India Born CEO Ivan’s Death: ಜಾನಿ ವಾಕರ್ ರೂವಾರಿ ಮರಣ; ವಿಶ್ವದ ಅತಿದೊಡ್ಡ ಮದ್ಯಕಂಪನಿ ಡಿಯಾಜೀಯೋದ ಸಿಇಒ ಭಾರತ ಸಂಜಾತ ಇವಾನ್ ಮೆನಜೆಸ್ ನಿಧನ
Diageo CEO Ivan Manuel Menezes Passes Away: ಜಾಗತಿಕ ಲಿಕ್ಕರ್ ದೈತ್ಯ ಡಿಯಾಜೀಯೋದ ಸಿಇಒ ಹಾಗೂ ಭಾರತ ಮೂಲದ ಇವಾನ್ ಮ್ಯಾನುಯಲ್ ಮೆನೆಜೆಸ್ ಜೂನ್ 7ರಂದು ನಿಧನರಾಗಿದ್ದಾರೆ. ಪತ್ನಿ ಶಿಬಾನಿ ಹಾಗೂ ಮಕ್ಕಳಾದ ನಿಖಿಲ್ ಹಾಗು ರೋಹಿಣಿ ಅವರನ್ನು ಅಗಲಿದ್ದಾರೆ.
ಲಂಡನ್: ವಿಶ್ವ ಲಿಕ್ಕರ್ ಮಾರುಕಟ್ಟೆಯಲ್ಲಿ ಡಿಯಾಜೀಯೋ ಸಂಸ್ಥೆಯನ್ನು ಮುಂಚೂಣಿಗೆ ತಂದು ನಿಲ್ಲಿಸಿ ಸೈ ಎನಿಸಿದ್ದ ಇವಾನ್ ಮ್ಯಾನುಯಲ್ ಮೆನೆಜಸ್ (Ivan Manuel Menezes) ಇಹಲೋಕದ ಪಯಣ ಮುಗಿಸಿದ್ದಾರೆ. ಡಿಯಾಜೀಯೋದ (Diageo) ಸಿಇಒ ಆಗಿದ್ದ ಇವಾನ್ ಅವರು ಅಲ್ಸರ್ ಕಾಯಿಲೆಯಿಂದ (Stomach Ulcer) ಬಳಲುತ್ತಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನಗೊಂಡಿರುವುದು ತಿಳಿದುಬಂದಿದೆ. 63 ವರ್ಷ ವಯಸ್ಸಾಗಿದ್ದ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕೆಲ ವರ್ಷಗಳಿಂದ ಅವರಿಗೆ ಹೊಟ್ಟೆಯಲ್ಲಿ ಅಲ್ಸರ್ ಬಾಧಿಸುತ್ತಿತ್ತು ಲಂಡನ್ನ ಆಸ್ಪತ್ರೆಯಲ್ಲಿ ಅವರಿಗೆ ಹೊಟ್ಟೆಯಲ್ಲಿ ಅಲ್ಸರ್ ತೆಗೆಯಲು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದು ಫಲಕಾರಿಯಾಗಲಿಲ್ಲ ಎನ್ನಲಾಗಿದೆ.
ಭಾರತ ಮೂಲದ ಇವಾನ್ ಮ್ಯಾನುಯಲ್ ಮೆನೆಜಸ್ ಸಾಧನೆ ಗಮನಾರ್ಹ…
ಇವಾನ್ ಮ್ಯಾನುಯಲ್ ಮೆನೆಜಸ್ 1959 ಜುಲೈ 10ರಂದು ಪುಣೆಯಲ್ಲಿ ಜನಿಸಿದ್ದರು. ಅವರ ತಂದೆ ಮ್ಯಾನುಯಲ್ ಮೆನೆಜಸ್ ಅವರು ಭಾರತೀಯ ರೈಲ್ವೆ ಮಂಡಳಿಯ ಛೇರ್ಮನ್ ಆಗಿದ್ದರು. ದೆಹಲಿಯಲ್ಲಿ ಪದವಿ ಓದಿದ ಇವಾನ್, ಅಹ್ಮದಾಬಾದ್ನ ಐಐಎಂನಲ್ಲಿ ಎಂಬಿಎ ಪಡೆದರು. ಬಳಿಕ ಬ್ರಿಟನ್ನಲ್ಲಿ ಕೆಲ್ಲಾಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಉನ್ನತ ಶಿಕ್ಷಣ ಪಡೆದರು.
ಇವಾನ್ ಮೆನೆಜಸ್ ಅವರ ಸಹೋದರ ವಿಕ್ಟರ್ ಮೆನೆಜಸ್ ಅವರು ಸಿಟಿಬ್ಯಾಂಕ್ನ ಛೇರ್ಮನ್ ಆಗಿದ್ದರು. ಇವಾನ್ ಅವರು ಬ್ರಿಟನ್ ಮತ್ತು ಅಮೆರಿಕದ ಪೌರತ್ವ ಹೊಂದಿದ್ದಾರೆ. ಭಾರತದ ಓಐಸಿ ಕಾರ್ಡ್ ಹೊಂದಿದ್ದಾರೆ. ತಮ್ಮ ಕಾಲೇಜು ಕಾಲದ ಗೆಳತಿಯಾಗಿದ್ದ ಶಿಬಾನಿ ಅವರನ್ನು ವಿವಾಹವಾಗಿರುವ ಇವಾನ್ ಅವರಿಗೆ ನಿಖಿಲ್ ಮತ್ತು ರೋಹಿಣಿ ಎಂಬಿಬ್ಬರು ಮಕ್ಕಳಿದ್ದಾರೆ.
ಜಾನಿ ವಾಕರ್ ಮೊದಲಾದ ಬಲಿಷ್ಠ ಬ್ರ್ಯಾಂಡ್ ಬೆಳೆಸಿದ ಇವಾನ್
ಇವಾನ್ ಮ್ಯಾನುಯಲ್ ಮೆನೆಜೆಸ್ ಅವರು 1997ರಲ್ಲಿ ಡಿಯಾಜೀಯೋ ಕಂಪನಿ ಸೇರಿದರು. 2013ರಲ್ಲೇ ಸಿಇಒ ಪದವಿ ಗಿಟ್ಟಿಸಿದರು. ಇವರ ನಾಯಕತ್ವದಲ್ಲಿ ಡಿಯಾಜೀಯೋ ವಿಶ್ವ ಮದ್ಯ ಮಾರುಕಟ್ಟೆಯಲ್ಲಿ ಭಾರೀ ವಿಸ್ತರಣೆ ಪಡೆಯಿತು. ಲಿಕ್ಕರ್ ಪ್ರಿಯರಿಗೆ ಜಾನಿ ವಾಕರ್ ಹೆಸರು ಕೆಳದೇ ಇದ್ದೀತಾ. ಡಿಯಾಜೀಯೋ ತಯಾರಿಸುವ ಜಾನಿ ವಾಕರ್ ಬ್ರ್ಯಾಂಡ್ ಅನ್ನು ಕಟ್ಟಿ ವಿಶ್ವಖ್ಯಾತವಾಗಿದ್ದು ಭಾರತ ಮೂಲದ ಈ ಸಿಇಒ ಶ್ರಮದಿಂದಲೇ.
ಜಾನಿ ವಾಕರ್ ವಿಸ್ಕಿಯಲ್ಲದೇ ಇತರ ವಿಶ್ವಖ್ಯಾತ ಬ್ರ್ಯಾಂಡ್ಗಳಾದ ಟ್ಯಾಂಕ್ಯುರೇ ಜಿನ್, ಡಾನ್ ಜೂಲಿಯೋ ಟೆಕಿಲಾ ಕೂಡ ಡಿಯಾಜಿಯೋದ್ದೇ ಆಗಿವೆ. ಸ್ಕಾಚ್ ವಿಸ್ಕಿ, ವೋಡ್ಕಾ, ಜಿನ್, ಕೆನಡಿಯ್ ವಿಸ್ಕಿ, ಟೆಕಿಸಾ ಇತ್ಯಾದಿ ಮದ್ಯಪಾನೀಯಗಳಲ್ಲಿ ಡಿಯಾಜೀಯೋದ ಜನಪ್ರಿಯ ಬ್ರ್ಯಾಂಡ್ಗಳಿವೆ. 180ಕ್ಕೂ ಹೆಚ್ಚು ದೇಶಗಳಲ್ಲಿ ಡಿಯಾಜಿಯೋದ 200ಕ್ಕೂ ಹೆಚ್ಚು ಬ್ರ್ಯಾಂಡ್ ಮದ್ಯ ಉತ್ಪನ್ನಗಳು ಮಾರಾಟವಾಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ