ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್​ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ

RBI declares these 3 as safest banks in India: ದೇಶದ ಮೂರು ಅಗ್ರಗಣ್ಯ ಬ್ಯಾಂಕುಗಳನ್ನು ಡೊಮೆಸ್ಟಿಕ್ ಸಿಸ್ಟಮಿಕಲಿ ಇಂಪಾರ್ಟೆಂಟ್ ಬ್ಯಾಂಕುಗಳೆಂದು ಆರ್​ಬಿಐ ವರ್ಗೀಕರಿಸಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳು ದೇಶದ ಅತ್ಯಂತ ಸುರಕ್ಷಿತ ಮತ್ತು ಅತಿ ಮುಖ್ಯ ಬ್ಯಾಂಕುಗಳೆನಿಸಿವೆ. ಈ ಮೂರು ಬ್ಯಾಂಕುಗಳಿಗೆ ಆರ್​​ಬಿಐ ವಿಶೇಷ ಮತ್ತು ಹೆಚ್ಚುವರಿ ಮಾರ್ಗಸೂಚಿ ನೀಡಿದೆ.

ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್​ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ
ಆರ್​ಬಿಐ

Updated on: Dec 04, 2025 | 12:28 PM

ನವದೆಹಲಿ, ಡಿಸೆಂಬರ್ 4: ಭಾರತೀಯ ರಿಸರ್ವ್ ಬ್ಯಾಂಕು (RBI) ಈ ದೇಶದ ಮೂರು ಬ್ಯಾಂಕುಗಳನ್ನು ಬಹಳ ಮುಖ್ಯವೆಂದು ವರ್ಗೀಕರಣ ಮಾಡಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳನ್ನು ವ್ಯವಸ್ಥಿತವಾಗಿ ಅತ್ಯಂತ ಮುಖ್ಯ ಹಣಕಾಸು ಸಂಸ್ಥೆಗಳೆಂದು ಆರ್​ಬಿಐ ಪರಿಗಣಿಸಿದೆ. ಇವುಗಳನ್ನು ಡಿ-ಎಸ್​ಐಬಿ ಅಥವಾ ದೇಶೀಯವಾಗಿ ವ್ಯವಸ್ಥಿತವಾಗಿ ಪ್ರಮುಖ ಬ್ಯಾಂಕುಗಳು ಎಂದು ವರ್ಗೀಕರಿಸಿದೆ. ಆರ್​ಬಿಐ ಪ್ರಕಾರ, ದೇಶದ ಬ್ಯಾಂಕಿಂಗ್ ವಲಯದಲ್ಲಿ ಈ ಮೂರು ಬ್ಯಾಂಕುಗಳು ಬಹಳ ಮುಖ್ಯಸ್ಥಾನ ಹೊಂದಿರುತ್ತವೆ.

ಈ ಮೂರು ಬ್ಯಾಂಕುಗಳ ಪೈಕಿ ಎಸ್​ಬಿಐ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿದೆ. ಎಚ್​ಡಿಎಫ್​ಸಿ ಮತ್ತು ಐಸಿಐಸಿಐ ಪ್ರೈವೇಟ್ ಸೆಕ್ಟರ್ ಬ್ಯಾಂಕುಗಳಾಗಿವೆ. ಕಳೆದ ವರ್ಷದಲ್ಲೂ (2024) ಈ ಮೂರು ಬ್ಯಾಂಕುಗಳನ್ನು ಆರ್​ಬಿಐ ಡಿ-ಎಸ್​ಐಬಿಗಳೆಂದು ವರ್ಗೀಕರಿಸತ್ತು. ಈ ವರ್ಷವೂ ಈ ಸ್ಥಾನಮಾನ ಮುಂದುವರಿದಿದೆ.

ಇದನ್ನೂ ಓದಿ: ಸಹಕಾರಿ ತತ್ವದಲ್ಲಿ ರಸ್ತೆಗಿಳಿದ ಭಾರತ್ ಟ್ಯಾಕ್ಸಿ; ರಾಪಿಡೋ, ಓಲಾ, ಊಬರ್​ಗೆ ಪ್ರಬಲ ಪೈಪೋಟಿ

ಡಿ-ಎಸ್​ಐಬಿಗಳೆಂದು ವರ್ಗೀಕರಿಸಿದರೆ ಏನುಪಯೋಗ?

ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳು ಭಾರತದ ಅತಿದೊಡ್ಡ ಬ್ಯಾಂಕುಗಳೆನಿಸಿವೆ. ಭಾರತದ ಆರ್ಥಿಕತೆ ಸರಾಗವಾಗಿ ಕೆಲಸ ಮಾಡಲು ಈ ಬ್ಯಾಂಕುಗಳ ಪಾತ್ರ ಬಹಳ ಮಹತ್ವದ್ದು. ಈ ಬ್ಯಾಂಕುಗಳು ವಿಫಲವಾದರೆ ದೇಶದ ಹಣಕಾಸು ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ, ಈ ಮೂರು ಬ್ಯಾಂಕುಗಳು ವಿಫಲವಾಗದಂತೆ ವಿಶೇಷ ಎಚ್ಚರ ವಹಿಸಬಹುದು. ವಿಶೇಷ ಕ್ರಮಗಳನ್ನು ಕೈಗೊಂಡು ಈ ಬ್ಯಾಂಕುಗಳು ಕುಸಿಯದಂತೆ ನೋಡಿಕೊಳ್ಳಬಹುದು. ಹಾಗೆಯೇ, ಈ ಬ್ಯಾಂಕುಗಳಿಗೆ ಆರ್​ಬಿಐ ಹೆಚ್ಚುವರಿ ಮಾರ್ಗಸೂಚಿಗಳನ್ನು ನೀಡುತ್ತದೆ.

ಈ ಮೂರು ಬ್ಯಾಂಕುಗಳಿಗೆ ಆರ್​ಬಿಐನ ಹೆಚ್ಚುವರಿ ಮಾರ್ಗಸೂಚಿಗಳೇನು?

ಈ ಮೂರು ಡಿ-ಎಸ್​ಐಬಿಗಳಿಗೆ ಆರ್​ಬಿಐ ವಿಶೇಷ ಮಾರ್ಗಸೂಚಿಗಳನ್ನು ನೀಡುತ್ತದೆ. ಅದರ ಪ್ರಕಾರ, ಕ್ಯಾಪಿಟಲ್ ಕನ್ಸರ್ವೇಶನ್ ಬಫರ್ ಜೊತೆಗೆ ಹೆಚ್ಚುವರಿ ಸಿಇಟಿ1 (ಕಾಮನ್ ಈಕ್ವಿಟಿ ಟಯರ್1) ಅನ್ನೂ ಇರಿಸುವ ಅವಶ್ಯಕತೆ ಇರುತ್ತದೆ.

ಇದನ್ನೂ ಓದಿ: ರಾಕೆಟ್ ಸ್ಲೆಡ್ ಮೂಲಕ ಏರ್​ಕ್ರಾಫ್ಟ್ ಎಸ್ಕೇಪ್ ಸಿಸ್ಟಂ ಪರೀಕ್ಷಿಸುವ ಸಾಮರ್ಥ್ಯ ಸಾಬೀತುಪಡಿಸಿದ ಭಾರತ

ಕ್ಯಾಪಿಟಲ್ ಕನ್ಸರ್ವೇಶನ್ ಬಫರ್ ಎಂದರೆ ಒಂದು ಬ್ಯಾಂಕು ಅಕಸ್ಮಾತ್ ಆಗಿ ನಷ್ಟ ಎದುರುಗೊಂಡರೆ ಅದರಿಂದ ಪಾರಾಗಲು ಮುನ್ನೆಚ್ಚರಿಕೆಯಾಗಿ ಇರಿಸಿಕೊಳ್ಳುವ ಕನಿಷ್ಠ ಮಟ್ಟದ ಹೆಚ್ಚುವರಿ ಬಂಡವಾಳವಾಗಿರುತ್ತದೆ. ಇನ್ನು, ಸಿಇಟಿ1 ಅಥವಾ ಕಾಮನ್ ಈಕ್ವಿಟಿ ಟಯರ್​ನಲ್ಲಿ ಸಾಮಾನ್ಯ ಷೇರುಗಳು ಹಾಗೂ ಲಾಭಾಂಶಗಳು ಇರುತ್ತವೆ. ಈ ಮೂರು ಬ್ಯಾಂಕುಗಳು ಸಿಇಟಿ1 ಅನ್ನು ತುಸು ಹೆಚ್ಚು ಇಟ್ಟುಕೊಂಡಿರಬೇಕು ಎಂಬುದು ಆರ್​ಬಿಐನ ಮಾರ್ಗಸೂಚಿ ನಿರ್ದಿಷ್ಟಪಡಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ