ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯ (RBI Monetary Policy Committee) 3 ದಿನಗಳ ಸಭೆ ಇಂದು ಮುಕ್ತಾಯಗೊಳ್ಳುತ್ತಿದೆ. ಜೂನ್ 6ರಂದು ಆರಂಭವಾದ ಈ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದಲ್ಲಿ ಎಂಪಿಸಿಯ ಐವರು ಸದಸ್ಯರು ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಬಗ್ಗೆ ಗಹನವಾಗಿ ಚರ್ಚಿಸಿದ್ದಾರೆ. ಹಣಕಾಸು ಹರಿವು, ಹಣದುಬ್ಬರ ನಿಯಂತ್ರಣ, ಫೋರೆಕ್ಸ್ ನಿಧಿ ಹೆಚ್ಚಳ ಇತ್ಯಾದಿ ಬಗ್ಗೆ ಚರ್ಚೆಗಳಾಗಿವೆ. ಇದೆಲ್ಲದರ ನಡುವೆ ಎಲ್ಲರ ಗಮನವು ರೆಪೋ ದರದ ಬಗ್ಗೆ ಆರ್ಬಿಐ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನೆಟ್ಟಿದೆ. ವರದಿಗಳ ಪ್ರಕಾರ ಶೇ. 6.50ರಷ್ಟಿರುವ ರೆಪೋ ದರದಲ್ಲಿ (Repo Rate) ಈ ಬಾರಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ರೆಪೋ ದರ ಹೆಚ್ಚಿಸುವ ಗೋಜಿಗೆ ಹೋಗದಿರಬಹುದು.
ರೆಪೋ ದರ ಎಂಬುದು ಆರ್ಬಿಐನಂತಹ ಸೆಂಟ್ರಲ್ ಬ್ಯಾಂಕುಗಳಿಗೆ ಇರುವ ಪ್ರಮುಖ ಅಸ್ತ್ರವಾಗಿದೆ. ಇದನ್ನು ಸುಖಾಸುಮ್ಮನೆ ಬಳಸುವುದಿಲ್ಲ. ರೆಪೋ ದರ ಏರಿದರೆ ಹಣಕಾಸು ಮಾರುಕಟ್ಟೆಯಲ್ಲಿ ಬೇರೆ ರೀತಿಯ ಪರಿಣಾಮ ಬೀರುತ್ತದೆ. ರೆಪೋ ದರ ಕಡಿಮೆ ಆದರೆ ಇನ್ನೊಂದು ರೀತಿಯ ಪರಿಣಾಮ ಬೀರುತ್ತದೆ. ಶೇ. 7ಕ್ಕಿಂತ ಮೇಲ್ಮಟ್ಟದಲ್ಲಿದ್ದ ಹಣದುಬ್ಬರವನ್ನು ಶೇ. 4.7ಕ್ಕೆ ತರಲು ಆರ್ಬಿಐ ಉಪಯೋಗಿಸಿದ್ದು ಇದೇ ರೆಪೋ ದರ ಏರಿಕೆಯ ಅಸ್ತ್ರವನ್ನೇ. ಶೇ. 4.7 ಎಂಬುದು ಅರ್ಬಿಐ ಇಟ್ಟುಕೊಂಡಿದ್ದ ಗುರಿಯ ವ್ಯಾಪ್ತಿಯಲ್ಲಿಯೆ ಇದೆ. ಹೀಗಾಗಿ, ರೆಪೋ ದರದ ಸತತ ಏರಿಕೆಗೆ ಆರ್ಬಿಐ ಸದ್ಯಕ್ಕೆ ಅಲ್ಪವಿರಾಮ ಇಡಲು ಮುಂದಾಗಬಹುದು.
ಇದನ್ನೂ ಓದಿ: MSP List: ಕೇಂದ್ರದಿಂದ ಎಂಎಸ್ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ
ಈಗ ಮಳೆಗಾಲ ಶುರುವಾಗುತ್ತಿರುವುದರಿಂದ ಆರ್ಬಿಐ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಮಳೆ ಪ್ರಮಾಣ ಚೆನ್ನಾಗಿ ಬಂದರೆ ಹಣದುಬ್ಬರ ಇನ್ನಷ್ಟು ಇಳಿಯಬಹುದು. ಹಾಗೇನಾದರೂ ಆದಲ್ಲಿ ಇನ್ನೆರಡು ತಿಂಗಳಿಗೆ ನಡೆಯುವ ಮುಂದಿನ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಇಳಿಸುವ ಸಾಧ್ಯತೆಯೂ ಇರುತ್ತದೆ. ಒಂದು ವೇಳೆ ಮಳೆ ನಿರೀಕ್ಷಿತ ರೀತಿಯಲ್ಲಿ ಆಗದೇ ಕೃಷಿ ಉತ್ಪಾದನೆ ಕಡಿಮೆ ಆಗಿಬಿಟ್ಟರೆ ಅದರ ಪರಿಣಾಮವಾಗಿ ಹಣದುಬ್ಬರ ಶೇ 5ಕ್ಕಿಂತ ಹೆಚ್ಚಾಗಬಹುದು. ಆಗ ಆರ್ಬಿಐ ಮುಂದಿನ ಸಭೆಯಲ್ಲಿ ರೆಪೋ ದರ ಹೆಚ್ಚಿಸುವ ಕ್ರಮ ಕೈಗೊಳ್ಳಬಹುದು.
ಇಂದು ಆರ್ಬಿಐ ಎಂಪಿಸಿ ಸಭೆಯ ನಿರ್ಧಾರಗಳು ಪ್ರಕಟವಾಗಲಿದ್ದು, ಸಾಕಷ್ಟು ಪಾಸಿಟಿವ್ ನಿರೀಕ್ಷೆಗಳಿರುವ ಹಿನ್ನೆಲೆಯಲ್ಲಿ ಷೇರುಪೇಟೆ ಗರಿಗೆದರಿದೆ. ನಿನ್ನೆ ಜೂನ್ 6ರಂದು ಸೆನ್ಸೆಕ್ಸ್ ಸೂಚ್ಯಂಕ 63,000 ಅಂಕಗಳ ಮಟ್ಟಕ್ಕೆ ಹೋಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ ಈ ಮಟ್ಟ ಮುಟ್ಟಿದ್ದು. ಇನ್ನು, ನಿಫ್ಟಿ50 ಸೂಚ್ಯಂಕ ಕಳೆದ ಬಾರಿಯ ಆರ್ಬಿಐ ಎಂಪಿಸಿ ಸಭೆಯಲ್ಲಿದ್ದುದಕ್ಕಿಂತ ಈ ಬಾರಿ 1,000 ಅಂಕಗಳನ್ನು ಹೆಚ್ಚು ಮಾಡಿಕೊಂಡಿರುವುದು ವಿಶೇಷ.
ಇದೇ ಸಕಾರಾತ್ಮಕ ಪರಿಣಾಮಗಳು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪತ್ರಿಕಾಗೋಷ್ಠಿ ಬಳಿಕವೂ ಮುಂದುವರಿಯುತ್ತದಾ ಕಾದುನೋಡಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:47 am, Thu, 8 June 23