iPhone sales: ಚೀನಾದಲ್ಲಿ ಐಫೋನ್ ಮತ್ತೆ ನಂ. 1; ವಿವೋ, ಶವೋಮಿ, ಓಪ್ಪೋವನ್ನು ಹಿಂದಿಕ್ಕಿದ ಆ್ಯಪಲ್
Apple iPhones see highest sales in 2025 May: ಆ್ಯಪಲ್ ಕಂಪನಿಯು 2025ರ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಉತ್ತಮ ಮಾರಾಟ ಕಾಣುತ್ತಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐಫೋನ್ ಮಾರಾಟ ಶೇ. 15ರಷ್ಟು ಏರಿಕೆ ಆಗಿದೆ. ಆ್ಯಪಲ್ಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಚೀನಾದಲ್ಲಿ ಐಫೋನ್ ಮಾರಾಟ ಹೆಚ್ಚುತ್ತಿದೆ. ಮೇ ತಿಂಗಳಲ್ಲಿ ಸ್ಥಳೀಯ ಕಂಪನಿಗಳನ್ನು ಮೀರಿಸಿ ಐಫೋನ್ ಹೆಚ್ಚು ಮಾರಾಟ ಕಂಡಿದೆ.

ಬೀಜಿಂಗ್, ಜೂನ್ 13: ಆ್ಯಪಲ್ ಕಂಪನಿಯ ಐಫೋನ್ಗಳು ಚೀನಾ ಮಾರುಕಟ್ಟೆಯಲ್ಲಿ (China smartphone market) ಮತ್ತೆ ಅಗ್ರಸ್ಥಾನಕ್ಕೇರಿವೆ. 2025ರ ಮೇ ತಿಂಗಳಲ್ಲಿ ಚೀನಾದಲ್ಲಿ ಮಾರಾಟವಾದ ಒಟ್ಟಾರೆ ಸ್ಮಾರ್ಟ್ಫೋನ್ಗಳಲ್ಲಿ ಐಫೋನ್ ಮೊದಲ ಸ್ಥಾನ ಪಡೆದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐಫೋನ್ಗಳು ಶೇ. 15ರಷ್ಟು ಮಾರಾಟ ಹೆಚ್ಚಳ ಕಂಡಿವೆ. ಕೋವಿಡ್ ಸಂದರ್ಭದ ನಂತರ ಯಾವುದೇ ಎರಡು ತಿಂಗಳ ಅವಧಿಯಲ್ಲಿ ಐಫೋನ್ ಮಾರಾಟ ಇಷ್ಟು ಹೆಚ್ಚಳ ಆಗಿದ್ದು ಇದೇ ಮೊದಲು ಎನ್ನಲಾಗಿದೆ.
ಆ್ಯಪಲ್ ಕಂಪನಿಗೆ ಅತಿದೊಡ್ಡ ಮಾರುಕಟ್ಟೆ ಅಮೆರಿಕ ಆಗಿದೆ. ಚೀನಾ ನಂತರದ ಸ್ಥಾನ ಬರುತ್ತದೆ. ಇವೆರಡೂ ದೊಡ್ಡ ಮಾರುಕಟ್ಟೆಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳು ಹೆಚ್ಚು ಐಫೋನ್ ಸೇಲ್ ಆಗಿವೆ. ಈ ಕಾರಣಕ್ಕೆ ಒಟ್ಟಾರೆ ಐಫೋನ್ ಮಾರಾಟ ಹೆಚ್ಚಳ ಆಗಿದೆ.
ಭಾರತವೂ ಕೂಡ ಐಫೋನ್ಗೆ ದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಐಫೋನ್ ಮಾರಾಟ ಗಣನೀಯವಾಗಿ ಹೆಚ್ಚಳವಾಗಿದೆ. ಭಾರತ, ಜಪಾನ್ ಹಾಗೂ ಮಧ್ಯಪ್ರಾಚ್ಯ ದೇಶಗಳ ಮಾರುಕಟ್ಟೆಗಳಲ್ಲಿ 2025ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐಫೋನ್ ಮಾರಾಟ ಶೇ. 10ಕ್ಕಿಂತಲೂ ಹೆಚ್ಚಿದೆ.
ಇದನ್ನೂ ಓದಿ: ಕಚ್ಛಾ ತೈಲ ಬೆಲೆ ಶೇ. 13ರಷ್ಟು ಏರಿಕೆ; ದುಬಾರಿಯಾಗುತ್ತಾ ಪೆಟ್ರೋಲ್, ಡೀಸಲ್?
ಎರಡನೇ ಕ್ವಾರ್ಟರ್ನಲ್ಲಿ (ಏಪ್ರಿಲ್ನಿಂದ ಜೂನ್ವರೆಗೆ) ಐಫೋನ್ ಸಾಧನೆ ಉತ್ತಮವಾಗಿದೆ. ಎಂದಿನಂತೆ ಅಮೆರಿಕ ಮತ್ತು ಚೀನಾದ ಮಾರುಕಟ್ಟೆಗಳು ಮುಖ್ಯ ಪಾತ್ರ ವಹಿಸುತ್ತವೆ ಎಂಬುದು ತಜ್ಞರ ಅನಿಸಿಕೆ.
ಚೀನೀ ಕಂಪನಿಗಳಿಂದ ತೀವ್ರ ಪೈಪೋಟಿ
ಚೀನಾದಲ್ಲಿ ಐಫೋನ್ಗೆ ಸ್ಥಳೀಯ ಸ್ಮಾರ್ಟ್ಫೋನ್ ಕಂಪನಿಗಳ ಪೈಪೋಟಿ ತೀವ್ರವಾಗಿದೆ. 2023ರ ಕೊನೆಯ ಕ್ವಾರ್ಟರ್ನಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್) ಆ್ಯಪಲ್ ಅಗ್ರಸ್ಥಾನದಲ್ಲಿ ಇತ್ತು. ಅದಾದ ಬಳಿಕ ಯಾವುದೇ ಕ್ವಾರ್ಟರ್ನಲ್ಲೂ ಆ್ಯಪಲ್ ನಂ. 1 ಸ್ಥಾನಕ್ಕೆ ಬಂದಿಲ್ಲ. 2024ರ ಕೊನೆಯ ಕ್ವಾರ್ಟರ್ನಲ್ಲಿ ಹುವಾವೇ ಜೊತೆ ಆ್ಯಪಲ್ ಅಗ್ರಸ್ಥಾನ ಹಂಚಿಕೊಂಡಿತ್ತು.
ಚೀನಾದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆರೇಳು ಕಂಪನಿಗಳ ಮಧ್ಯೆ ತೀವ್ರ ಪೈಪೋಟಿ ಇದೆ. ಹುವಾವೇ, ಶವೋಮಿ, ಆ್ಯಪಲ್, ಓಪ್ಪೋ, ವಿವೋ ಮತ್ತು ಹಾನರ್ ಕಂಪನಿಗಳು ಬಹುತೇಕ ಸಮಾನ ಮಾರುಕಟ್ಟೆ ಪಾಲು ಹೊಂದಿವೆ. ಇದರಲ್ಲಿ ಆ್ಯಪಲ್ ಬಿಟ್ಟು ಉಳಿದವೆಲ್ಲವೂ ಚೀನೀ ಕಂಪನಿಗಳೇ.
ಇದನ್ನೂ ಓದಿ: ಮೇ ತಿಂಗಳ ಹಣದುಬ್ಬರ ಶೇ. 2.82; ಇದು ಆರು ವರ್ಷದಲ್ಲೇ ಕನಿಷ್ಠ ಬೆಲೆ ಏರಿಕೆ ಮಟ್ಟ
2025ರ ಮೊದಲ ಕ್ವಾರ್ಟರ್ನಲ್ಲಿ ಹುವಾವೇ ಮತ್ತು ಶಿಯೋಮಿ ಕಂಪನಿಗಳು ಶೇ. 19ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಆ್ಯಪಲ್ ಮತ್ತು ಓಪ್ಪೋ ಶೇ. 15 ಪಾಲು ಹೊಂದಿವೆ. ವಿವೋ ಶೇ. 14 ಮತ್ತು ಹಾನರ್ ಶೇ. 13ರಷ್ಟು ಪಾಲು ಹೊಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ