Repo Rate: ರೆಪೋ ದರ ಶೇ. 6.5ರಲ್ಲೇ ಮುಂದುವರಿಕೆ; ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆರ್ಥಿಕ ಬೆಳವಣಿಗೆ ಬಗ್ಗೆ ಸಮಾಧಾನಕರ ಮಾತು
RBI Governor Shaktikanta Das Press Meet: ರೆಪೋ ದರ ನಿರೀಕ್ಷೆಯಂತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ರೆಪೋ ದರ ಶೇ. 6.5ರಲ್ಲಿ ಮುಂದುವರಿಸಲು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದಾರೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಜೂನ್ 6ರಿಂದ 3 ದಿನಗಳ ಕಾಲ ನಡೆದ ಆರ್ಬಿಐನ ಹಣಕಾಸು ನೀತಿ ಸಮಿತಿ ಸಭೆ (RBI Monetary Policy Committee) ಇಂದು ಮುಕ್ತಾಗೊಂಡ ಬಳಿಕ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪತ್ರಿಕಾಗೋಷ್ಠಿ ನಡೆಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ಹಣದುಬ್ಬರ ಕಡಿಮೆ ಆಗಿರುವುದರಿಂದ ಈ ಬಾರಿ ಬಡ್ಡಿ ದರ ಏರಿಕೆಯನ್ನು ನಿಲ್ಲಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ರೆಪೋ ದರ ಮಾತ್ರವಲ್ಲ ರಿವರ್ಸ್ ರಿಪೋ ಮತ್ತಿತರ ದರಗಳಲ್ಲೂ ಬದಲಾವಣೆಗಳಾಗಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ಶಕ್ತಿಕಾಂತ ದಾಸ್ ಅವರು ಹಣದುಬ್ಬರ ಇಳಿಕೆಯಾದರೂ ಸಮಾಧಾನಪಡುವಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದೂ ಎಚ್ಚರಿಸಿದ್ದಾರೆ. ಹೆಡ್ಲೈನ್ ಹಣದುಬ್ಬರವು ಕಡಿಮೆ ಆಗಿದ್ದರೂ ಅದು ನಮ್ಮ ಗುರಿಗಿಂತ ಮೇಲ್ಮಟ್ಟದಲ್ಲೇ ಇದೆ. ಈ ಹಣದುಬ್ಬರದ ಬಗ್ಗೆ ಅರ್ಜುನನ ಕಣ್ಣಿಡುವುದು ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸೇರಿ ಎಂಪಿಸಿಯ 6 ಸದಸ್ಯರು 3 ದಿನಗಳ ಕಾಲ ನಡೆಸಿದ ಸಭೆಯಲ್ಲಿ ರೆಪೋ ದರ ಯಥಾಸ್ಥಿತಿಯಲ್ಲಿ ಮುಂದುವರಿಸುವ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡರೆನ್ನಲಾಗಿದೆ. ಕಳೆದ ಮೇ ತಿಂಗಳಿಂದೀಚೆ ರೆಪೋ ದರವನ್ನು ಸತತವಾಗಿ ಏರಿಸುತ್ತಾ ಬರಲಾಗಿದೆ. ಈ ಅವಧಿಯಲ್ಲಿ 250 ಬೇಸಿಸ್ ಪಾಯಿಂಟ್ಗಳಷ್ಟು ಏರಿಕೆ ಮಾಡಲಾಗಿದೆ. ಶೇ. 7ಕ್ಕಿಂತ ಹೆಚ್ಚು ಇದ್ದ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಶೇ. 4.7ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ರೆಪೋ ದರದ ಏರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಏನಿದು ರೆಪೋ ದರ?
ರೆಪೋ ದರ ಎಂಬುದು ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಸಾಲಕ್ಕೆ ತೆರಬೇಕಾದ ಬಡ್ಡಿ ದರ. ಇದರಲ್ಲಿ ಹೆಚ್ಚಳವಾದರೆ ಬ್ಯಾಂಕುಗಳಲ್ಲಿನ ಸಾಲದ ಮೇಲಿನ ಬಡ್ಡಿಯೂ ಹೆಚ್ಚಾಗಬಹುದು. ಇನ್ನು, ರಿವರ್ಸ್ ರಿಪೋ ಎಂಬುದು ಕಮರ್ಷಿಯಲ್ ಬ್ಯಾಂಕುಗಳು ಆರ್ಬಿಐನಲ್ಲಿ ಇಡುವ ಠೇವಣಿಗಳಿಗೆ ಸಿಗುವ ಬಡ್ಡಿ ದರ.
ಈ ಹಣಕಾಸು ವರ್ಷದಲ್ಲಿ, ಅಂದರೆ 2023-24ರ ವರ್ಷದಲ್ಲಿ ಭಾರತದಲ್ಲಿ ಹಣದುಬ್ಬರ ಶೇ. 5.1ರಷ್ಟು ಇರಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ. ಇದು ಆರ್ಬಿಐನ ಹಣದುಬ್ಬರ ತಾಳಿಕೆ ಮಿತಿಯೊಳಗೆ ಇದೆಯಾದರೂ ಮುಂಗಾರು ಮಳೆ ಸರಿಯಾಗಿ ಆಗದೇ ಹೋದರೆ ಹಣದುಬ್ಬರ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ ಎನ್ನಲಾಗಿದೆ. ಇನ್ನು, ಆರ್ಬಿಐನ ಮುಂದಿನ ಮಾನಿಟರಿ ಪಾಲಿಸಿ ಕಮಿಟಿ ಸಭೆ 2023 ಆಗಸ್ಟ್ 8ರಿಂದ 10ರವರೆಗೂ ನಡೆಯಲಿದೆ.
ಗರಿಗೆದರಿದ ಷೇರುಮಾರುಕಟ್ಟೆಗಳು
ಇಂದು ಆರ್ಬಿಐ ಎಂಪಿಸಿ ಸಭೆಯ ನಿರ್ಧಾರಗಳು ಪ್ರಕಟವಾಗುವ ಮುನ್ನ ಷೇರುಪೇಟೆ ಗರಿಗೆದರಿತ್ತು. ನಿನ್ನೆ ಜೂನ್ 6ರಂದು ಸೆನ್ಸೆಕ್ಸ್ ಸೂಚ್ಯಂಕ 63,000 ಅಂಕಗಳ ಮಟ್ಟಕ್ಕೆ ಹೋಗಿತ್ತು. ಇಂದೂ ಕೂಡ 300 ಅಂಕಗಳಷ್ಟು ಹೆಚ್ಚಿಗೆ ಆಗಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ ಈ ಮಟ್ಟ ಮುಟ್ಟಿದ್ದು. ಇನ್ನು, ನಿಫ್ಟಿ50 ಸೂಚ್ಯಂಕ ಕಳೆದ ಬಾರಿಯ ಆರ್ಬಿಐ ಎಂಪಿಸಿ ಸಭೆಯಲ್ಲಿದ್ದುದಕ್ಕಿಂತ ಈ ಬಾರಿ 1,000 ಅಂಕಗಳನ್ನು ಹೆಚ್ಚು ಮಾಡಿಕೊಂಡಿರುವುದು ವಿಶೇಷ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:20 am, Thu, 8 June 23