ಸೌರಶಕ್ತಿ ಸಾಧಿಸುವ ಕನಸು ನನಸಾಗುತ್ತಿದೆ: ಅಂತರರಾಷ್ಟ್ರೀಯ ಸೌರ ಮೈತ್ರಿ ಸಭೆಯಲ್ಲಿ ಪ್ರಹ್ಲಾದ್ ಜೋಷಿ
Pralhad Joshi at International Solar Alliance: ಸೌರಶಕ್ತಿಯ ಕನಸು ಈಗ ನನಸಾಗಿದೆ. ಸೌರ ಶಕ್ತಿಯಿಂದಾಗಿ ಈ ವಿಶ್ವವು ಹೆಚ್ಚು ಸುಸ್ಥಿರ ಹಾಗೂ ಸ್ವಚ್ಛ ಹಾದಿಯಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಕೇಂದ್ರ ಮರುಬಳಕೆ ಇಂಧನ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸೌರ ಮೈತ್ರಿಯ ಏಳನೇ ಮಹಾಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಜಾಗತಿಕವಾಗಿ ಸೌರ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿರುವುದನ್ನು ಅವರು ತಿಳಿಸಿದ್ದಾರೆ.
ನವದೆಹಲಿ, ನವೆಂಬರ್ 4: ಈ ಹಿಂದೆ ಸೌರ ಶಕ್ತಿ ಎಂಬುದು ಕನಸು ಮಾತ್ರವೇ ಆಗಿತ್ತು. ಈಗ ಅದು ವಾಸ್ತವ ಶಕ್ತಿಯಾಗಿದೆ. ಈ ವಿಶ್ವವು ಹೆಚ್ಚು ಸುಸ್ಥಿರ ಹಾಗೂ ಸ್ವಚ್ಛ ಹಾದಿಯಲ್ಲಿ ಸಾಗಲು ಸೌರಶಕ್ತಿ ನೆರವಾಗುತ್ತಿದೆ ಎಂದು ಕೇಂದ್ರ ಮರುಬಳಕೆ ಇಂಧನ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಆಯೋಜಿಸಲಾದ ಏಳನೇ ಅಂತಾರಾಷ್ಟ್ರೀಯ ಸೌರ ಮೈತ್ರಿ (ISA- International Solar Alliance) ಮಹಾಸಭೆಯ ಆರಂಭಿಕ ಅಧಿವೇಶನವನ್ನು ಉದ್ದೇಶಿಸಿ ಜೋಷಿ ಮಾತನಾಡುತ್ತಿದ್ದರು.
‘ಭಾರತದಾದ್ಯಂತ ನೀವು ಸೂರ್ಯನ ದೇವಸ್ಥಾನಗಳನ್ನು ಕಾಣುತ್ತೀರಿ. ನೀವೆಲ್ಲೇ ಹೋದರೂ ಈ ಸೂರ್ಯ ಇದ್ದೇ ಇರುತ್ತಾನೆ. ಭಾರತದ ಈ ಸಂಪ್ರದಾಯಗಳಿಂದ ನಾವೆಲ್ಲಾ ಪ್ರೇರಣೆ ಪಡೆಯುತ್ತಾ ಮುಂದಡಿ ಇಡೋಣ. ಸೌರ ಶಕ್ತಿಗೆ ಒತ್ತು ಕೊಡುವುದನ್ನು ಮುಂದುವರಿಸೋಣ. ನಮ್ಮ ಜೀವನ ಮಾರ್ಪಾಡಿಸಲು ಮತ್ತು ನಮ್ಮ ಭೂಮಿಯನ್ನು ರಕ್ಷಿಸಲು ಶಕ್ತಿ ಈ ಸೌರಶಕ್ತಿಗೆ ಇದೆ ಎನ್ನುವುದು ಎಲ್ಲರಿಗೂ ಅರಿವಿರಲಿ,’ ಎಂದು ಪ್ರಹ್ಲಾದ್ ಜೋಷಿ ಕರೆ ನೀಡಿದ್ದಾರೆ.
ಸೌರ ಮೈತ್ರಿಯ ಅಧ್ಯಕ್ಷರೂ ಆದ ಪ್ರಹ್ಲಾದ್ ಜೋಷಿ, ಜಾಗತಿಕವಾಗಿ ಸೌರ ಕ್ಷೇತ್ರದಲ್ಲಿ 2023ರಲ್ಲಿ 393 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು 500 ಬಿಲಿಯನ್ ಡಾಲರ್ಗೆ ಏರಲಿದೆ ಎಂದಿದ್ದಾರೆ. ಈ ಹೂಡಿಕೆಗಳಿಂದಾಗಿ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿರುವುದು ಮಾತ್ರವಲ್ಲ, ವೆಚ್ಚವೂ ಕಡಿಮೆ ಆಗುತ್ತಿದೆ ಎಂದಿದ್ದಾರೆ.
#WATCH | Delhi | Union Minister Pralhad Joshi addresses the inaugural session of the 7th General Assembly of the International Solar Alliance.
He says, “Across India, you will find temples dedicated to ‘Surya’, the god that is sun, anywhere and everywhere you go. As we move… pic.twitter.com/1Hkr0Rplfv
— ANI (@ANI) November 4, 2024
ಇದನ್ನೂ ಓದಿ: ಪೇಮೆಂಟ್ ಆಗಿಲ್ಲವೆಂದು ಬಾಂಗ್ಲಾದೇಶಕ್ಕೆ ಪವರ್ ಕಟ್ ಮಾಡಲು ಅದಾನಿ ಯೋಜನೆ
ಸೌರ ಮೈತ್ರಿ ಸ್ಥಾಪನೆಯ ಹಿಂದಿನ ಶಕ್ತಿ ಭಾರತ
ಅಂತಾರಾಷ್ಟ್ರೀಯ ಸೌರ ಮೈತ್ರಿಗೆ 120ಕ್ಕೂ ಹೆಚ್ಚು ದೇಶಗಳು ಕೈಜೋಡಿಸಿವೆ. 2015ರಲ್ಲಿ ನರೇಂದ್ರ ಮೋದಿ ಅವರು ಲಂಡನ್ನ ವೆಂಬ್ಲೀ ಸ್ಟೇಡಿಯಂನಲ್ಲಿ ಭಾಷಣ ಮಾಡುವ ವೇಳೆ ಸೌರ ಮೈತ್ರಿ ನಿರ್ಮಾಣದ ಪ್ರಸ್ತಾಪ ಮಾಡಿದ್ದರು. ಸೂರ್ಯನ ಬೆಳಕು ಹೆಚ್ಚು ಸಿಗುವ ದೇಶಗಳ ಒಂದು ಕೂಟ ಮಾಡಿಕೊಂಡು ಸೌರಶಕ್ತಿ ಉತ್ಪಾದನೆ, ಸಂಶೋಧನೆ ಇತ್ಯಾದಿ ಕಾರ್ಯಗಳನ್ನು ಪರಸ್ಪರ ಸಹಕಾರದೊಂದಿಗೆ ಮಾಡಬೇಕು. ಸೌರಶಕ್ತಿ ಬಳಕೆ ಹೆಚ್ಚಬೇಕು ಎನ್ನುವುದು ಉದ್ದೇಶ. ಹರ್ಯಾಣದಲ್ಲಿ ಐಎಸ್ಎನ ಮುಖ್ಯ ಕಚೇರಿ ಇದೆ. ಭಾರತ ಮತ್ತು ಫ್ರಾನ್ಸ್ ದೇಶಗಳು ಇದರ ಮೂಲ ಸಂಸ್ಥಾಪಕ ದೇಶಗಳು.
ಭೂಮಿಯ ಕರ್ಕಾಟಕ ರೇಖೆಯಿಂದ (Tropic of Cancer) ಹಿಡಿದು ಮಕರ ರೇಖೆಯವರೆಗಿನ (Tropic of Capricon) ವ್ಯಾಪ್ತಿಯಲ್ಲಿ ಹೆಚ್ಚು ಬಿಸಿಲು ಕಾಣುವ ದೇಶಗಳಿವೆ. ಐಎಸ್ಎನಲ್ಲಿ ಈ ದೇಶಗಳೇ ಹೆಚ್ಚು ಇವೆ.
ಇದನ್ನೂ ಓದಿ: ಜಿಯೋ, ಏರ್ಟೆಲ್ ಮುಟ್ಟದ ಜಾಗಕ್ಕೆ ನುಗ್ಗುತ್ತಿರುವ ಬಿಎಸ್ಸೆನ್ನೆಲ್; ಕಾವೇರಿದೆ ಟೆಲಿಕಾಂ ಪೈಪೋಟಿ
ಸೌರಶಕ್ತಿ ಉತ್ಪಾದನೆ ಮತ್ತು ಬಳಕೆಯನ್ನು ಸಾಧ್ಯವಾದಷ್ಟು ಹೆಚ್ಚಿಸುವುದು ಈ ಮೈತ್ರಿಯ ಗುರಿ. ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿ, ಹೊಸ ಆವಿಷ್ಕಾರ ಇತ್ಯಾದಿ ಕಾರ್ಯದಲ್ಲಿ ಪರಸ್ಪರ ಸಹಕಾರ ಕೊಡಲಾಗುತ್ತದೆ. ಪ್ಯಾರಿಸ್ ಒಪ್ಪಂದದಲ್ಲಿ ಭಾರತವು 2030ರೊಳಗೆ ತನ್ನ ಶೇ. 40ರಷ್ಟು ವಿದ್ಯುತ್ ಅಗತ್ಯವನ್ನು ಮರುಬಳಕೆ ಇಂಧನ ಮೂಲಗಳಿಂದ ಪಡೆಯಲು ಬದ್ಧವಾಗಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ