ ಬೆಂಗಳೂರಿನ ಹೋಟೆಲ್ ಎಂದರೆ ತತ್ಕ್ಷಣ ನೆನಪಿಗೆ ಬರುವುದು ವಿದ್ಯಾರ್ಥಿ ಭವನ್, ಎಂಟಿಅರ್, ವೀಣಾ ಸ್ಟೋರ್ಸ್, ಅಯ್ಯರ್ಸ್ ಮೆಸ್ ಇತ್ಯಾದಿ. ಸಣ್ಣ ಜಾಗದಲ್ಲಿ ಸ್ಥಾಪನೆಯಾಗಿ ಇವು ದಿನವೂ ನೂರಾರು ಸಾವಿರಾರು ಮಂದಿ ಗ್ರಾಹಕರನ್ನು ಸೆಳೆಯುತ್ತವೆ.
ಇಂದಿರಾ ನಗರ, ಜೆಪಿ ನಗರ ಇತ್ಯಾದಿ ಕಡೆ ಇರುವ ರಾಮೇಶ್ವರಂ ಕೆಫೆ ಇಂತಹ ಒಂದು ಹೋಟೆಲ್. ರಾಮೇಶ್ವರಂ ಕೆಫೆಯು (Rameshwaram Cafe) ಬೆಂಗಳೂರಿನಲ್ಲಿರುವ ಪ್ರೀಮಿಯಂ ದಕ್ಷಿಣ ಭಾರತೀಯ ವೆಜ್ ಕೆಫೆಯಾಗಿದೆ. ಈ ಕೆಫೆಯು ಭಾರತದ ಹೆಮ್ಮೆಯ ಪುತ್ರ, ಮಿಸೈಲ್ ಮ್ಯಾನ್ ಮತ್ತು ದೇಶದ ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ (Dr APJ Abdul Kalam) ಅವರಿಂದ ಸ್ಫೂರ್ತಿ ಪಡೆದು ಮತ್ತು ಅವರಿಗೆ ಸಮರ್ಪಿತವಾದ ಹೋಟೆಲ್ ಆಗಿದೆ. ಏಕೆಂದರೆ ರಾಮೇಶ್ವರಂ (Rameshwaram) ಎಂಬುದು ಅಬ್ದುಲ್ ಕಲಾಂ ಅವರ ಜನ್ಮಸ್ಥಳ. ಹಾಗಾಗಿಯೇ ಆ ಮಹಾನ್ ಚೇತನದಿಂದ ಸ್ಫೂರ್ತಿ ಪಡೆದು ನಮ್ಮ ಹೋಟೆಲಿಗೆ ರಾಮೇಶ್ವರಂ ಕೆಫೆ ಎಂದು ಹೆಸರು ಇಟ್ಟೆವು ಎಂದು ಸ್ಥಾಪಕರಾದ ದಿವ್ಯಾ ಮತ್ತು ರಾಘವೇಂದ್ರ ರಾವ್ ಹೆಮ್ಮೆಯಿಂದ ಹೇಳುತ್ತಾರೆ. ರಾಮೇಶ್ವರಂ ಕೆಫೆಯು ಎಲ್ಲಾ ರೀತಿಯ ಜನರಿಗೆ ಮುಂಜಾನೆ 5 ರಿಂದ ಮಧ್ಯರಾತ್ರಿ 1 ಗಂಟೆಯವರೆಗೆ ಸೇವೆ ಸಲ್ಲಿಸುವ ಬೆಂಗಳೂರಿನಲ್ಲಿರುವ ಏಕೈಕ ರೆಸ್ಟೋರೆಂಟ್ ಇದಾಗಿದೆ.
ಇದನ್ನೂ ಓದಿ: Apple Phones: ಆ್ಯಪಲ್ ಫೋನ್ ಫ್ಯಾಕ್ಟರಿಗಾಗಿ ಬೆಂಗಳೂರಿನಲ್ಲಿ 303 ಕೋಟಿ ರೂ.ಗೆ ಭೂಮಿ ಖರೀದಿಸಿದ ಫಾಕ್ಸ್ಕಾನ್
ದಿವ್ಯಾ ಮತ್ತು ರಾಘವೇಂದ್ರ ರಾವ್ ಸ್ಥಾಪಿಸಿರುವ ರಾಮೇಶ್ವರಂ ಕೆಫೆ ಈಗ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹರಡಿದೆ. ಎಲ್ಲಾ ಬ್ರ್ಯಾಂಚ್ಗಳಲ್ಲೂ ಉತ್ತಮ ಬ್ಯುಸಿನೆಸ್ ಕಾಣುತ್ತಿದೆ. ಬೆಂಗಳೂರಿನ ಬ್ರಾಹ್ಮಿಣ್ಸ್, ಅಯ್ಯಂಗಾರ್ ಬ್ರ್ಯಾಂಡ್ನ ಹೋಟೆಲ್ಗಳಲ್ಲಿರುವಂತೆ ರಾಮೇಶ್ವರಂ ಕೆಫೆಯಲ್ಲಿ ಸ್ವಾದಿಷ್ಟಕರ ಆಹಾರಗಳ ಆಯ್ಕೆ ಇದೆ. ಅಪ್ಪಟ ಸಸ್ಯಾಹಾರದ ಖಾದ್ಯಗಳ ಮೆನು ಇಲ್ಲಿದೆ. ಇಡ್ಲಿ ವಡೆ, ದೋಸೆ, ರೈಸ್ಬಾತ್ ಇತ್ಯಾದಿ ಮಾಮೂಲಿಯ ಆಹಾರವೇ ಆದರೂ ರುಚಿಯಲ್ಲಿ ಒಂದು ಹಂತ ಮೇಲಿದೆ. ಹೀಗಾಗಿ, ಈ ಹೋಟೆಲ್ ಸದಾ ಜನರಿಂದ ತುಂಬಿರುತ್ತದೆ. ತುಪ್ಪದ ಪುಡಿ ಇಡ್ಲಿ, ತುಪ್ಪದ ಪುಡಿ ಮಸಾಲೆ ದೋಸೆ, ಬಟನ್ ಇಡ್ಲಿ ಸಾಂಬಾರ್, ಪೊಂಗಲ್, ಬೆಳ್ಳುಳ್ಳಿ ರೋಸ್ಟ್ ದೋಸೆಗಳು ನಮ್ಮ ಮೇರು ಭಕ್ಷ್ಯಗಳಾಗಿವೆ.
Published On - 3:43 pm, Sun, 14 May 23