RBI: ಮೊಬೈಲ್​ಗಿದ್ದ ಪೋರ್ಟಬಿಲಿಟಿ ಕ್ರೆಡಿಟ್ ಕಾರ್ಡ್​ಗೂ ಬರಲಿದೆಯಾ? ಆರ್​ಬಿಐ ಹೊರಡಿಸಿದ ಕರಡು ಅಧಿಸೂಚನೆಯಲ್ಲೇನಿದೆ?

|

Updated on: Jul 06, 2023 | 11:05 AM

RBI vs Card Networks: ಬ್ಯಾಂಕುಗಳು ಮುಂಚಿತವಾಗಿ ಕಾರ್ಡ್ ನೆಟ್ವರ್ಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತಿಲ್ಲ. ಗ್ರಾಹಕರಿಗೆ ವಿವಿಧ ನೆಟ್ವರ್ಕ್​ಗಳ ಆಯ್ಕೆ ಅವಕಾಶ ಒದಗಿಸಬೇಕು ಎಂಬಂತಹ ಕರಡು ಪ್ರಸ್ತಾವವನ್ನು ಆರ್​ಬಿಐ ಪ್ರಕಟಿಸಿದೆ.

RBI: ಮೊಬೈಲ್​ಗಿದ್ದ ಪೋರ್ಟಬಿಲಿಟಿ ಕ್ರೆಡಿಟ್ ಕಾರ್ಡ್​ಗೂ ಬರಲಿದೆಯಾ? ಆರ್​ಬಿಐ ಹೊರಡಿಸಿದ ಕರಡು ಅಧಿಸೂಚನೆಯಲ್ಲೇನಿದೆ?
ಕ್ರೆಡಿಟ್ ಕಾರ್ಡ್
Follow us on

ನವದೆಹಲಿ: ಯಾವ ನೆಟ್ವರ್ಕ್​ನ ಕಾರ್ಡ್ ಬೇಕೆಂಬುದನ್ನು ಗ್ರಾಹಕರೇ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುವ ನಿಟ್ಟಿನಲ್ಲಿ ಆರ್​ಬಿಐ ನಿಯಮ ರೂಪಿಸಲು ಮುಂದಾಗಿದೆ. ಕ್ರೆಡಿಟ್ ಕಾರ್ಡ್ ಒದಗಿಸುವ ಬ್ಯಾಂಕು ಇತ್ಯಾದಿ ಸಂಸ್ಥೆಗಳಿಗೂ ವೀಸಾ, ಮಾಸ್ಟರ್​ಕಾರ್ಡ್ ಇತ್ಯಾದಿ ಕಾರ್ಡ್ ನೆಟ್ವರ್ಕ್ ಸಂಸ್ಥೆಗಳ (Card Network Companies) ಮಧ್ಯೆ ಮುಂಚಿತವಾಗೇ ಒಪ್ಪಂದವಾಗುವುದನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಟಿದೆ. ಆರ್​ಬಿಐ ಜುಲೈ 5ರಂದು ಕರಡು ನಿಯಮಗಳನ್ನು ರೂಪಿಸಿದ್ದು ಅದರ ಪ್ರಕಾರ ಕಾರ್ಡ್ ನೀಡುಗರು ಮತ್ತು ಕಾರ್ಟ್ ನೆಟ್ವರ್ಕ್ ಮಧ್ಯೆ ವಿಶೇಷ ಒಪ್ಪಂದವಾಗಬಾರದು ಎಂಬುದೂ ಸೇರಿದಂತೆ ಹಲವು ಬದಲಾವಣೆಗಳನ್ನು ತರಲಾಗಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪ್ರೀಪೇಡ್ ಕಾರ್ಡ್ ವಿತರಿಸುವ ಬ್ಯಾಂಕು ಹಾಗು ಬ್ಯಾಂಕೆತರ ಹಣಕಾಸು ಸಂಸ್ಥೆಗಳೆಲ್ಲದಕ್ಕೂ ಇದು ಅನ್ವಯ ಆಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವೆಬ್​ಸೈಟ್​ನಲ್ಲಿ ಈ ಕರಡು ಸುತ್ತೋಲೆಯನ್ನು ಹಾಕಿದ್ದು, ಸಂಬಂಧಿಸಿದ ಸಂಸ್ಥೆಗಳು ಆಗಸ್ಟ್ 4ರೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಬೇಕೆಂದು ಕೇಳಿದೆ. ಇದಾದ ಬಳಿಕ ಅಗತ್ಯಬಿದ್ದಲ್ಲಿ ಈ ನಿಯಮಗಳಲ್ಲಿ ಬದಲಾವಣೆ ಮಾಡಲು ಆರ್​ಬಿಐ ಸಿದ್ಧವಿದೆ.

ಕಾರ್ಡ್ ವಿಚಾರದಲ್ಲಿ ಆರ್​ಬಿಐ ಪ್ರಸ್ತಾವನೆಯಲ್ಲಿ ಏನಿದೆ?

  1. ಕಾರ್ಡ್ ಒದಗಿಸುವವರು ಗ್ರಾಹಕರಿಗೆ ಬೇರೆ ಕಾರ್ಡ್ ನೆಟ್ವರ್ಕ್​ಗಳ ಸೇವೆ ಲಭ್ಯವಾಗಲು ಸಾಧ್ಯವಾಗದಂತೆ ಕಾರ್ಡ್ ನೆಟ್ವರ್ಕ್​ಗಳೊಂದಿಗೆ ಒಪ್ಪಂದ ಮಾಡಿಕೊಂಡಿರಬಾರದು.
  2. ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್ವರ್ಕ್​ಗಳ ಕಾರ್ಡ್​ಗಳನ್ನು ವಿತರಿಸಬೇಕು.
  3. ಅರ್ಹ ಗ್ರಾಹಕರಿಗೆ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್ವರ್ಕ್​ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕೊಡಬೇಕು. ಕಾರ್ಡ್ ಖರೀದಿಸುವ ಸಮಯದಲ್ಲಿ ಅಥವಾ ಯಾವುದೇ ಸಮಯದಲ್ಲಿ ಗ್ರಾಹಕರಿಗೆ ಈ ಅವಕಾಶ ಇರಬೇಕು.

ಇದನ್ನೂ ಓದಿFD: ಫಿಕ್ಸೆಡ್ ಡೆಪಾಸಿಟ್​ನಿಂದ ಬರೋ ಬಡ್ಡಿಗೆ ಎಷ್ಟು ಟ್ಯಾಕ್ಸ್ ಕಟ್ ಆಗುತ್ತೆ? ಟಿಡಿಎಸ್ ಕಡಿತಗೊಳ್ಳದಿರಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಇಲ್ಲಿ ಮೂರನೇ ಅಂಶದಲ್ಲಿ ಕಾರ್ಡ್ ಪೋರ್ಟಬಿಲಿಟಿ ಅವಕಾಶ ಕಾಣಬಹುದು. ಅಂದರೆ ನಾವು ಮೊಬೈಲ್ ನಂಬರ್ ಬದಲಿಸದೆಯೇ ಮೊಬೈಲ್ ನೆಟ್ವರ್ಕ್ ಪೋರ್ಟ್ ಮಾಡುವ ರೀತಿಯಲ್ಲೇ ನಮ್ಮ ಕಾರ್ಡ್ ನೆಟ್ವರ್ಕ್ ಅನ್ನೂ ಬದಲಾಯಿಸಲು ಸಾಧ್ಯವಾಗಿಸುತ್ತದೆ ಆರ್​ಬಿಐನ ಈ ಕರಡು ಪ್ರಸ್ತಾವ.

ಕಾರ್ಡ್ ನೆಟ್ವರ್ಕ್​ಗಳ ಮಧ್ಯೆ ಪೈಪೋಟಿ ಹೆಚ್ಚಿಸುವುದು ಹಾಗು ಗ್ರಾಹಕರಿಗೆ ಆಯ್ಕೆ ಸ್ವಾತಂತ್ರ್ಯ ಒದಗಿಸುವುದು ಆರ್​ಬಿಐನ ಈ ಹೆಜ್ಜೆಯ ಹಿಂದಿನ ಉದ್ದೇಶ ಎನ್ನಲಾಗಿದೆ. ಭಾರತದಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಕಾರ್ಡ್​ಗಳನ್ನು ಗ್ರಾಹಕರಿಗೆ ಒದಗಿಸುತ್ತವೆ. ಆದರೆ, ಕಾರ್ಡ್ ನೆಟ್ವರ್ಕ್ ಯಾವುದೆಂದು ಬ್ಯಾಂಕುಗಳೇ ನಿರ್ಧರಿಸುತ್ತವೆ. ಭಾರತದಲ್ಲಿ ಸದ್ಯ ಇರುವ ಕಾರ್ಡ್ ನೆಟ್ವರ್ಕ್​ಗಳಲ್ಲಿ ವೀಸಾ, ಮಾಸ್ಟರ್​ಕಾರ್ಡ್, ರುಪೇ, ಅಮೆರಿಕನ್ ಎಕ್ಸ್​ಪ್ರೆಸ್ ಮತ್ತು ಡೈನರ್ಸ್ ಕ್ಲಬ್ ಸಂಸ್ಥೆಗಳಿವೆ. ಈ ಪೈಕಿ ವೀಸಾ ಮತ್ತು ಮಾಸ್ಟರ್ ಕಾರ್ಡ್ ಭಾರತದ ಕಾರ್ಡ್ ನೆಟ್ವರ್ಕ್ ಕ್ಷೇತ್ರದಲ್ಲಿ ಬಹಳ ಹಿಡಿತ ಹೊಂದಿವೆ.

ಇದನ್ನೂ ಓದಿChina Action: ವಿಶ್ವ ಎಲೆಕ್ಟ್ರಾನಿಕ್ಸ್ ಅಡ್ಡೆಯಾಗಲು ಹೊರಟ ಭಾರತಕ್ಕೆ ಚೀನಾ ಅಡೆತಡೆ; ಗ್ಯಾಲಿಯಂ, ಜರ್ಮೇನಿಯಂ ರಫ್ತಿಗೆ ನಿರ್ಬಂಧ

ರುಪೇ ಈಗೀಗ ಜನಪ್ರಿಯವಾಗುತ್ತಿದೆ. ರುಪೇ ನೆಟ್ವರ್ಕ್​ನ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪಾವತಿಗೆ ಅಳವಡಿಸುವ ಅವಕಾಶ ಇದೆ. ಈ ಸೌಲಭ್ಯವನ್ನು ವೀಸಾ ಮತ್ತು ಮಾಸ್ಟರ್​ಕಾರ್ಡ್ ಸಂಸ್ಥೆಗಳು ಒದಗಿಸುತ್ತಿಲ್ಲ. ಆರ್​ಬಿಐನ ಈ ಪ್ರಸ್ತಾವಿತ ನಿಯಮಗಳು ಜಾರಿಯಾದರೆ ರುಪೇ ಕಾರ್ಡ್​ಗಳ ವಿತರಣೆ ಬಹಳಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ