ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್​ ಸೇರಿದಂತೆ 4 ಕೋ ಆಪರೇಟಿವ್ ಬ್ಯಾಂಕ್​ ಗ್ರಾಹಕರಿಗೆ ವಿಥ್​ ಡ್ರಾ ಮಿತಿ ಹೇರಿದ ಆರ್​ಬಿಐ

| Updated By: Srinivas Mata

Updated on: Jul 09, 2022 | 5:56 PM

ನಾಲ್ಕು ಕೋ ಆಪರೇಟಿವ್​ ಬ್ಯಾಂಕ್​ಗಳ ಗ್ರಾಹಕರಿಗೆ ಹಣ ವಿಥ್​ಡ್ರಾ ಮಾಡುವುದಕ್ಕೆ ಮಿತಿ ವಿಧಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶ ಹೊರಡಿಸಿದೆ.

ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್​ ಸೇರಿದಂತೆ 4 ಕೋ ಆಪರೇಟಿವ್ ಬ್ಯಾಂಕ್​ ಗ್ರಾಹಕರಿಗೆ ವಿಥ್​ ಡ್ರಾ ಮಿತಿ ಹೇರಿದ ಆರ್​ಬಿಐ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಾಲ್ಕು ಸಹಕಾರಿ ಬ್ಯಾಂಕ್​ಗಳ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಿದೆ. ನವದೆಹಲಿಯ ರಾಮ್‌ಗರ್ಹಿಯಾ ಸಹಕಾರಿ ಬ್ಯಾಂಕ್, ಮುಂಬೈನ ಸಾಹೇಬರಾವ್ ದೇಶಮುಖ ಸಹಕಾರಿ ಬ್ಯಾಂಕ್, ಮುಂಬೈನ ಸಾಂಗ್ಲಿ ಸಹಕಾರಿ ಬ್ಯಾಂಕ್, ಕರ್ನಾಟಕದ ತುಮಕೂರಿನಲ್ಲಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮೇಲೆ ನಿರ್ಬಂಧ ಹೇರಲಾಗಿದೆ. ಆರ್‌ಬಿಐನಿಂದ ಆರು ತಿಂಗಳವರೆಗೆ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಲ್ಲಿ ಠೇವಣಿದಾರರಿಗೆ ಹಿಂಪಡೆಯುವ ಮಿತಿ ಸಹ ಒಳಗೊಂಡಿದೆ. ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಹದಗೆಡುತ್ತಿರುವ ಹಣಕಾಸಿನ ಸ್ಥಿತಿಗತಿಗಳನ್ನು ಗಮನಿಸಿ ಕೇಂದ್ರೀಯ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಅಡಿಯಲ್ಲಿ ನಿರ್ಬಂಧಗಳನ್ನು ಹಾಕಿದೆ.

ಆರ್‌ಬಿಐ ಶುಕ್ರವಾರ ಹೊರಡಿಸಿದ ನಿರ್ದೇಶನದ ಪ್ರಕಾರ, ಜುಲೈ 8, 2022ರಂದು ವ್ಯವಹಾರದ ಅವಧಿಯು ಮುಗಿದ ನಂತರದಲ್ಲಿ ಈ ನಿರ್ಬಂಧವು ಜಾರಿಗೆ ಬಂದಿದೆ. ಆರ್‌ಬಿಐನ ಪೂರ್ವಾನುಮತಿ ಇಲ್ಲದೆ, ಈ ನಾಲ್ಕು ಬ್ಯಾಂಕ್‌ಗಳು ಯಾವುದೇ ಸಾಲವನ್ನು ನೀಡಲು ಅಥವಾ ರಿನೀವಲ್ ಮಾಡಲು, ಹೂಡಿಕೆ ಮಾಡಲು ಅಥವಾ ಹೊಸ ಠೇವಣಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಅಲ್ಲದೆ, ಈ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಠೇವಣಿದಾರರ ಹಿಂಪಡೆಯುವುದಕ್ಕೆ ಮಿತಿಯನ್ನು ವಿಧಿಸಲಾಗಿದೆ.

ರಾಮಗರ್ಹಿಯಾ ಸಹಕಾರಿ ಬ್ಯಾಂಕ್ – ಠೇವಣಿದಾರರು ಗರಿಷ್ಠ 50,000 ರೂ. ವಿಥ್​ಡ್ರಾ ಮಾಡಬಹುದು

ಸಾಹೇಬರಾವ್ ದೇಶಮುಖ್ ಸಹಕಾರಿ ಬ್ಯಾಂಕ್ – ಠೇವಣಿದಾರರಿಗೆ 50,000 ರೂ. ಮಿತಿ ಇದೆ

ಸಾಂಗ್ಲಿ ಸಹಕಾರಿ ಬ್ಯಾಂಕ್- ಪ್ರತಿ ಠೇವಣಿದಾರರಿಗೆ 45,000 ರೂ. ಮಿತಿ ಹಾಕಲಾಗಿದೆ

ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ – ಠೇವಣಿದಾರರು ಗರಿಷ್ಠ 7,000 ರೂ. ವಿಥ್​ಡ್ರಾ ಮಾಡಬಹುದು

ಪ್ರತ್ಯೇಕ ಹೇಳಿಕೆಗಳಲ್ಲಿ ಈ ಬಗ್ಗೆ ತಿಳಿಸಿರುವ ಕೇಂದ್ರ ಬ್ಯಾಂಕ್​, ಆರ್‌ಬಿಐ ನಿರ್ದೇಶನಗಳನ್ನು ಸೆಂಟ್ರಲ್ ಬ್ಯಾಂಕ್‌ನಿಂದ “ಬ್ಯಾಂಕಿಂಗ್ ಪರವಾನಗಿಯ ರದ್ದತಿ ಎಂದು ಅರ್ಥೈಸಿಕೊಳ್ಳಬಾರದು” ಎಂಬುದಾಗಿ ಹೇಳಿದೆ. ಪ್ರತಿಯೊಂದು ಪ್ರಕರಣದಲ್ಲಿ, ಸಂದರ್ಭಗಳಿಗೆ ಅನುಗುಣವಾಗಿ ನಿರ್ದೇಶನಗಳ ಮಾರ್ಪಾಡುಗಳನ್ನು ಪರಿಗಣಿಸಬಹುದು ಎಂದು ಆರ್‌ಬಿಐ ಹೇಳಿದೆ.

Published On - 5:56 pm, Sat, 9 July 22