ಮುಂಬೈ, ಮಾರ್ಚ್ 26: ರೇಮಂಡ್ ಸಂಸ್ಥೆಯ ಮುಖ್ಯಸ್ಥ ಗೌತಮ್ ಸಿಂಘಾನಿಯಾ (Gautam Singhania) ಕುಟುಂಬದ ಜಗಳ ಈಗ ಬಹಳ ಜಗಜ್ಜಾಹೀರು ಆಗಿದೆ. ಅಪ್ಪ ಮತ್ತು ಹೆಂಡತಿ ಇಬ್ಬರನ್ನೂ ಗೌತಮ್ ದೂರ ತಳ್ಳಿ ವಿವಾದಿತ ವ್ಯಕ್ತಿ ಎನಿಸಿದ್ದಾರೆ. ಇದೇ ಹೊತ್ತಲ್ಲಿ ತನ್ನ ತಂದೆ ಜೊತೆ ಇರುವ ಫೋಟೋವೊಂದನ್ನು ಗೌತಮ್ ಸಿಂಘಾನಿಯಾ ಕಳೆದ ವಾರ (ಮಾರ್ಚ್ 20) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಗೌತಮ್ ಸಿಂಘಾನಿಯಾ ಮತ್ತು ತಂದೆ ವಿಜಯ್ಪತ್ (Vijaypat Singhania) ಇಬ್ಬರೂ ಮುನಿಸು ಬಿಟ್ಟು ಮತ್ತೆ ಒಂದಾಗಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಸೃಷ್ಟಿಯಾಗುತ್ತಾ ತೊಡಗಿದೆ. ಈ ಹಿನ್ನೆಲೆಯಲ್ಲಿ ವಿಜಯಪತ್ ಸಿಂಘಾನಿಯಾ ಪ್ರತಿಕ್ರಿಯಿಸಿದ್ದು, ಮಗನ ಜೊತೆ ಮತ್ತೆ ಒಂದಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಾನು ಮಗನ ಮನೆಗೆ ಹೋಗಿದ್ದು ನಿಜ. ಆದರೆ, ಅವನ ಜೊತೆ ತಾನು ಭಿನ್ನಾಭಿಪ್ರಾಯ ಬಿಟ್ಟು ಒಂದಾಗುತ್ತಿದ್ದೇನೆ ಎಂಬುದು ಸುಳ್ಳು. ತನ್ನನ್ನು ಉದ್ದೇಶಪೂರ್ವಕವಾಗಿ ಆ ಮನೆಗೆ ಕರೆಸಿಕೊಳ್ಳಲಾಗಿತ್ತು ಎಂದು ಸಂಚಿನ ಶಂಕೆ ಬಿಚ್ಚಿಟ್ಟಿದ್ದಾರೆ ವಿಜಯ್ಪತ್ ಸಿಂಘಾನಿಯಾ.
‘ನನ್ನ ತಂದೆ ಮನೆಗೆ ಬಂದು ನನಗೆ ಆಶೀರ್ವಾದಿಸಿದ್ದು ಖುಷಿಯಾಗಿದೆ. ನಿಮಗೆ ಒಳ್ಳೆಯ ಆರೋಗ್ಯ ಸಿಗಲಿ ಎಂದು ಎಂದಿನಂತೆ ಹಾರೈಸುತ್ತೇನೆ’ ಎಂದು ಗೌತಮ್ ಸಿಂಘಾನಿಯಾ ತಮ್ಮ ಎಕ್ಸ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಮ್ಮ ತಂದೆ ಜೊತೆ ನಿಂತಿರುವ ಫೋಟೋವನ್ನೂ ಲಗತ್ತಿಸಿದ್ದಾರೆ.
Happy to have my father at home today and seek his blessings. Wishing you good health Papa always. pic.twitter.com/c6QOVTNCwo
— Gautam Singhania (@SinghaniaGautam) March 20, 2024
ಇದನ್ನೂ ಓದಿ: ಚೀನಾದ ಯಾವುದೇ ನಗರಕ್ಕಿಂತಲೂ ಮುಂಬೈನಲ್ಲಿ ಅತಿಹೆಚ್ಚು ಬಿಲಿಯನೇರ್ಗಳು; ಜಾಗತಿಕವಾಗಿ ಮುಂಬೈಗೆ ಮೂರನೇ ಸ್ಥಾನ
‘ಮಾರ್ಚ್ 20ರಂದು ನಾನು ಏರ್ಪೋರ್ಟ್ಗೆ ಹೋಗುತ್ತಿದ್ದೆ. ಆಗ ನನ್ನ ಮಗನ ಸಹಾಯಕರು ಜೆಕೆ ಹೌಸ್ಗೆ ಬರುವಂತೆ ಮನವಿ ಮಾಡಿದರು. ನಾನು ನಿರಾಕರಿಸಿದ ಬಳಿಕ ಗೌತಮ್ ಆನ್ಲೈನ್ಗೆ ಬಂದು, ಮನವಿ ಮಾಡಿದ. ಐದು ನಿಮಿಷ ಬಂದು ಒಂದು ಕಪ್ ಕಾಫಿ ಕುಡಿದು ಹೋಗಿ ಎಂದು ಕೇಳಿಕೊಂಡ.
‘ನಾನು ಒಲ್ಲದ ಮನಸ್ಸಿನಿಂದಲೇ ಹೋದೆ. ಗೌತಮ್ ಜೊತೆ ನಾನಿರುವ ದೃಶ್ಯ ಸೆರೆ ಹಿಡಿಯುವ ಉದ್ದೇಶ ಇದೆ ಎಂಬುದು ಗೊತ್ತಾಗಲಿಲ್ಲ. ಕೆಲ ನಿಮಿಷಗಳ ಬಳಿಕ ನಾನು ಅಲ್ಲಿಂದ ನಿರ್ಗಮಿಸಿ ಏರ್ಪೋರ್ಟ್ಗೆ ಹೋದೆ. ಸ್ವಲ್ಪವೇ ಹೊತ್ತಿನಲ್ಲಿ ಇಂಟರ್ನೆಟ್ನಲ್ಲಿ ನಾನು ಗೌತಮ್ ಜೊತೆ ಇರುವ ಫೋಟೋ ಹರಿದಾಡತೊಡಗಿತ್ತು. ನಾವಿಬ್ಬರು ಮತ್ತೆ ಒಂದಾಗಿದ್ದೇವೆಯಾ ಎಂದು ನನಗೆ ಮೆಸೇಜ್ಗಳು ಬರತೊಡಗಿದವು. ಇದೆಲ್ಲವೂ ಸಂಪೂರ್ಣ ಸುಳ್ಳು,’ ಎಂದು ವಿಜಯ್ಪತ್ ಸಿಂಘಾನಿಯಾ ಹೇಳಿದ್ದಾರೆ.
ಆತನ ನಿಜವಾದ ಉದ್ದೇಶ ಏನು ಎಂದು ಗೊತ್ತಿಲ್ಲ. ಜೆಕೆ ಹೌಸ್ಗೆ ನನ್ನನ್ನು ಆತ ಕರೆಸಿದ್ದು ಕಾಫಿಗೂ ಅಲ್ಲ, ಅಥವಾ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲೂ ಅಲ್ಲ. 10 ವರ್ಷದಲ್ಲಿ ಮೊದಲ ಬಾರಿಗೆ ನಾನು ಜೆಕೆ ಹೌಸ್ಗೆ ಕಾಲಿಟ್ಟಿದ್ದು. ಮತ್ತೊಮ್ಮೆ ಅಲ್ಲಿಗೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ ವಿಜಯ್ಪತ್ ಸಿಂಘಾನಿಯಾ.
ಇದನ್ನೂ ಓದಿ: ಅಮೂಲ್ನ ತಾಜಾ ಹಾಲು ಮೊದಲ ಬಾರಿಗೆ ಅಮೆರಿಕದಲ್ಲಿ; ಕೆಎಂಎಫ್ನ ಹಾಲು ವಿದೇಶಗಳಲ್ಲಿ ಸಿಗುತ್ತಾ?
ವಿಜಯ್ಪತ್ ಸಿಂಘಾನಿಯಾ ಅವರು ರೇಮಂಡ್ ಸಂಸ್ಥೆಯ ಸಂಸ್ಥಾಪಕರು. ತಮ್ಮ ಬಹುತೇಕ ಆಸ್ತಿ ಮತ್ತು ಕಂಪನಿಯ ಆಡಳಿತವನ್ನು ಮಗನಿಗೆ ಕೊಟ್ಟಿದ್ದರು. ಅದಾದ ಬಳಿಕ ಗೌತಮ್ ಸಿಂಘಾನಿಯಾ ತನ್ನ ತಂದೆಯನ್ನು ಕಂಪನಿಯಿಂದ ಮತ್ತು ಮನೆಯಿಂದ ಹೊರಹಾಕಿದರು ಎನ್ನುವಂತಹ ಆರೋಪ ಇದೆ. ಒಂದು ಕಾಲದಲ್ಲಿ ಬಿಲಿಯನೇರ್ ಆಗಿದ್ದ ವಿಜಯ್ಪತ್ ಈಗ ಸಾಧಾರಣ ಜೀವನ ನಡೆಸುತ್ತಿದ್ದಾರೆ.
ಇದೇ ವೇಳೆ, ಗೌತಮ್ ಸಿಂಘಾನಿಯಾ ಅವರ ವೈವಾಹಿಕ ಜೀವನ ಕೂಡ ವಿವಾದದ ವಿಚಾರವಾಗಿತ್ತು. ಗೌತಮ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಮನೆಗೆ ಸೇರಿಸುತ್ತಿಲ್ಲ ಎಂದು ಅವರ ಪತ್ನಿ ನವಾಜ್ ಮೋದಿ ಕಳೆದ ವರ್ಷ ಆರೋಪ ಮಾಡಿದ್ದರು. ಅದಾದ ಬಳಿಕ ಗೌತಮ್ ಅವರು ತಾನು ಮತ್ತು ನವಾಜ್ ಮೋದಿ ಪರಸ್ಪರ ಸಮ್ಮತವಾಗಿ ಬೇರೆಯಾಗಿದ್ದೇವೆ ಎಂದು ಹೇಳಿದ್ದರು. ಇವರ ವಿವಾಹ ವಿಚ್ಛೇದನ ಪ್ರಕರಣ ಇನ್ನೂ ಸೆಟಲ್ಮೆಂಟ್ ಆಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ