ನವದೆಹಲಿ, ಅಕ್ಟೋಬರ್ 25: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು (Rs 2,000 notes) ಚಲಾವಣೆಯಿಂದ ಸರ್ಕಾರ ಹಿಂಪಡೆದುಕೊಂಡಿರುವ ಬೆನ್ನಲ್ಲೇ ಒಂದು ಸಾವಿರ ಮುಖಬೆಲೆಯ ನೋಟುಗಳ ಬಗ್ಗೆ ಗುಸುಗುಸು ಸುದ್ದಿ ಆಗುತ್ತಿದೆ. ಏಳು ವರ್ಷಗಳ ಹಿಂದೆ ನಿಷೇಧವಾಗಿದ್ದ 1,000 ರೂ ನೋಟುಗಳನ್ನು ಮತ್ತೆ ಮುದ್ರಣ ಮಾಡಿ ಚಲಾವಣೆಗೆ ಬಿಡಬಹುದು ಎಂಬುದು ಸುದ್ದಿ. ಆದರೆ, 1,000 ರೂ ಮುಖಬೆಲೆಯ ನೋಟುಗಳನ್ನು ಮತ್ತೆ ತರುವುದಿಲ್ಲ ಎಂದು ಆರ್ಬಿಐ ಹೇಳಿದೆ.
1,000 ರೂ ನೋಟುಗಳನ್ನು ಮತ್ತೆ ತರುವ ಆಲೋಚನೆ ಆರ್ಬಿಐನಲ್ಲಿ ಇಲ್ಲ ಎಂದು ಎಎನ್ಐ ಸುದ್ದಿಸಂಸ್ಥೆ ತನ್ನ ಮೂಲವನ್ನು ಉಲ್ಲೇಖಿಸಿ ತಿಳಿಸಿದೆ. ಈ ಬಗ್ಗೆ ಅದು ಟ್ವೀಟ್ ಕೂಡ ಮಾಡಿದೆ. ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಆರ್ಬಿಐ ಎಂಪಿಸಿ ಸಭೆಯ ವೇಳೆ 1,000 ರೂ ನೋಟು ವಿಚಾರವನ್ನು ಆರ್ಬಿಐ ಪ್ರಸ್ತಾಪಿಸಿ, ಆ ನೋಟುಗಳ ಮರುಮುದ್ರಣ ಇಲ್ಲ ಎಂದು ಸ್ಪಷ್ಟಪಡಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ತೆರಿಗೆ ಕಳ್ಳತನ ಆರೋಪ; ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ 1 ಲಕ್ಷಕೋಟಿ ರೂ ಲೆಕ್ಕ ಕೇಳಿ ಶೋಕಾಸ್ ನೋಟೀಸ್
ಈಗ ಚಲಾವಣೆಯಲ್ಲಿರುವ 500 ರೂ ನೋಟುಗಳು ಸದ್ಯ ನಗದು ಅವಶ್ಯಕತೆ ಪೂರೈಸಲು ಸಾಕಷ್ಟಾಗುತ್ತವೆ. ಯುಪಿಐ ಇತ್ಯಾದಿ ಡಿಜಿಟಲ್ ವಹಿವಾಟು ಗಣನೀಯವಾಗಿ ಹೆಚ್ಚಿರುವುದರಿಂದ ಜನರಿಗೆ ನಗದಿನ ಅಗತ್ಯವೂ ಕಡಿಮೆ ಆಗಿದೆ. ಹೀಗಾಗಿ, 1,000 ರೂ ನೋಟುಗಳ ಅವಶ್ಯಕತೆ ಇಲ್ಲ ಎಂಬುದು ಆರ್ಬಿಐನ ಅನಿಸಿಕೆ.
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂದಿನ 2,000 ರೂ ಮತ್ತು 500 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ಐತಿಹಾಸಿಕ ನಿರ್ಧಾರ ಪ್ರಕಟಿಸಿದ್ದರು. ದೇಶದ ಬಹುಪಾಲು ನಗದು ಮೊತ್ತವು ಆ ಎರಡು ನೋಟುಗಳಿಂದಲೇ ಆಗಿತ್ತು. ಸಾಕಷ್ಟು ದಿನಗಳ ಕಾಲ ಜನರು ಸರಿಯಾಗಿ ಕ್ಯಾಷ್ ಸಿಗದೇ ಪರದಾಡುವಂತಾಗಿತ್ತು. ಬಳಿಕ ಹೊಸ 500 ರೂ ಮತ್ತು 2,000 ರೂ ಮುಖಬೆಲೆಯ ನೋಟುಗಳನ್ನು ಸರ್ಕಾರ ಮುದ್ರಿಸಿ ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಈ ಮಧ್ಯೆ ಆರ್ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಅಕ್ಟೋಬರ್ 7ರವರೆಗೆ ಎಲ್ಲಾ ಬ್ಯಾಂಕುಗಳಲ್ಲಿ ಈ ನೋಟುಗಳ ವಿನಿಮಯಕ್ಕೆ ಅವಕಾಶ ಕೊಡಲಾಗಿತ್ತು. ಈಗ ದೇಶಾದ್ಯಂತ ಇರುವ 19 ಆರ್ಬಿಐ ಕಚೇರಿಗಳಲ್ಲಿ ಮಾತ್ರ 2,000 ರೂ ನೋಟುಗಳ ವಿನಿಮಯ ಮಾಡಿಕೊಳ್ಳಬಹುದು. ಇಲ್ಲಿಯವರೆಗೆ ಬಹುಪಾಲು 2,000 ರೂ ನೋಟುಗಳು ಆರ್ಬಿಐಗೆ ಮರಳಿವೆ. ಸುಮಾರು 10,000 ಕೋಟಿ ರೂ ಮೊತ್ತದ ನೋಟುಗಳು ಮಾತ್ರವೇ ಬರುವುದು ಬಾಕಿ ಇದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ