ಕಳೆದ ತಿಂಗಳು ಇಹಲೋಕ ತ್ಯಜಿಸಿದ ರತನ್ ಟಾಟಾ ಭಾರತ ಕಂಡ ಅತ್ಯಂತ ಧೀಮಂತ ಮತ್ತು ಗೌರವಾನ್ವಿತ ಉದ್ಯಮಿಗಳಲ್ಲೊಬ್ಬರು. ರತನ್ ಟಾಟಾ ಅವಿವಾಹಿತರಾಗೇ ಉಳಿದರಾದರೂ ಹಿಂದೆ ಅಪೂರ್ವ ಲವ್ ಸ್ಟೋರಿ ಅವರೊಂದಿಗಿದೆ. ರತನ್ ಟಾಟಾ ತಂದೆ ಜೆಆರ್ಡಿ ಟಾಟಾ ಅವರು ಅಮೆರಿಕದಲ್ಲಿ ಫ್ರೆಡರಿಕ್ ಎಂಬುವವರ ಜೊತೆ ಸೇರಿ ‘ಜೋನ್ಸ್ ಅಂಡ್ ಎಮ್ಮೋನ್ಸ್’ ಎನ್ನುವ ಆರ್ಕಿಟೆಕ್ಚರ್ ಕಂಪನಿ ನಡೆಸುತ್ತಿದ್ದರು. ಫ್ರೆಡರಿಕ್ ಅವರ ಮಗಳಾದ 19 ವರ್ಷದ ಕೆರೊಲಿನ್ ಎಮ್ಮೋನ್ಸ್ ಮತ್ತು ರತನ್ ಟಾಟಾ ಮಧ್ಯೆ ಪ್ರೇಮಾಂಕುರವಾಗುತ್ತದೆ. ಆಗ ರತನ್ ಟಾಟಾ ಅಮೆರಿಕದಲ್ಲೇ ಓದುತ್ತಿರುತ್ತಾರೆ. ಇವರಿಬ್ಬರ ಪ್ರೇಮ ಕಥೆ ಬಗ್ಗೆ ಥಾಮಸ್ ಮ್ಯಾಥ್ಯೂ ಅವರು ತಮ್ಮ ‘ರತನ್ ಟಾಟಾ: ಎ ಲೈಫ್’ ಪುಸ್ತಕದಲ್ಲಿ ಬರೆದಿದ್ದಾರೆ.
‘ಮೊದಲ ನೋಟದಲ್ಲೇ ನನಗೆ ರತನ್ ಇಷ್ಟವಾಗಿಬಿಟ್ಟರು,’ ಎಂದು ಕೆರೋಲಿನ್ ಅವರು ಹೇಳಿದ್ದನ್ನು ಥಾಮಸ್ ಮ್ಯಾಥ್ಯೂ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಕುತೂಹಲ ಎಂದರೆ ಕೆರೋಲಿನ್ ಅವರ ತಂದೆ ತಾಯಿಗೂ ಕೂಡ ರತನ್ ಟಾಟಾ ಕಂಡರೆ ಇಷ್ಟವಿತ್ತಂತೆ. ದುರದೃಷ್ಟಕ್ಕೆ ಈ ಸಂಬಂಧ ಹೆಚ್ಚು ಕಾಲ ನಿಲ್ಲಲಿಲ್ಲ.
ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಮ್ಮ ಅಜ್ಜಿಯನ್ನು ನೋಡಲು ರತನ್ ಟಾಟಾ 1962ರ ಜುಲೈನಲ್ಲಿ ಭಾರತಕ್ಕೆ ಮರಳುತ್ತಾರೆ. ಆಗ ಕೆರೋಲಿನ್ ಕೂಡ ಟಾಟಾ ಜೊತೆ ಭಾರತಕ್ಕೆ ಬರಲು ಸಿದ್ಧವಿದ್ದರು. ಅಷ್ಟರಮಟ್ಟಿಗೆ ಆಕೆಯು ಪ್ರೀತಿಯಲ್ಲಿ ಮುಳುಗಿದ್ದರು. 1962ರ ಅಕ್ಟೋಬರ್ 20ರಂದು ಭಾರತ ಮತ್ತು ಚೀನಾ ಮಧ್ಯೆ ಯುದ್ಧ ಆರಂಭವಾಯಿತು. ಒಂದು ತಿಂಗಳೊಳಗೆ ಸೀಸ್ಫೈರ್ ಘೋಷಣೆ ಆಗಿತ್ತಾದರೂ ಅಮೆರಿಕನ್ನರು ಭಾರತಕ್ಕೆ ಬರಲು ಅದೇಕೋ ಹೆದರುತ್ತಿದ್ದರು. ಇದೇ ಕಾರಣಕ್ಕೋ ಅಥವಾ ಮತ್ಯಾವುದೋ ಕಾರಣಕ್ಕೋ ರತನ್ ಮತ್ತು ಕೆರೋಲಿನ್ ತಮ್ಮ ಪ್ರೇಮ ಸಂಬಂಧವನ್ನು ಮುಂದುವರಿಸಲಿಲ್ಲ.
ಇದನ್ನೂ ಓದಿ: ಪೇಮೆಂಟ್ ಆಗಿಲ್ಲವೆಂದು ಬಾಂಗ್ಲಾದೇಶಕ್ಕೆ ಪವರ್ ಕಟ್ ಮಾಡಲು ಅದಾನಿ ಯೋಜನೆ
ರತನ್ರಿಂದ ದೂರವಾದ ದುಃಖದ ಮಧ್ಯೆಯೂ ಕೆರೋಲಿನ್ ಸ್ವಲ್ಪ ಕಾಲದ ಬಳಿಕ ಓವನ್ ಜೋನ್ಸ್ ಎನ್ನುವ ಆರ್ಕಿಟೆಕ್ಟ್ ಮತ್ತು ಪೈಲಟ್ರನ್ನು ಮದುವೆಯಾಗುತ್ತಾರೆ. ಕುತೂಹಲವೆಂದರೆ ಕೆರೋಲಿನ್ ಜೀವನ ಪ್ರವೇಶಿಸಿದ ಆ ಯುವಕ, ಆಕೆಯ ಕಣ್ಣಿಗೆ ರತನ್ ರೀತಿಯೇ ಕಾಣುತ್ತಿದ್ದನಂತೆ. 2006ರಲ್ಲಿ ಓವನ್ ನಿಧನರಾಗುತ್ತಾರೆ.
ಗಂಡ ಸತ್ತ ಬಳಿಕ ಕೆರೋಲಿನ್ ತನ್ನ ಸ್ನೇಹಿತರ ಜೊತೆ ‘ದಾರ್ಜೀಲಿಂಗ್ ಲಿಮಿಟೆಡ್’ ಎನ್ನುವ ಸಿನಿಮಾ ನೋಡುತ್ತಾರೆ. ಅದು ಮೂವರು ಸಹೋದರರು ಭಾರತಕ್ಕೆ ಪ್ರವಾಸ ಹೋಗುವ ಘಟನೆಯ ಕಥೆ ಹಂದರ ಇರುವ ಚಿತ್ರ. ಸಿನಿಮಾ ನೋಡಿದ ಬಳಿಕ ಕೆರೋಲಿನ್ಗೆ ಭಾರತಕ್ಕೆ ಹೋಗುವ ಆಸೆ ಹುಟ್ಟಿತಂತೆ. ಆಗ ಆಕೆಗೆ ನೆನಪಾಗಿದ್ದು ರತನ್ ಟಾಟಾ.
ತನ್ನ ಹಳೆಯ ಪ್ರಿಯಕರನ ಬಗ್ಗೆ ಕೆರೋಲಿನ್ ಆನ್ಲೈನ್ನಲ್ಲಿ ಮಾಹಿತಿ ಹುಡುಕುತ್ತಿದ್ದಾಗ, ಆತ ದೊಡ್ಡ ಉದ್ಯಮಿ ಆಗಿರುವುದು, ಟಾಟಾ ಸನ್ಸ್ ಛೇರ್ಮನ್ ಆಗಿರುವ ಸಂಗತಿ ತಿಳಿಯುತ್ತದೆ. ಇಮೇಲ್ ಮೂಲಕ ಆಕೆ ರತನ್ರನ್ನು ಸಂಪರ್ಕಿಸಿ, ಭಾರತಕ್ಕೆ ತಾನು ಬರುತ್ತಿರುವ ಪ್ಲಾನ್ ತಿಳಿಸುತ್ತಾರೆ. ಅಲ್ಲಿಂದ ಅವರಿಬ್ಬರ ಒಡನಾಟ ಹೆಚ್ಚುತ್ತಾ ಹೋಗುತ್ತದೆ.
ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ
ರತನ್ ಟಾಟಾ ಮತ್ತು ಕೆರೋಲಿನ್ ಸಮಯ ಸಂದರ್ಭ ಸಿಕ್ಕಾಗೆಲ್ಲಾ ಭೇಟಿಯಾಗುತ್ತಿರುತ್ತಾರೆ. ರತನ್ ಅಮೆರಿಕಕ್ಕೆ ಹೋದಾಗೆಲ್ಲಾ ಕೆರೋಲಿನ್ರನ್ನು ಡಿನ್ನರ್ಗೆ ಕರೆದುಕೊಂಡು ಹೋಗುತ್ತಿದ್ದರು. ಕೆರೋಲಿನ್ ಕೂಡ ಆಗಾಗ್ಗೆ ಭಾರತಕ್ಕೆ ಬಂದು ರತನ್ರನ್ನು ಕಂಡು ಹೋಗುತ್ತಿದ್ದರು. ಕೊನೆಯವರೆಗೂ ಅವರಿಬ್ಬರ ಬಾಂಧವ್ಯ ಗಟ್ಟಿಯಾಗಿಯೇ ಉಳಿದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ