ನವದೆಹಲಿ, ಜುಲೈ 18: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 17ರಂದು ಬಿಡುಗಡೆ ಮಾಡಿದ ವರದಿ ಭಾರತದ ಆರ್ಥಿಕ ಪ್ರಗತಿಗೆ ಕನ್ನಡಿ ಹಿಡಿದಿದೆ. ಮಳೆ ಅಭಾವ, ಅತಿವೃಷ್ಟಿ ಇತ್ಯಾದಿ ಪ್ರಾಕೃತಿಕ ವೈಪರೀತ್ಯಗಳ ನಡುವೆಯೂ ಭಾರತದ ಆರ್ಥಿಕತೆ ಹುಲುಸಾಗಿ ಬೆಳೆಯುತ್ತಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್ಗಳಲ್ಲಿ ಚಟುವಟಿಕೆಯ ವಿಸ್ತಾರ ಹೆಚ್ಚಾಗಿದೆ ಎಂದೆನ್ನಲಾಗಿದೆ. ಆರ್ಬಿಐನ ಈ ಜುಲೈ ಬುಲೆಟಿನ್ ಪ್ರಕಾರ ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಅಥವಾ ಫಾರೆಕ್ಸ್ ರಿಸರ್ವ್ಸ್ (Forex Reserves) ಬಹಳಷ್ಟು ವೃದ್ಧಿಸುತ್ತಿದೆ. 2022ರ ಅಕ್ಟೋಬರ್ 21ರಿಂದೀಚೆ ಇಲ್ಲಿನ ಫಾರೆಕ್ಸ್ ರಿಸರ್ವ್ಸ್ 71.8 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿದೆ. 2023ರ ಜುಲೈ 7ರವರೆಗಿನ ಲೆಕ್ಕದ ಪ್ರಕಾರ ಭಾರತದಲ್ಲಿ ಫಾರೆಕ್ಸ್ ರಿಸರ್ವ್ಸ್ 596.3 ಬಿಲಿಯನ್ ಡಾಲರ್ ಇದೆ. ಅಂದರೆ ಸುಮಾರು 48.9 ಲಕ್ಷಕೋಟಿ ರುಪಾಯಿಯಷ್ಟು ವಿದೇಶ ವಿನಿಮಯ ಮೀಸಲು ನಿಧಿ ಇದೆ.
ಪ್ರಮುಖ ದೇಶಗಳ ಪೈಕಿ ಫಾರೆಕ್ಸ್ ರಿಸರ್ವ್ಸ್ನಲ್ಲಿ ಅತಿಹೆಚ್ಚಳ ಕಂಡ ಎರಡನೇ ದೇಶ ಭಾರತ ಎಂದು ಆರ್ಬಿಐ ಬುಲೆಟಿನ್ ಜುಲೈ 2023 ವರದಿಯಲ್ಲಿ ತಿಳಿಸಲಾಗಿದೆ. 2023ರಲ್ಲಿ ಭಾರತಕ್ಕೆ ಭೀಕರ ಚಂಡಮಾರುತ ಕಾಟ ಕೊಟ್ಟಿದೆ. ಮಳೆ ಪ್ರಮಾಣ ಕಡಿಮೆ ಆಗಿದೆ. ಆದರೂ ಕೂಡ ಬೆಳವಣಿಗೆ ಕುಂಠಿತಗೊಂಡಿಲ್ಲ. ಒಟ್ಟಾರೆ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ (ರಫ್ತು ಆಮದು ಇತ್ಯಾದಿ ಹಣಕಾಸು ಹೊರಹರಿವು, ಒಳಹರಿವು) ಸ್ಥಿತಿ ಉತ್ತಮಗೊಂಡಿದೆ ಎಂದು ಆರ್ಬಿಐ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಶೇ 28 ರಷ್ಟು ಜಿಎಸ್ಟಿ ಏರಿಕೆಗೆ ಕೇಂದ್ರ ಸರ್ಕಾರದ ವಿರುದ್ಧ ಆನ್ಲೈನ್ ಗೇಮಿಂಗ್ ಸಂಸ್ಥೆಗಳ ಅಸಮಾಧಾನ
ಭಾರತದಲ್ಲಿರುವ 596.3 ಬಿಲಿಯನ್ ಡಾಲರ್ ಮೊತ್ತದ ಫಾರೆಕ್ಸ್ ರಿಸರ್ವ್ಸ್ ವಿಶ್ವದಲ್ಲೇ ನಾಲ್ಕನೇ ಅತಿಹೆಚ್ಚಿನದು. ಅಮೆರಿಕಕ್ಕಿಂತ ಎರಡು ಪಟ್ಟಿಗಿಂತ ಹೆಚ್ಚು ಬೃಹತ್ ಆದುದು. ಚೀನಾ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್ ಬಿಟ್ಟರೆ ಭಾರತವೇ ಅತಿಹೆಚ್ಚು ಮೀಸಲು ನಿಧಿ ಹೊಂದಿರುವುದು.
ಭಾರತಕ್ಕಿರುವ ಮೀಸಲು ನಿಧಿಯು 2023-24ರ ಅವಧಿಯಲ್ಲಿ 9.7 ತಿಂಗಳ ಕಾಲ ಆಮದು ಮಾಡಿಕೊಳ್ಳುವಷ್ಟು ಪ್ರಮಾಣದಲ್ಲಿ ಇದೆ. ಭಾರತದ ಬಾಹ್ಯ ಸಾಲದ ಶೇ. 95ರಷ್ಟು ಪ್ರಮಾಣದಲ್ಲಿ ಫಾರೆಕ್ಸ್ ರಿಸರ್ವ್ಸ್ ಇದೆ.
ವಿದೇಶೀ ಪೋರ್ಟ್ಫೋಲಿಯಾ ಹೂಡಿಕೆಗಳು (ಎಫ್ಪಿಐ) ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಭಾರತೀಯ ಮಾರುಕಟ್ಟೆಯತ್ತ ಹರಿದುಬರುತ್ತಿವೆ. 2023ರ ಜೂನ್ ತಿಂಗಳಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಎಫ್ಪಿಐ ಬಂದಿತ್ತು. ಭಾರತದ ರೀತಿಯ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತಕ್ಕೇ ಅತಿಹೆಚ್ಚು ಎಫ್ಪಿಐ ಹರಿದುಬಂದಿರುವುದು ಎಂದು ಆರ್ಬಿಣ ಬುಲೆಟಿನ್ನಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ