ವಿರಳ ಭೂಖನಿಜಗಳ ರಫ್ತು: ಜಪಾನ್ ಜೊತೆಗೆ ಒಪ್ಪಂದ ರದ್ದುಗೊಳಿಸಲು ಭಾರತ ಮುಂದು; ಕಾರಣ ಏನು?
India conserving rare earth minerals: ವಿರಳ ಭೂಖನಿಜಗಳನ್ನು ಜಪಾನ್ಗೆ ಸರಬರಾಜು ಮಾಡುವುದನ್ನು ನಿಲ್ಲಿಸುವಂತೆ ಐಆರ್ಇಎಲ್ಗೆ ಸರ್ಕಾರ ಸೂಚಿಸಿರುವುದು ತಿಳಿದುಬಂದಿದೆ. ಜಪಾನೀ ಕಂಪನಿಗೆ 13 ವರ್ಷ ಕಾಲ ವಿರಳ ಭೂಖನಿಜ ರಫ್ತು ಮಾಡಲು ಐಆರ್ಇಎಲ್ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಈ ವಸ್ತುಗಳ ಮೈನಿಂಗ್ ಮಾಡುವ ಸಾಮರ್ಥ್ಯ ಕಡಿಮೆ. ಇದಕ್ಕೆ ಬಹಳ ಬೇಡಿಕೆ ಇದ್ದು ಚೀನಾ ಮೇಲೆ ಅವಲಂಬನೆ ಇದೆ. ಹೀಗಾಗಿ, ಇದರ ರಫ್ತನ್ನು ಭಾರತ ನಿಲ್ಲಿಸಿ ದೇಶೀಯ ಮಾರುಕಟ್ಟೆಗೆ ಅದನ್ನು ತಿರುಗಿಸಲು ಮುಂದಾಗಿದೆ.

ನವದೆಹಲಿ, ಜೂನ್ 13: ಜಪಾನ್ ದೇಶಕ್ಕೆ ವಿರಳ ಭೂ ಖನಿಜಗಳನ್ನು (rare earth materials) ಸರಬರಾಜು ಮಾಡುವ ಒಪ್ಪಂದದಿಂದ ಹಿಂದಕ್ಕೆ ಸರಿಯಲು ಭಾರತ ಮುಂದಾಗಿದೆ. ಜಪಾನ್ಗೆ ಈ ಖನಿಜಗಳನ್ನು ರಫ್ತು ಮಾಡಲು ಐಆರ್ಇಎಲ್ ಸಂಸ್ಥೆ ಜಪಾನ್ ಜೊತೆ 13 ವರ್ಷದ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಕೈಬಿಡುವಂತೆ ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಕಂಪನಿಗೆ (IREL) ಸರ್ಕಾರವು ಸೂಚಿಸಿದೆ ಎನ್ನುವ ಸುದ್ದಿ ಕೇಳಿಬಂದಿದೆ.
ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಇತ್ತೀಚೆಗೆ ಕೆಲ ಉದ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಿದ್ರು. ಈ ವೇಳೆ, ರೇರ್ ಅರ್ಥ್ ವಸ್ತುಗಳ ರಫ್ತನ್ನು ನಿಲ್ಲಿಸುವಂತೆ ಐಆರ್ಇಎಲ್ಗೆ ಸೂಚಿಸಿದರೆಂದು ಹೇಳಲಾಗುತ್ತಿದೆ. ಅದರಲ್ಲೂ ಎಲೆಕ್ಟ್ರಿಕ್ ವಾಹನದ ಮೋಟಾರುಗಳಲ್ಲಿನ ಮ್ಯಾಗ್ನೆಟ್ಗಳ ತಯಾರಿಕೆಗೆ ಬಳಸುವ ನಿಯೋಡೈಮಿಯಮ್ ಮೊದಲಾದವನ್ನು ಸರಬರಾಜು ಮಾಡದಂತೆ ಸಚಿವರು ಹೇಳಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ವಿರಳ ಭೂಖನಿಜದೊಂದಿಗೆ ಚೀನಾ ಆಟ; ಇಡೀ ವಿಶ್ವಕ್ಕೆ ಸಂಕಟ; ಭಾರತದಿಂದ ಪರ್ಯಾಯ ಮಾರ್ಗ ಹುಡುಕಾಟ
ಈ ರೇರ್ ಅರ್ಥ್ ವಸ್ತುಗಳ ರಫ್ತು ನಿಲ್ಲಿಸಲು ಯಾಕೆ ಸೂಚನೆ?
ಭೂಮಿಯಲ್ಲಿ ಸಿಗುವ ಎಲಿಮೆಂಟ್ ಅಥವಾ ಮೂಲವಸ್ತುಗಳಲ್ಲಿ 17 ಅನ್ನು ವಿರಳ ಭೂಖನಿಜ ಅಥವಾ ರೇರ್ ಅರ್ಥ್ ಎಲಿಮೆಂಟ್ಸ್ ಎಂದು ಪರಿಗಣಿಸಲಾಗಿದೆ. ಇವು ಹೆಸರು ಸೂಚಿಸುವಂತೆ ವಿರಳ ಇರುತ್ತವೆ ಎಂದಲ್ಲ. ಆದರೆ, ಭೂಮಿಯಲ್ಲಿ ಸಾಕಷ್ಟು ಚದುರಿ ಹೋಗಿರುವುದರಿಂದ ಇವುಗಳನ್ನು ಸಂಗ್ರಹಿಸುವುದು ಅಥವಾ ಮೈನಿಂಗ್ ಮಾಡುವುದು ಬಹಳ ಕಷ್ಟ.
ಈ ವಸ್ತುಗಳಿಗೆ ಬೇಡಿಕೆ ಬರಲು ಇದು ಮಾತ್ರವೇ ಅಲ್ಲ, ಇನ್ನೂ ಹಲವು ಕಾರಣಗಳಿವೆ. ಈ ವಸ್ತುಗಳು ಇವತ್ತಿನ ಹಲವು ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕ್ ವಸ್ತುಗಳಿಗೆ ಬಹಳ ಅವಶ್ಯಕ ಎನಿಸಿದೆ. ಇವುಗಳಿಂದ ಮಾಡುವ ಅಯಸ್ಕಾಂತವು ಬಹಳ ಶಕ್ತಿಶಾಲಿಯಾಗಿರುತ್ತದೆ. ಹೀಗಾಗಿ, ಸಾಕಷ್ಟು ಉತ್ಪನ್ನಗಳ ತಯಾರಿಕೆಗೆ ಇವುಗಳು ಅತ್ಯಗತ್ಯ.
ಇದನ್ನೂ ಓದಿ: ಅಹ್ಮದಾಬಾದ್ ವಿಮಾನ ದುರಂತ; ಏರ್ ಇಂಡಿಯಾ, ವಿಮಾ ಕಂಪನಿಗಳಿಗೆ ನಷ್ಟವೆಷ್ಟು? ಪ್ರಯಾಣಿಕರಿಗೆ ಪರಿಹಾರವೆಷ್ಟು? ಇಲ್ಲಿದೆ ಡೀಟೇಲ್ಸ್
ಭಾರತದಲ್ಲಿ ಈ ವಿರಳ ಭೂಖನಿಜಗಳು ಸಾಕಷ್ಟು ಲಭ್ಯ ಇವೆ. ಆದರೆ, ಅವನ್ನು ಮೈನಿಂಗ್ ಮಾಡುವ ಸಾಮರ್ಥ್ಯ ಕಡಿಮೆ ಇದೆ. ಈ ವಿಚಾರದಲ್ಲಿ ಚೀನಾ ಬಹಳ ಮುಂಚೂಣಿಯಲ್ಲಿದೆ. ವಿಶ್ವಕ್ಕೆ ಬೇಕಾದ ಶೇ. 70ಕ್ಕೂ ಹೆಚ್ಚು ರೇರ್ ಅರ್ಥ್ ಮೆಟೀರಿಯಲ್ಗಳನ್ನು ಚೀನಾ ಪೂರೈಸುತ್ತದೆ. ಭಾರತವು ತನ್ನ ಅಗತ್ಯಗಳಿಗೆ ಚೀನಾ ಮೇಲೆ ಅವಲಂಬಿತವಾಗಿದೆ.
ಚೀನಾ ದೇಶವು ಈ ವಿರಳ ಖನಿಜಗಳ ರಫ್ತಿಗೆ ನಿರ್ಬಂಧ ಹಾಕಿದರೆ ಭಾರತದ ವಾಹನ ಉದ್ಯಮ ಸ್ತಬ್ಧಗೊಳ್ಳುತ್ತದೆ. ಇದು ಈಗಾಗಲೇ ಅನುಭವಕ್ಕೆ ಬಂದಿದೆ. ಇಂಥ ಸಂದರ್ಭದಲ್ಲಿ ನಮ್ಮಲ್ಲಿರುವ ಈ ಖನಿಜಗಳನ್ನು ಬೇರೆ ದೇಶಕ್ಕೆ ಪೂರೈಸುವುದು ಅಸಮಂಜಸ ಎನಿಸುತ್ತದೆ. ಈ ಕಾರಣಕ್ಕೆ ಸರ್ಕಾರವು ಐಆರ್ಇಎಲ್ಗೆ ಈ ವಿರಳ ಖನಿಜಗಳನ್ನು ಜಪಾನ್ಗೆ ರಫ್ತು ಮಾಡದಂತೆ ತಿಳಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




